Koppal: ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಮಹಾರಥೋತ್ಸವ, 10 ಲಕ್ಷಕ್ಕೂ ಅಧಿಕ ಜನ ಭಾಗಿ
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯ ಮಹಾರಥೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದ್ದು, ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದಾರೆ. ಜಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ 20 ಲಕ್ಷ ರೊಟ್ಟಿ ಮತ್ತು 15 ಲಕ್ಷ ಜಿಲೇಬಿ ವಿತರಿಸಲಾಗುತ್ತಿದೆ.
ಕೊಪ್ಪಳ (ಜ.15): ಇಡೀ ರಾಜ್ಯದಲ್ಲಿ ಗಮನಸೆಳೆಯುವ ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಯ ಮಹಾರಥೋತ್ಸವಕ್ಕೆ ಬುಧವಾರ ಸಂಜೆ ಅದ್ದೂರಿ ಚಾಲನೆ ಸಿಕ್ಕಿದೆ. ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಪ್ರಖ್ಯಾತ ಹಿಂದೂಸ್ತಾನಿ ಗಾಯಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಧಾರವಾಡದ ಪಂಡಿತ್ ಎಂ.ವೆಂಕಟೇಶ್ ಕುಮಾರ್ ಧ್ವಜಾರೋಹಣ ಮಾಡುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿದೆ. ರಥೋತ್ಸವದಲ್ಲಿ ನಾಡಿನ ಹಲವು ಮಠಾಧೀಶರು ಭಾಗಿಯಾಗಿದ್ದಾರೆ. 'ಗವಿಸಿದ್ದೇಶ್ವರ ರಥೋತ್ಸವದಲ್ಲಿ ಭಾಗಿಯಾಗಿದ್ದು ನನ್ನ ಪೂರ್ವಜನ್ಮದ ಪುಣ್ಯ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಗವಿಸಿದ್ದೇಶ್ವರ ಮಠ ಅನ್ನ, ಅಕ್ಷರ ದಾಸೋಹ ಮಾಡುತ್ತಿದೆ. ಅಂಧರ ಶಿಕ್ಷಣ ಸಂಸ್ಥೆ ಮಾಡಲು ಗವಿಸಿದ್ದೇಶ್ವರ ಸ್ವಾಮೀಜಿ ಸಂಕಲ್ಪ ಮಾಡಿದ್ದಾರೆ. ಶ್ರೀಗಳ ಸಂಕಲ್ಪ ಈಡೇರಲಿದೆ ಎಂದು ಹೇಳಿದ್ದಾರೆ.
ಗವಿಸಿದ್ದೇಶ್ವರ ರಥೋತ್ಸವಕ್ಕೆ ಗವಿಸಿದ್ದೇಶ್ವರ ರಥೋತ್ಸವವೇ ಸರಿಸಾಟಿ ಎಂದು ರಥೋತ್ಸವದ ಬಳಿಕ ತುಮಕೂರಿನ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ. ಎಲ್ಲರ ಚಿತ್ತ ಅಜ್ಜನ ಜಾತ್ರೆಯತ್ತ ಇದೆ. ನಾಲ್ಕೈದು ವರ್ಷಗಳಿಂದ ಶ್ರೀಗಳು ಕರೆಯುತ್ತಿದ್ದರು. ಆದರೆ ಈ ವರ್ಷಭಾಗಿಯಾಗಿದ್ದೇನೆ. ಶ್ರೀಗಳು ಬರೀ ಜಾತ್ರೆ ಮಾಡುವುದಿಲ್ಲ. ಅವರು ಜಾಗೃತಿಯ ಜಾತ್ರೆ ಮಾಡುತ್ತಾರೆ ಗವಿಸಿದ್ದೇಶ್ವರ ಮಠ ದೊಡ್ಟದಾಗಿ ಬೆಳೆದಿದೆ ಎಂದು ಹೇಳಿದ್ದಾರೆ.
ಗವಿಸಿದ್ದೇಶ್ವರ ಜಾತ್ರೆ ನಿಮಿತ್ತ ನಡೆಯುವ ರಥೋತ್ಸವಕ್ಕೆ ಅಪಾರ ಪ್ರಮಾಣದ ಭಕ್ತಗಣ ಕಾಯುತ್ತಾ ನಿಂತಿತ್ತು. ಮಠದ ಅಂಗಳದಲ್ಲಿರುವ ರಥ ಬೀದಿಯಲ್ಲಿ ಅಂತಿಮ ಹಂತದ ಸಿದ್ಧತೆಯನ್ನು ಮಾಡಲಾಗಿತ್ತು. ರಥ ಬೀದಿಯ ಇಕ್ಕೆಲಗಳಲ್ಲಿ ರಂಗೋಲಿ ಚಿತ್ತಾರ ಮಾಡಲಾಗಿದೆ. ಶ್ರೀಮಠದ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ರಂಗೋಲಿ ಮೂಡಿದೆ. 250 ಅಡಿ ಉದ್ದದ ಜಾಗದಲ್ಲಿ ವಿದ್ಯಾರ್ಥಿಗಳು ರಂಗೋಲಿ ಬಿಡಿಸಿದ್ದಾರೆ. ಸಂಕ್ರಾಂತಿ ಸಂಭ್ರಮದ ಜೊತೆಗೆ ವಿವಿಧ ಜಾಗೃತಿ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದ್ದಾರೆ.
ಜಾತ್ರೆಯಲ್ಲಿ ಖಡಕ್ ರೊಟ್ಟಿ ಖದರ್: ಗವಿಸಿದ್ದೇಶ್ವರ ಜಾತ್ರೆಯಲ್ಲಿ ಖಡಕ್ ರೊಟ್ಟಿ ಖದರ್ ಜೋರಾಗಿದೆ. ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲು 20 ಲಕ್ಷ ರೊಟ್ಟಿ ಸಂಗ್ರಹವಾಗಿದೆ. ಕೊಪ್ಪಳ, ಗದಗ, ಬಾಗಲಕೋಟೆ ಧಾರವಾಡದಿಂದ ಈ ರೊಟ್ಟಿಗಳು ಬಂದಿವೆ. 300 ಕ್ಕೂ ಹೆಚ್ಚು ಗ್ರಾಮದಿಂದ ಜೋಳದ ರೊಟ್ಟಿ ಸಂಗ್ರಹವಾಗಿದೆ. ಎರಡು ಬೃಹತ್ ಶೆಡ್ ನಲ್ಲಿ ಮಠದ ಸಿಬ್ಬಂದಿ ರೊಟ್ಟಿಯನ್ನು ಸಂಗ್ರಹಿಸಿದ್ದಾರೆ. ಜನವರಿ 6 ರಿಂದ ಇಲ್ಲಿಯವರೆಗೂ ರೊಟ್ಟಿ ಸಂಗ್ರಹ ಕಾರ್ಯ ನಡೆದಿತ್ತು. ಗ್ರಾಮದಲ್ಲಿ ಸಣ್ಣ ಸಣ್ಣ ಗುಂಪು ಮಾಡಿ ಮಹಿಳೆಯರು ರೊಟ್ಟಿ ಮಾಡಿಕೊಟ್ಟಿದ್ದಾರೆ. ವೈಯಕ್ತಿಕವಾಗಿ ಜನರಿಂದ ಮಠಕ್ಕೆ ರೊಟ್ಟಿ ಅರ್ಪಣೆಯಾಗಿದೆ. ಇದನ್ನು ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದದ ರೂಪದಲ್ಲಿ ರೊಟ್ಟಿ ವಿತರಣೆ ನೀಡಲಾಗುತ್ತದೆ. ಮುಂದಿನ ಅಮವಾಸ್ಯೆ ಬರುವವರೆಗೆ ಮಠಕ್ಕೆ ಬರುವ ಭಕ್ತರಿಗೆ ರೊಟ್ಟಿ, ಪಲ್ಯ ವಿತರಣೆ ಮಾಡಲಾಗುತ್ತದೆ.
ಭಕ್ತರಿಗೆ ಸಿಗಲಿದೆ ಗರಿಗರಿ ಜಿಲೇಬಿ: ಜಾತ್ರೆಗೆ ಬರುವ ಭಕ್ತರಿಗೆ ಗರಿಗರಿ ಜಿಲೇಬಿ ಕೂಡ ಸಿಗಲಿದೆ. ಮಹಾದಾಸೋಹಕ್ಕಾಗಿ ಪ್ರಸಾದ ರೂಪದಲ್ಲಿ 15 ಲಕ್ಷ ಜಿಲೇಬಿ ತಯಾರಾಗಿದೆ. ಸಿಂಧನೂರು ಗೆಳೆಯರ ಬಳಗದ ವತಿಯಿಂದ ಜಿಲೆಬಿ ವ್ಯವಸ್ಥೆಯಾಗಿದೆ. ಮಠದ ಅಂಗಳದಲ್ಲೇ ಬಿಸಿ ಬಿಸಿ ಜಿಲೇಬಿಯನ್ನು ಸ್ವಯಂ ಸೇವಕರು ಸಿದ್ಧಮಾಡಿದ್ದಾರೆ. ಇಂದು ಮತ್ತು ನಾಳೆಯ ದಾಸೋಹದಲ್ಲಿ ಇದನ್ನು ಹಂಚಲಾಗುತ್ತದೆ. 200 ನುರಿತ ಬಾಣಸಿಗರು, 200 ಸ್ವಯಂ ಸೇವಕರಿಂದ ಇದು ತಯಾರಿಯಾಗಿದೆ. ಅಂದಾಜು 50 ಕ್ವಿಂಟಲ್ ಮೈದಾ ಹಿಟ್ಟು,130 ಕ್ವಿಂಟಲ್ ಆರ್ಗ್ಯಾನಿಕ್ ಬೆಲ್ಲ, 500 ಲೀಟರ್ ತುಪ್ಪ, 300 ಲೀಟರ್ ಮೊಸರು ಬಳಕೆಯಾಗಿದೆ. ನಿನ್ನೆಯಿಂದ ಸ್ವಯಂಸೇವಕರು ಜಿಲೇಬಿ ತಯಾರಿ ಮಾಡುತ್ತಿದ್ದಾರೆ. ಕಳೆದ ಬಾರಿ ಶೇಂಗಾ ಹೋಳಿಗೆ ಮಾಡಿದ್ವಿ.. ಈ ಬಾರಿ ಜಿಲೇಬಿ. ಪ್ರತಿ ವರ್ಷದಂತೆ ಈ ಬಾರಿಯೂ ಅಜ್ಜನ ಜಾತ್ರೆಯಲ್ಲಿ ವಿಶೇಷ ಪ್ರಸಾದ ಇರಲಿದೆ ಎಂದು ಭಕ್ತರು ಖುಷಿ ಹಂಚಿಕೊಂಡಿದ್ದಾರೆ.
ರಥೋತ್ಸವ ಹಿನ್ನಲೆಯಲ್ಲಿ ದಾಸೋಹಕ್ಕೆ ಭಕ್ತ ಸಾಗರ ಹರಿದು ಬಂದಿದೆ. ಪ್ರಸಾದ ಸ್ವೀಕರಿಸಲು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರಿಗಾಗಿ ವಿವಿಧ ಬಗೆಯ ಸಿಹಿ ಪದಾರ್ಥಗಳು ಸಿದ್ದವಾಗಿವೆ. ಸರತಿ ಸಾಲಿನಲ್ಲಿ ನಿಂತು ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದಾರೆ. ಪ್ರಸಾದದಲ್ಲಿ ರೊಟ್ಟಿ,ಬದನೆಕಾಯಿ ಪಲ್ಲೆ, ಮಾದಲಿ,ಜಿಲೇಬಿ,ತುಪ್ಪ,ಹಾಲು, ಅನ್ನ ಸಾಂಬಾರ್ ವ್ಯವಸ್ಥೆ ಮಾಡಲಾಗಿದೆ. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಸಾಂಬಾರ್,ಪಲ್ಲೆ ಸಿದ್ದವಾಗಿದೆ. ಶೆಡ್‌ನಲ್ಲಿನ ಅನ್ನದ ರಾಶಿ ಎಲ್ಲರ ಗಮನಸೆಳೆದಿದೆ. ದಾಸೋಹ ಭವನಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಲ್ಲದೆ, ಜಿಲೇಬಿಯನ್ನೂ ಸವಿದಿದ್ದಾರೆ.
ಇಂದು ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ: ದಾಸೋಹಕ್ಕೆ 14 ಲಕ್ಷ ಜಿಲೇಬಿ, 5 ಲಕ್ಷ ಮಿರ್ಜಿ ಭಜ್ಜಿ ರೆಡಿ!
ಗವಿಮಠದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ಥ್ ಮಾಡಲಾಗಿದೆ. ಇಬ್ಬರು ಅಡಿಷನಲ್ ಎಸ್ಪಿ 9 ಡಿಎಸ್ ಪಿ, 35 ಸಿಪಿಐ ಸೇರಿದಂತೆ 1600 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ
ರಥೋತ್ಸವ ಸಮಯದಲ್ಲಿ ಅಪಾರ ಭಕ್ತರ ಆಗಮನ ಹಿನ್ನೆಲೆಯಲ್ಲಿ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಠದ ಸುತ್ತಮುತ್ತ ಪೊಲೀಸರ ನಿಯೋಜನೆ ವಿಶೇಷವಾಗಿ ರಥ ಎಳೆಯೋ ಮೈದಾನದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆಯಾಗಿತ್ತು.
ಕೊಪ್ಪಳ: ಗವಿಮಠ ಜಾತ್ರೆಗೆ 338 ಕ್ವಿಂಟಲ್ ಅಕ್ಕಿ ದೇಣಿಗೆ!