ಕೊಪ್ಪಳದಲ್ಲಿ ಹಿಂದೂ ಮುಖಂಡ ಗವಿಸಿದ್ದಪ್ಪ ನಾಯಕ ಹತ್ಯೆ ಪ್ರಕರಣವನ್ನು NIA ಅಥವಾ CBI ತನಿಖೆಗೆ ವಹಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ವಾಲ್ಮೀಕಿ ಸಮುದಾಯದ ಮುಖಂಡರ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಮರ್ಪಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು (ಆ.12) ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ಹಿಂದೂ ಮುಖಂಡ ಗವಿಸಿದ್ದಪ್ಪ ನಾಯಕ ಬರ್ಬರ ಹತ್ಯೆ ಪ್ರಕರಣವನ್ನು ಎನ್‌ಐಎ ಅಥವಾ ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದ ಮುಖಂಡ ಗವಿಸಿದ್ದಪ್ಪ ನಾಯಕ ಅವರನ್ನು ಕೊಪ್ಪಳದ ಮಸೀದಿ ಮುಂದೆಯೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಜ್ಯ ಸರ್ಕಾರವು ಈ ಘಟನೆಯನ್ನು ಹಗುರವಾಗಿ ಪರಿಗಣಿಸಬಾರದು. ಈ ಹತ್ಯೆಯಿಂದ ಇಡೀ ಕೊಪ್ಪಳ ಜಿಲ್ಲೆಯಲ್ಲಿ ಆತಂಕ ಉಂಟಾಗಿದೆ ಎಂದರು.

ಈ ಹಿಂದೆ ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಕೊಲೆಗಡುಕರು, ಸಮಾಜಘಾತುಕ ಶಕ್ತಿಗಳು, ದೇಶದ್ರೋಹಿಗಳ ಚಟುವಟಿಕೆಗಳು ಇದ್ದವು. ಈಗ ಹಿಂದೂ ಕಾರ್ಯಕರ್ತರ ಹತ್ಯೆಯು ಕೊಪ್ಪಳ ಜಿಲ್ಲೆಗೂ ವಿಸ್ತರಣೆಯಾಗಿರುವುದು ಖಂಡನೀಯ. ಗೃಹ ಸಚಿವರು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪ್ರಕರಣದ ತನಿಖೆಯನ್ನು ಎನ್‌ಐಎ ಅಥವಾ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.

ಕೊಪ್ಪಳದ ಪೊಲೀಸ್ ವರಿಷ್ಠಾಧಿಕಾರಿ ದಿನಕ್ಕೆ ಒಂದೊಂದು ಹೇಳಿಕೆ ಕೊಡುತ್ತಿರುವುದು ದುರಂತ. ಈ ವಿಷಯದಲ್ಲಿ ಸಮರ್ಪಕ ತನಿಖೆ ಆಗುವ ಹಾಗೂ ಈ ಸಾವಿಗೆ ನ್ಯಾಯ ಸಿಗುವ ಭರವಸೆ ಉಳಿದಿಲ್ಲ ಎಂದರು. ಇವತ್ತು ಕೊಪ್ಪಳದಲ್ಲಿ ಅಖಂಡ ವಾಲ್ಮೀಕಿ ಮಹಾಸಭಾ ಮತ್ತು ಬಿಜೆಪಿ ವತಿಯಿಂದ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ವಿಧಾನಸಭೆ ವಿಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಎಚ್.ಪಾಟೀಲ್, ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಈ ಪ್ರಕರಣವನ್ನು ಎನ್‍ಐಎ ಅಥವಾ ಸಿಬಿಐಗೆ ಹಸ್ತಾಂತರಿಸುವಂತೆ ಆಗ್ರಹಿಸಿದರು.