ಈ ಹಿಂದಿನ ಬಿಜೆಪಿ ಸರಕಾರ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದಿರುವ ಕೃಷಿಕಾಯ್ದೆ ಕೂಡಲೆ ವಾಪಸ್‌ ಪಡೆಯಬೇಕೆಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಒತ್ತಾಯಿಸಿದರು.

ಕಲಬುರಗಿ (ಜೂ.13) :  ಈ ಹಿಂದಿನ ಬಿಜೆಪಿ ಸರಕಾರ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದಿರುವ ಕೃಷಿಕಾಯ್ದೆ ಕೂಡಲೆ ವಾಪಸ್‌ ಪಡೆಯಬೇಕೆಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೃಷಿ ಕಾಯ್ದೆ ವಾಪಸ್‌ ಪಡೆಯುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತ ಸರ್ಕಾರ ರಚಿಸಿರುವ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆ ರದ್ದುಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀನಮೇಷ ಎಣಿಸಬಾರದು ಎಂದು ಕಿವಿಮಾತು ಹೇಳಿದರು.

ಬಿಜೆಪಿಗೆ ರೈತ ಸಂಘ ಬೆಂಬಲ ನೀಡೋದಿಲ್ಲ: ಕೋಡಿಹಳ್ಳಿ ಚಂದ್ರಶೇಖರ್‌

ವಿವಾದಾತ್ಮಕ ಕೃಷಿ ಕಾಯ್ದೆಯನ್ನು ವಾಪಸ್‌ ಪಡೆಯುವುದಾಗಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಾಗ್ಯೂ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah)ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ. ಇದರಲ್ಲಿ ಪರಿಶೀಲಿಸುವುದು ಏನಿದೆ? ಈ ಹಿಂದೆ ಪ್ರತಿಪಕ್ಷದ ನಾಯಕರಾಗಿದ್ದಾಗ ಕಾಯ್ದೆಯನ್ನು ವಿರೋಧಿಸಿದವರಿಗೆ ಅದನ್ನು ರದ್ದುಪಡಿಸುವುದರಲ್ಲಿ ತೊಂದರೆ ಏನಿದೆ? ಎಂದು ಕೋಡಿಹಳ್ಳಿ ಪ್ರಶ್ನಿಸಿದರು.

ಕೃಷಿ ಕಾಯ್ದೆ(Agriculture Act) ವಾಪಸ್‌ ಪಡೆಯುವುದಕ್ಕೆ ಕೇವಲ ಕಾನೂನಾತ್ಮಕ ಘೋಷಣೆಯ ಅಗತ್ಯವಿದೆ. ಇದನ್ನು ಮಾಡಲು ಅನಗತ್ಯವಾಗಿ ಸಮಯ ತೆಗೆದುಕೊಳ್ಳಬಾರದು. ಈಗಾಗಲೇ ಎರಡು ಸಚಿವ ಸಂಪುಟ ಸಭೆಗಳಾಗಿವೆ. ಈ ಸಭೆಗಳಲ್ಲಿಯೇ ಕೃಷಿ ಕಾಯ್ದೆ ಹಿಂಪಡೆಯುವ ಕುರಿತು ನಿರ್ಧಾರ ಪ್ರಕಟಿಸಬಹುದಿತ್ತು. ಮುಂಬರುವ ಬಜೆಟ್‌ ಅಧಿವೇಶದಲ್ಲಾದರೂ ಕೃಷಿ ಕಾಯ್ದೆ ರದ್ದುಪಡಿಸಬೇಕು. ಇದರಿಂದ ಸರ್ಕಾರದ ಮೇಲೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ ಎಂದರು. ಬಸನಗೌಡ, ಮಲ್ಲನಗೌಡ, ದೇವಕಿ ಉಪಸ್ಥಿತರಿದ್ದರು.

ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ರೈತರ ಮತ ಬಿಜೆಪಿಗಿಲ್ಲ: ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ