ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯ ದಾಸೋಹದಲ್ಲಿ ಭಾರಿ ಜನಸಂದಣಿಯಿಂದ ನೂಕುನುಗ್ಗಲು ಉಂಟಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಕುರ್ಚಿಯ ಮೇಲೆ ನಿಂತು ಜನರನ್ನು ನಿಯಂತ್ರಿಸಿದರು. ಅಲ್ಲೇ ಕಚೇರಿ ಕಡತಗಳಿಗೆ ಸಹಿ ಹಾಕಿ ಕರ್ತವ್ಯನಿಷ್ಠೆ ಮೆರೆದರು.

ಕೊಪ್ಪಳ (ಜ.6): ದಕ್ಷಿಣದ ಕುಂಭಮೇಳ ಎಂದೇ ಪ್ರಸಿದ್ಧವಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಇಂದು ಮಧ್ಯಾಹ್ನದಿಂದಲೇ ದಾಸೋಹ ಭವನದ ಮುಂಭಾಗದಲ್ಲಿ ಏಕಾಏಕಿ ಸಾವಿರಾರು ಭಕ್ತರು ಜಮಾಯಿಸಿದ್ದರಿಂದ ಜನದಟ್ಟಣೆ ಉಂಟಾಯಿತು. ಮಹಾಪ್ರಸಾದ ಸ್ವೀಕರಿಸಲು ಭಕ್ತರು ಮುಗಿಬಿದ್ದ ಹಿನ್ನೆಲೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ಚೇರ್ ಮೇಲೆ ನಿಂತು ಭಕ್ತರ ನಿಯಂತ್ರಿಸಿದ ಎಸ್ಪಿ

ಭಕ್ತರ ಸಂಖ್ಯೆ ಹೆಚ್ಚಳ ಗಮನಿಸಿದ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ರಾಮ್ ಎಲ್. ಅರಸಿದ್ದಿ ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು. ಕೇವಲ ಅಧಿಕಾರಿಗಳಿಗೆ ಸೂಚನೆ ನೀಡಿ ಸುಮ್ಮನಾಗದ ಅವರು, ಸ್ವತಃ ದಾಸೋಹ ಭವನದ ಮುಂಭಾಗದಲ್ಲಿ ಫೀಲ್ಡ್‌ಗೆ ಇಳಿದರು. ಭಕ್ತರ ಗುಂಪನ್ನು ನಿಯಂತ್ರಿಸಲು ಮತ್ತು ಎಲ್ಲರಿಗೂ ಕಾಣುವಂತಾಗಲು ಚೇರ್ (ಕುರ್ಚಿ) ಮೇಲೆ ನಿಂತುಕೊಂಡೇ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಿದರು.

ಚೇರ್ ಮೇಲೆಯೇ ಸಾಗಿತು ಕಚೇರಿ ಕೆಲಸ!

ಅಚ್ಚರಿಯ ವಿಷಯವೆಂದರೆ, ಎಸ್ಪಿ ಡಾ ರಾಮ್ ಎಲ್. ಅರಸಿದ್ದಿ ಅವರು ಗಂಟೆಗಳ ಕಾಲ ಚೇರ್ ಮೇಲೆ ನಿಂತುಕೊಂಡೇ ಭಕ್ತರ ಸಾಲನ್ನು ಸುಗಮಗೊಳಿಸಿದರು. ಕೇವಲ ಬಂದೋಬಸ್ತ್ ಅಷ್ಟೇ ಅಲ್ಲದೆ, ತುರ್ತಾಗಿ ವಿಲೇವಾರಿಯಾಗಬೇಕಿದ್ದ ಕಚೇರಿಯ ಪ್ರಮುಖ ಕಡತಗಳಿಗೂ ಸಹ ಚೇರ್ ಮೇಲೆ ನಿಂತುಕೊಂಡೇ ಸಹಿ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದರು. ಎಸ್ಪಿಯವರ ಈ ಕಾರ್ಯವೈಖರಿಯನ್ನು ಕಂಡು ಭಕ್ತರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ಯಾರಿಕೇಡ್ ಅಳವಡಿಕೆ ಬಳಿಕ ಹತೋಟಿಗೆ

ದಾಸೋಹದ ಮುಂಭಾಗದಲ್ಲಿ ಉಂಟಾಗಿದ್ದ ನೂಕುನುಗ್ಗಲನ್ನು ತಡೆಯಲು ಪೊಲೀಸ್ ಇಲಾಖೆ ತಕ್ಷಣವೇ ಹೆಚ್ಚುವರಿ ಬ್ಯಾರಿಕೇಡ್‌ಗಳನ್ನು ಅಳವಡಿಸಿತು. ಎಸ್ಪಿಯವರ ನೇರ ಮೇಲ್ವಿಚಾರಣೆಯಲ್ಲಿ ಪೊಲೀಸರು ಭಕ್ತರನ್ನು ಸಾಲಾಗಿ ದಾಸೋಹಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದರು. ಇದರಿಂದಾಗಿ ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿ ತಿಳಿಯಾಯಿತು ಮತ್ತು ಭಕ್ತರು ಶಾಂತಿಯುತವಾಗಿ ಪ್ರಸಾದ ಸ್ವೀಕರಿಸಲು ಅನುಕೂಲವಾಯಿತು.