ಕೊಡಗು ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 470 ಕ್ಕೂ ಹೆಚ್ಚು ಬಾಲಕಿಯರು ಗರ್ಭಿಣಿಯರಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸಿಸುವ ಕುಟುಂಬಗಳ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರಾಗಿದ್ದು, ವ್ಯವಸ್ಥೆಯ ದುರ್ಬಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜೂ.13): ಕೊಡಗು ಎಂದರೆ ಸುಶಿಕ್ಷಿತರ ಜಿಲ್ಲೆ, ಆರ್ಥಿಕವಾಗಿ ಸದೃಢರು ಇರುವ ಜಿಲ್ಲೆ ಎಂದೆಲ್ಲಾ ಕರೆಯುತ್ತಾರೆ. ಆದರೆ ಈ ಜಿಲ್ಲೆಯಲ್ಲೇ ಒಂದೇ ವರ್ಷದಲ್ಲಿ 400 ಕ್ಕೂ ಹೆಚ್ಚು ಬಾಲಕಿಯರು ಗರ್ಭಿಣಿಯರು ಆಗಿದ್ದಾರೆ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಅದರಲ್ಲೂ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರಾಗಿದ್ದಾರೆ ಎನ್ನುವುದು ವ್ಯವಸ್ಥೆಯ ದುರ್ಬಲ್ಯಕ್ಕೆ ಹಿಡಿದ ಕೈಗನ್ನಡಿ.
ಹೌದು ಕೊಡಗು ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 2024 ರ ಏಪ್ರಿಲ್ ತಿಂಗಳಿನಿಂದ 2025 ಮೇ ಅಂತ್ಯದವರೆಗೆ 19 ವರ್ಷಗಳ ವರೆಗಿನ ಬಾಲ ಗರ್ಭಿಣಿಯರ ಸಂಖ್ಯೆ ಬರೋಬ್ಬರಿ 472 ಇದೆ. 18 ವರ್ಷದೊಳಗಿನ ಬಾಲ ಗರ್ಭಿಣಿಯರ ಸಂಖ್ಯೆಯೇ ಬರೋಬ್ಬರಿ 102 ಕ್ಕಿಂತಲೂ ಹೆಚ್ಚಿದೆ. ಅಂದರೆ ತಿಂಗಳಿಗೆ ಸರಾಸರಿ 8 ಕ್ಕಿಂತಲೂ ಹೆಚ್ಚು ಬಾಲಕಿಯರು ಗರ್ಭಿಣಿಯರಾಗುತ್ತಿದ್ದಾರೆ ಎನ್ನುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಈ ವಿಚಾರದಲ್ಲಿ ವಿಪರ್ಯಾಸವೆಂದರೆ ಇದೇ ಮಕ್ಕಳನ್ನು ರಕ್ಷಿಸಬೇಕಾದ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಇಷ್ಟು ಸಂಖ್ಯೆಯಲ್ಲಿ ಇರುವ ಬಾಲ ಗರ್ಭಿಣಿಯರನ್ನು ಪತ್ತೆ ಹಚ್ಚುವಲ್ಲಿ ಸೋತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಒಟ್ಟು 95 ಪ್ರಕರಣಗಳನ್ನು ಗುರುತಿಸಿದ್ದರೆ, ಅದರಲ್ಲಿ 45 ಬಾಲ ಗರ್ಭಿಣಿಯರನ್ನು ಪತ್ತೆ ಹಚ್ಚಲಾಗಿದೆ. ಇನ್ನು ಜಾತಿವಾರು ನೋಡುವುದಾದರೆ ಜಿಲ್ಲೆಯಲ್ಲಿ ಇರುವ ವಿವಿಧ ಆದಿವಾಸಿ ಬುಡಕಟ್ಟು ಸಮುದಾಯ ಮತ್ತು ಪರಿಶಿಷ್ಟ ಜಾತಿ ಸಮುದಾಯದ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ.
ಅದರಲ್ಲಿ ಅತೀ ಹೆಚ್ಚಿನ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿಯರಾಗಿರುವುದು ಕಾಫಿ ತೋಟಗಳಲ್ಲಿ ಇರುವ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಬಾಲಕಿಯರು ಎನ್ನುವುದು ವಿಪರ್ಯಾಸದ ಸಂಗತಿ. ತಾಲ್ಲೂಕುವಾರು ಗುರುತ್ತಿಸುವುದಾದರೂ ಶಾಸಕ ಪೊನ್ನಣ್ಣ ಅವರು ಪ್ರತಿನಿಧಿಸುವ ಕ್ಷೇತ್ರವಾದ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕುಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿಯರಾಗಿದ್ದಾರೆ. ಈ ಸಂಖ್ಯೆ ಶಾಸಕ ಡಾ. ಮಂತರ್ ಗೌಡ ಪ್ರತಿನಿಧಿಸುವ ಮಡಿಕೇರಿ ಕ್ಷೇತ್ರದ ಸೋಮವಾರಪೇಟೆ ತಾಲ್ಲೂಕಿನಲ್ಲೂ ಕಡಿಮೆ ಏನಿಲ್ಲ. ಒಟ್ಟಾರೆ ಪ್ರಕರಣಗಳನ್ನು ನೋಡಿದಾಗ ಕೊಡಗಿನ ಕಾಫಿ ತೋಟಗಳಲ್ಲಿ ಇರುವ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಸಮುದಾಯ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಲೈಂಗಿಕ ದೌರ್ಜನ್ಯ ಅನುಭವಿಸುತ್ತಿದ್ದಾರೆ.
ಸ್ವಂತ ಸೂರು ಇಲ್ಲದ ಸಾವಿರಾರು ಆದಿವಾಸಿ, ದಲಿತ ಸಮುದಾಯದ ಕುಟುಂಬಗಳು ಲೈನ್ ಮನೆಗಳಲ್ಲಿ ವಾಸಿಸುತ್ತಾ ಕೂಲಿ ಮಾಡುತ್ತಿದ್ದಾರೆ. ಈ ಕುಟುಂಬಗಳು ಸಾಕಷ್ಟು ಬಾರಿ ಸ್ವಂತ ಸೂರು ನೀಡುವಂತೆ ಹೋರಾಟ ಮಾಡಿವೆ. ಆದರೆ ಜಿಲ್ಲಾಡಳಿತವಾಗಲಿ, ಸ್ಥಳೀಯ ಪಂಚಾಯಿತಿಗಳೇ ಆಗಲಿ ಅವರಿಗೆ ಸೂರು ಒದಗಿಸುವ ಯೋಚನೆಯನ್ನೂ ಮಾಡಿಲ್ಲ. ಈ ಕುಟುಂಬಗಳಿಗೆ ಸ್ವಂತ ಸೂರು ಒದಗಿಸಲು ಮುಂದಾಗಿದ್ದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಾಲಕಿಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿರಲಿಲ್ಲ ಎನಿಸುತ್ತದೆ. ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇರುವ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಸಾಕಷ್ಟು ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಆದರೂ ಅದು ನಿರೀಕ್ಷಿತ ಪ್ರಮಾಣದಲ್ಲಿ ಫಲಪ್ರದವಾಗುತ್ತಿಲ್ಲ.
