ಕೊಪ್ಪಳದ ಹಮಾಲರ ಕಾಲೋನಿಯಲ್ಲಿ, ಆರು ವರ್ಷದ ಬಾಲಕನೊಬ್ಬ ಪಾರಿವಾಳ ಹಿಡಿಯಲು ಹೋಗಿ ಮೊದಲ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ. ತಲೆಗೆ ಗಂಭೀರ ಪೆಟ್ಟಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪಾಲಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಕೊಪ್ಪಳ (ಡಿ.22): ಆಟವಾಡುತ್ತಿದ್ದ ಆರು ವರ್ಷದ ಮಗುವೊಂದು ಮೊದಲ ಮಹಡಿಯಿಂದ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದ ದುರಂತ ಘಟನೆ ಕೊಪ್ಪಳ ನಗರದ ಹಮಾಲರ ಕಾಲೋನಿಯಲ್ಲಿ ಸಂಭವಿಸಿದ್ದು, ಮಗುವಿನ ತಲೆಗೆ ಗಂಭೀರ ಪೆಟ್ಟಾಗಿದೆ.ಈ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪಾರಿವಾಳ ಹಿಡಿಯಲು ಯತ್ನಿಸಿ ಕೆಳಗೆ ಬಿದ್ದ ಮಗು:

ಹಮಾಲರ ಕಾಲೋನಿಯ ನಿವಾಸಿ ಅಬ್ಬಾಸ್ಅಲಿ ಎಂಬುವವರ ಆರು ವರ್ಷದ ಪುತ್ರ ಮಹ್ಮದ್ ಹ್ಯಾರಿಸ್ ಮನೆಯ ಮೊದಲ ಮಹಡಿಯ ಮೇಲೆ ಆಟವಾಡುತ್ತಿದ್ದನು. ಈ ವೇಳೆ ಅಲ್ಲಿಗೆ ಬಂದ ಪಾರಿವಾಳವನ್ನು ಕಂಡು ಅದನ್ನು ಹಿಡಿಯಲು ಮಗು ಪ್ರಯತ್ನಿಸಿದೆ. ಪಾರಿವಾಳದ ಹಿಂದೆ ಓಡಿದ ಮಗು ಆಯಾತಪ್ಪಿ ಮೊದಲ ಮಹಡಿಯಿಂದ ನೇರವಾಗಿ ಕೆಳಗೆ ಬಿದ್ದಿದೆ.

ಮಗು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ:

ಮಗು ಮಹಡಿಯಿಂದ ಬೀಳುವ ದೃಶ್ಯ ಸ್ಥಳೀಯವಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಮಗು ಮೇಲಿಂದ ಬೀಳುತ್ತಿದ್ದಂತೆಯೇ ಆತಂಕಕ್ಕೊಳಗಾದ ಪಾಲಕರು ಮತ್ತು ಸ್ಥಳೀಯರು ಕೂಡಲೇ ಓಡಿ ಬಂದು ಮಗುವನ್ನು ರಕ್ಷಿಸಿದ್ದಾರೆ. ಮೇಲಿಂದ ಬಿದ್ದ ವೇಗಕ್ಕೆ ಮಗುವಿನ ತಲೆಗೆ ತೀವ್ರ ಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ.

ಪ್ರಾಣಾಪಾಯದಿಂದ ಪಾರು: ಆಸ್ಪತ್ರೆಗೆ ದಾಖಲು

ಮಗು ಕೆಳಗೆ ಬಿದ್ದ ತಕ್ಷಣ ಪಾಲಕರು ನಗರದ ಕೆ.ಎಸ್. ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಪಾಲಕರೇ ಎಚ್ಚರಿಕೆವಹಿಸಿ:

ಈ ಘಟನೆ ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಗಳ ಮಹಡಿಯ ಮೇಲೆ ಅಥವಾ ಬಾಲ್ಕನಿಯಲ್ಲಿ ಮಕ್ಕಳು ಆಟವಾಡುತ್ತಿರುವಾಗ ಪಾಲಕರು ಹೆಚ್ಚಿನ ನಿಗಾ ವಹಿಸಬೇಕು. ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.