ಭಾರಿ ಮಳೆ ಕಾರಣದಿಂದ ಕರ್ನಾಟಕದ ನಾಲ್ಕು ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ರಜೆ ನಾಲ್ಕೈದು ತಾಲೂಕುಗಳಿಗೆ ಸೀಮೀತವಾಗಿದೆ. ಯಾವ ಜಿಲ್ಲೆಗಳಲ್ಲಿ ರಜೆ ನೀಡಲಾಗಿದೆ?
ಬೆಂಗಳೂರು(ಜೂ.15) ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಇದರ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಕೆಲ ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಈ ಪೈಕಿ ನಾಳೆ (ಜೂ.16) ಕೊಡುಗು ಜಿಲ್ಲೆಯಾದ್ಯಂತ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಇನ್ನು ಉಡುಪಿ ಜಿಲ್ಲೆ, ದಕ್ಷಿಣ ಕನ್ನಡದ ಐದು ತಾಲೂಕು, ಚಿಕ್ಕಮಗಳೂರಿನ 6 ತಾಲೂಕುಗಳಿಗೆ ರಜೆ ಘೋಷಿಸಲಾಗಿದೆ.
ಕೊಡುಗು ಜಿಲ್ಲೆ ಶಾಲಾ ಕಾಲೇಜಿಗೆ ನಾಳೆ ರಜೆ
ಕೊಡುಗು ಜೆಲ್ಲಿಯಲ್ಲಿ ಭಾರಿ ಮಳೆಯಾಗುತ್ತಿದೆ. ಜೂನ್ 16 ರಂದು ಭಾರಿ ಮಳೆ ಮುನ್ಸೂಚನೆ ಇರುವ ಕಾರಣ ಮುನ್ನಚ್ಚೆರಿಕಾ ಕ್ರಮವಾಗಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗಳಿಗೆ ರಜೆ ಘೋಷಿಸಿದ್ದಾರೆ. ಜೂನ್ 17ರ ಬೆಳಗ್ಗೆ ವರೆಗೆ ಆರೇಂಜ್ ಅಲರ್ಟ್ ಕಾರಣದಿಂದ ರಜೆ ನೀಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ
ಉಡುಪಿ ಜಿಲ್ಲೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ನಾಳೆ (ಜೂ.16) ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ದಕ್ಷಿಣ ಕನ್ನಡದ ಐದು ತಾಲೂಕಿನಲ್ಲಿ ರಜೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಹಲವು ತಾಲೂಕುಗಳು ನೀರಿನಲ್ಲಿ ಮುಳುಗಿದೆ. ಹೀಗಾಗಿ ಭಾರಿ ಮಳೆಯಾಗುತ್ತಿರುವ ನಾಳೆ (ಜೂ.16) ಐದು ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಂಗಳೂರು, ಉಳ್ಳಾಲ, ಬಂಟ್ವಾಳ, ಮುಲ್ಕಿ ಹಾಗೂ ಮೂಡಬಿದಿರೆ ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ. ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಈ ಆದೇಶ ನೀಡಿದ್ದಾರೆ.
ಚಿಕ್ಕಮಗಳೂರಿನ 6 ತಾಲೂಕುಗಳಿಗೆ ರಜೆ
ಮಲೆನಾಡಿನಲ್ಲೂ ಭಾರಿ ಗಾಳಿ ಮಳೆಯಾಗುತ್ತಿದೆ. ಹೀಗಾಗಿ ನಾಳೆ (ಜೂ.16) ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ಕಳಸ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ನೀಡಿದ್ದಾರೆ.
