Injured Toddler Dies In mumbai ವಸಾಯಿಯಲ್ಲಿ 4ನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 16 ತಿಂಗಳ ಮಗುವನ್ನು ಆಸ್ಪತ್ರೆಗೆ ಸಾಗಿಸುವಾಗ, ಭಾರೀ ಟ್ರಾಫಿಕ್‌ ಜಾಂನಲ್ಲಿ ಸಿಲುಕಿದೆ. ಸುಮಾರು 4 ಗಂಟೆಗಳ ಕಾಲ ಟ್ರಾಫಿಕ್‌ನಲ್ಲೇ ಕಳೆದ ಪರಿಣಾಮ, ಚಿಕಿತ್ಸೆ ವಿಳಂಬವಾಗಿ ಮಗು ಸಾವನ್ನಪ್ಪಿದೆ.

ವಸಾಯಿ (ಸೆ.21): 4ನೇ ಮಹಡಿಯಿಂದ ಬಿದ್ದು ಬದುಕಿದ್ದ 16 ತಿಂಗಳ ಮಗುವೊಂದು ಟ್ರಾಫಿಕ್‌ ಜಾಂನಲ್ಲಿ ಸಿಲುಕಿ ಮೃತಪಟ್ಟಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರ ಮಧ್ಯಾಹ್ನ 1.30ರ ವೇಳೆಗೆ ವಸಾಯಿಯ ಫಾತಿಮಾ ಮಂಜಿಲ್‌ ಎಂಬಲ್ಲಿ ಮಗುವೊಂದು 4ನೇ ಮಹಡಿಯಿಂದ ಕೆಳಗೆ ಬಿದ್ದಿದ್ದು, ಹೊಟ್ಟೆ ಮತ್ತು ಕಿಬ್ಬೊಟ್ಟೆಗೆ ತೀವ್ರವಾಗಿ ಪೆಟ್ಟಾಗಿತ್ತು. ತಕ್ಷಣ ಪೋಷಕರು ಕಂದನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಮಗುವಿಗೆ ಆಂತರಿಕ ರಕ್ತಸ್ರಾವವಾಗಿರುವುದನ್ನು ಕಂಡು, ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಯುರೋಪಿಯನ್ ವಿಮಾನ ನಿಲ್ದಾಣಗಳ ಮೇಲೆ ಸೈಬರ್ ದಾಳಿ, ಪ್ರಯಾಣಿಕರಿಗೆ ಏರ್‌ ಇಂಡಿಯಾ ಸಲಹೆ

ಅದರಂತೆಯೆ ಪೋಷಕರು ಮಗುವಿನೊಂದಿಗೆ ಮುಂಬೈನ ಆಸ್ಪತ್ರೆಗೆ ಕಾರಿನಲ್ಲಿ ಹೊರಟಿದ್ದಾರೆ. ಆದರೆ ಅಹ್ಮದಾಬಾದ್‌-ಮುಂಬೈ ಹೆದ್ದಾರಿಯಲ್ಲಿದ್ದ ಭಾರೀ ಟ್ರಾಫಿಕ್‌ ಉಂಟಾಗಿ, ಅವರೆಲ್ಲ 4 ತಾಸು ಕಾರಿನಲ್ಲೇ ಕಳೆಯುವಂತಾಗಿದೆ. ಈ ವೇಳೆ ಮಗುವಿನ ಮೈ ತಣ್ಣಗಾಗಿದ್ದನ್ನು ಕಂಡ ಪೋಷಕರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು.

ಜು.31ರಂದು ಸಹ ಪುಣೆಯ ಮಹಿಳೆಯೊಬ್ಬರು ಮರ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಮುಂಬೈಗೆ ಕರೆದೊಯ್ಯುವಾಗ ಟ್ರಾಫಿಕ್‌ನಲ್ಲಿ 3 ತಾಸು ಸಿಲುಕಿ ಮೃತಪಟ್ಟಿದ್ದರು.