ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ರೈತರ ಮತ ಬಿಜೆಪಿಗಿಲ್ಲ: ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ
ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆದಂತೆ ರಾಜ್ಯ ಸರ್ಕಾರವೂ ಹಿಂಪಡೆಯಬೇಕು. ಜಾನುವಾರು ಹತ್ಯೆ ತಡೆ ಕಾಯ್ದೆಯನ್ನೂ ಹಿಂಪಡೆಯಬೇಕು. ಇಲ್ಲದಿದ್ದರೆ ಬಿಜೆಪಿಗೆ ರೈತರ ವೋಟ್ ಸಿಗುವುದಿಲ್ಲ ಎಂದು ರೈತರ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಕೆ ನೀಡಿದರು.
ಹಾವೇರಿ (ಮಾ.25) : ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆದಂತೆ ರಾಜ್ಯ ಸರ್ಕಾರವೂ ಹಿಂಪಡೆಯಬೇಕು. ಜಾನುವಾರು ಹತ್ಯೆ ತಡೆ ಕಾಯ್ದೆಯನ್ನೂ ಹಿಂಪಡೆಯಬೇಕು. ಇಲ್ಲದಿದ್ದರೆ ಬಿಜೆಪಿಗೆ ರೈತರ ವೋಟ್ ಸಿಗುವುದಿಲ್ಲ ಎಂದು ರೈತರ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ(Kodihalli chandrashekhar) ಎಚ್ಚರಿಕೆ ನೀಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸರ್ಕಾರ ಮತ್ತು ಮುಖ್ಯಮಂತ್ರಿಗೆ ನೀಡಿದ್ದ ಗಡುವು ಮುಗಿದಿದೆ. ಬೆಳಗಾವಿ, ಬೆಂಗಳೂರು ಅಧಿವೇಶನ ಎಂದು ಹೇಳುತ್ತ ಅಲೆದಾಡಿಸಿದರು. ಈ ಕಾಯ್ದೆ ಹಿಂಪಡೆಯದೇ ಇರುವುದು ಬಿಜೆಪಿಯ ಅಜೆಂಡಾ ಎನಿಸುತ್ತದೆ. ಇಲ್ಲದಿದ್ದರೆ ಸರ್ಕಾರದ ಮೇಲೆ ಯಾವುದೋ ಒತ್ತಡ ಇರುವ ಅನುಮಾನವಿದೆ. ರೈತರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಕಾಯ್ದೆ ವಾಪಸ್ ಪಡೆದರೂ ರಾಜ್ಯ ಸರ್ಕಾರ ಇದಕ್ಕೆ ಮುಂದಾಗಿಲ್ಲ. ಇದನ್ನು ನೋಡಿದರೆ ಕೇಂದ್ರ ಸರ್ಕಾರ ರಾಜ್ಯದಲ್ಲಿ ಇದನ್ನು ಪೈಲಟ್ ಯೋಜನೆಯಾಗಿ ನೋಡುತ್ತಿದೆ. 2024ರ ನಂತರ ಮತ್ತೆ ಎಲ್ಲ ರಾಜ್ಯಗಳಲ್ಲಿ ಕಾಯ್ದೆ ಜಾರಿಗೊಳಿಸುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಮಿಷಕ್ಕೆ ಒಳಗಾಗದೇ ರೈತರ ಏಳ್ಗೆಗೆ ಕಟಿಬದ್ಧರಾಗಿ: ಕೋಡಿಹಳ್ಳಿ ಚಂದ್ರಶೇಖರ
ಕೃಷಿ ಕಾಯ್ದೆ(Agriculture acct)ಯ ದುಷ್ಪರಿಣಾಮಗಳು ಗೋಚರಿಸುತ್ತಿವೆ. ಎಪಿಎಂಸಿಗಳಲ್ಲಿ ಶೇ. 90ರಷ್ಟುಆವಕ ಕಡಿಮೆಯಾಗಿದ್ದು, ಆದಾಯದಲ್ಲೂ ಇಳಿಕೆಯಾಗಿದೆ. ಕೃಷಿ ಮಾರುಕಟ್ಟೆಯನ್ನು ರೈತರಿಂದ ಕೈತಪ್ಪಿಸುವ ಹುನ್ನಾರ ಅಡಗಿದೆ. ಕೃಷಿ ಭೂಮಿ ರೈತರ ಕೈ ತಪ್ಪುತ್ತಿದೆ. ಉಪನೋಂದಣಾಧಿಕಾರಿ ಕಚೇರಿ ಸಮಯ ಎರಡು ತಾಸು ವಿಸ್ತರಿಸಿರುವುದೇ ಇದಕ್ಕೆ ಸಾಕ್ಷಿ. ರೈತರಲ್ಲದವರು ಕೃಷಿ ಭೂಮಿ ಖರೀದಿಸುವ ಪ್ರಮಾಣ ಹೆಚ್ಚಿದೆ. ಮುಂದೆ ಕಾರ್ಪೋರೇಟ್ ಕಂಪನಿಗಳು ಕೃಷಿ ಜಮೀನು ಖರೀದಿಸಲು ಶುರು ಮಾಡಲಿವೆ. ಒಟ್ಟಿನಲ್ಲಿ ರೈತರನ್ನು ಕೃಷಿಯಿಂದ ಹೊರಹಾಕುವುದೇ ಇವರ ಉದ್ದೇಶವಾಗಿದೆ. ನಾವು ರೈತರ ಪರ ಎಂದು ಹೇಳುವ ಬಿಜೆಪಿ ನೀತಿ ಸಂಹಿತೆ ಜಾರಿಯಾಗುವ ಮುನ್ನ ಈ ಕಾಯ್ದೆ ವಾಪಸ್ ಪಡೆಯಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಜಾನುವಾರು ಹತ್ಯೆ ತಡೆ ಕಾಯ್ದೆ ಜಾರಿ ಮೂಲಕ ಭಾವನಾತ್ಮಕ ವಿಚಾರಗಳ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಆದರೆ, ಹೈನುಗಾರಿಕೆಯಿಂದ ರೈತರನ್ನು ಹೊರಹಾಕುವುದೇ ಇವರ ಉದ್ದೇಶವಾಗಿದೆ. ಈ ಕಾಯ್ದೆಯನ್ನು ಸರ್ಕಾರ ವಾಪಸ್ ಪಡೆಯದಿದ್ದರೆ ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಹನುಮಂತಪ್ಪ ಹುಚ್ಚಣ್ಣನವರ, ಹನುಮಂತಪ್ಪ ಕಬ್ಬಾರ ಇದ್ದರು.
ಸರ್ಕಾರದ ಕಬ್ಬು ಸಭೆಗೆ ಕೋಡಿಹಳ್ಳಿ ಚಂದ್ರಶೇಖರ್: ರೈತರ ಆಕ್ರೋಶ
ಚುನಾವಣೆಯಲ್ಲಿ ಸ್ಪರ್ಧೆ
ವಿಧಾನಸಭೆ ಚುನಾವಣೆ(Karnataka assembly election)ಯಲ್ಲಿ ತಾವು ರೈತ ಸಂಘ(Raita sangha)ದಿಂದ ಸ್ಪರ್ಧಿಸುವುದಾಗಿ ಕೋಡಿಹಳ್ಳಿ ಚಂದ್ರಶೇಖರ ಸ್ಪಷ್ಟಪಡಿಸಿದರು. ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ನಿರ್ಧರಿಸಿಲ್ಲ. ಶೀಘ್ರದಲ್ಲಿ ರೈತ ಸಂಘದ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.