Kodagu: ಜನರ ನಿದ್ದೆಗೆಡಿಸಿದ ನರಭಕ್ಷಕ ಗಂಡು ಹುಲಿ ಸೆರೆ: ನಿಟ್ಟುಸಿರು ಬಿಟ್ಟ ಜನ
ಕೊಡಗು ಜಿಲ್ಲೆಯ ಕೆ.ಬಾಡಗ ಗ್ರಾಮದ ಪಲ್ಲೇರಿ ಎಂಬಲ್ಲಿ ಒಂದೇ ಕುಟುಂಬದ ಮೊಮ್ಮಗ ಮತ್ತು ತಾತನನ್ನು ಬಲಿ ಪಡೆದುಕೊಂಡಿದ್ದ ನರ ಭಕ್ಷಕ ಹುಲಿಯನ್ನು ಮೂರು ದಿನಗಳ ಸೆರೆ ಹಿಡಿಯಲಾಗಿದೆ.
ಕೊಡಗು (ಫೆ.14): ಕೊಡಗು ಜಿಲ್ಲೆಯ ಕೆ.ಬಾಡಗ ಗ್ರಾಮದ ಪಲ್ಲೇರಿ ಎಂಬಲ್ಲಿ ಒಂದೇ ಕುಟುಂಬದ ಮೊಮ್ಮಗ ಮತ್ತು ತಾತನನ್ನು ಬಲಿ ಪಡೆದುಕೊಂಡಿದ್ದ ನರ ಭಕ್ಷಕ ಹುಲಿಯನ್ನು ಪೊನ್ನಂಪೇಟೆ ತಾಲ್ಲೂಕಿನ ನಾಣಚ್ಚಿಯ ಬಳಿಕ ಮೂರು ದಿನಗಳ ಸೆರೆ ಹಿಡಿಯಲಾಗಿದೆ.
ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ನರಭಕ್ಷಕ ಹುಲಿಯ ಉಪಟಳ ಹೆಚ್ಚಾಗಿತ್ತು. ಕೇವಲ ೨೪ ಗಂಟೆಗಳ ಅವಧಿಯಲ್ಲಿ ಒಂದೇ ಕುಟುಂಬದ ತಾತ ಮತ್ತು ಮೊಮ್ಮಗ ಇಬ್ಬರನ್ನು ಮನೆಯ ಬಳಿಯಿರುವ ತೋಟದ ಬಳಿಯಲ್ಲಿ ದಾಳಿ ಮಾಡಿ ಕೊಂದು ಹಾಕಿತ್ತು. ಇನ್ನು ಮೊನ್ನೆ ಸಂಜೆ ವೇಳೆ ೧೨ ವರ್ಷದ ಬಾಲಕನನ್ನು ಹೊತ್ತೊಯ್ದಾಗ ಬಾಲಕನ ಕಾಲು ಸೇರಿ ಅರ್ಧ ಭಾಗವನ್ನು ತಿಂದು ಹಾಕಿತ್ತು. ಇದರಿಂದ ತೀವ್ರ ಆತಂಕ ಎದುರಾಗಿತ್ತು. ನರಭಕ್ಷಕ ಹುಲಿಯನ್ನು ಕೊಂದು ಹಾಕುವಂತೆ ಸರ್ಕಾರದ ವಿರುದ್ಧ ಸ್ಥಳೀಯರು ಎರಡು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರು. ಇಂದು ಮದ್ಯಾಹ್ನದ ವೇಳೆಗೆ ಹುಲಿಯನ್ನು ಸೆರೆ ಹಿಡಿಯಲಾಗಿದೆ.
Kodagu: ನಿನ್ನೆ ಮೊಮ್ಮಗ, ಇಂದು ತಾತ: ನರಭಕ್ಷಕ ಹುಲಿಗೆ 24 ಗಂಟೆಯಲ್ಲಿ ಒಂದೇ ಕುಟುಂಬದ ಇಬ್ಬರ ಬಲಿ
ಕೊಡಗಿನ ನಾಣಚ್ಚಿ ಗೇಟ್ ಸಮೀಪ ಸೆರೆ ಸಿಕ್ಕ ಹುಲಿ: ನರಹಂತಕ ಹುಲಿಯನ್ನು ಪೊನ್ನಂಪೇಟೆ ತಾಲೂಕಿನ ನಾಣಚ್ಚಿ ಗೇಟ್ ಬಳಿ ಸೆರೆ ಹಿಡಿಯಲಾಗಿದೆ. ಚೂರಿ ಕಾಡಿನಲ್ಲಿ ಸುತ್ತಾಡುತ್ತಿದ್ದ ಹುಲಿಕೆ ಅರವಳಿಕೆ ಚುಚ್ಚುಮದ್ದುಗಳನ್ನು ಹೊಡೆದು ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಇನ್ನು ಹುಲಿಯನ್ನು ಜೀವಂತವಾಗಿಯೇ ಸೆರೆ ಹಿಡಿಯಲಾಗಿದ್ದು, ಅಂದಾಜು 8 ರಿಂದ 9 ವರ್ಷ ಪ್ರಾಯ ಗಂಡು ಹುಲಿ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಇದರಿಂದ ಆತಂಕದಲ್ಲಿದ್ದ ಸ್ಥಳೀಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಸತ್ತವರದ್ದೇ ತಪ್ಪೆಂದು ಸರ್ಕಾರದ ಆದೇಶ: ಕೊಡಗಿನ ಚೂರಿಕಾಡಿನಲ್ಲಿ ಹುಲಿ ದಾಳಿ ಪ್ರಕರಣದಲ್ಲಿ ಸತ್ತವರದ್ದೇ ತಪ್ಪು ಎಂದು ಬಿಂಬಿಸಲು ಸರ್ಕಾರ ಪ್ರಯತ್ನಿಸಲು ಮುಂದಾಗಿತ್ತು. ಹುಲಿ ಹಿಡಿಯಲು ಸರ್ಕಾರ ಹೊರಡಿಸಿದ ಆದೇಶದಲ್ಲೇನಿದೆ ಗೊತ್ತಾ.? ಕೆ ಬಾಡಗ ನಾಗರಹೊಳೆ ರಿಸರ್ವ್ ಫಾರೆಸ್ಟ್ ಎಂದು ಸರ್ಕಾರ ತೋರಿಸಿದೆ. ಹುಲಿ ಅರಣ್ಯ ಪ್ರದೇಶಕ್ಕೆ ಬಂದ ಜನರ ಮೇಲೆ ದಾಳಿ ಮಾಡಿದೆ ಎಂದು ಅರ್ಥವಾಗುತ್ತದೆ. ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬಹುದೆಂದು ಈ ರೀತಿಯ ಹುನ್ನಾರ ಮಾಡಿರುವ ಆರೋಪ ಎದುರಾಗಿದೆ. ಸರ್ಕಾರದ ಈ ರೀತಿಯ ಆದೇಶಕ್ಕೆ ಜನರ ಆಕ್ರೋಶ ವ್ಯಕ್ತವಾಗಿದೆ.
Kodagu: ಮತ್ತೊಬ್ಬರ ಮೇಲೆ ದಾಳಿಗೆ ಹುಲಿ ಯತ್ನ, 5 ಸಾಕಾನೆ ಬಳಸಿ 150 ಸಿಬ್ಬಂದಿಯಿಂದ ಕಾರ್ಯಾಚರಣೆ
ಶಾಸಕರ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ: ಸರ್ಕಾರ ಹಾಗೂ ಬಿಜೆಪಿ ಶಾಸಕ ಕೆ.ಜಿ ಬೋಪಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪೊನ್ನಣ್ಣ ಅವರು, ಈ ರೀತಿಯ ಆದೇಶ ಮಾಡುವ ಮೂಲಕ ಜನರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಇದು ನಾಗರಹೊಳೆ ಅರಣ್ಯ ಪ್ರದೇಶವಲ್ಲ. ಅದು ಕಾಫಿ ತೋಟವಾಗಿದೆ. ಪಕ್ಕಾ ಕಂದಾಯ ಭೂಮಿ ಆಗಿದೆ. ಆದರೆ ಸರ್ಕಾರ ನಾಗರಹೊಳೆ ಅರಣ್ಯ ಪ್ರದೇಶ ಎಂದು ತೋರಿಸಿ ಸತ್ತವರ ಮೇಲೆ ತಪ್ಪು ಹೊರಿಸಲಾಗುತ್ತಿದೆ. ಹುಲಿಯನ್ನು ನಾವೇ ಕೊಲ್ಲುತ್ತೇವೆ ಎಂದ ಜನರನ್ನು ಶಾಸಕರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಜನರೇ ಹುಲಿ ಕೊಲ್ಲುವುದಾದರೆ ಅರಣ್ಯ ಇಲಾಖೆಯನ್ನು ಮುಚ್ಚಲಿ ಎಂದು ಜನರ ಭಾವನೆಗಳನ್ನು ಕೆರಳಿಸಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.