ಕೊಡಗಿನ ಗಿರೀಶ್, ಗಯಾನಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಕೋಮಾಕ್ಕೆ ಜಾರಿದ್ದಾರೆ. ಬಡ ಕುಟುಂಬದಿಂದ ಬಂದ ಗಿರೀಶ್‌ರನ್ನು ಭಾರತಕ್ಕೆ ಕರೆತರಲು ಹಣವಿಲ್ಲದೆ ಕುಟುಂಬ ಪರದಾಡುತ್ತಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.6) : ಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಆತ ನರ್ಸಿಂಗ್ ಓದಿದ್ದ. ನಮ್ಮ ಕುಟುಂಬವೂ ಆರ್ಥಿಕವಾಗಿ ಮೇಲೆ ಬರಬೇಕೆಂಬ ಹಂಬಲದಿಂದ ದುಡಿಯಲು ವಿದೇಶಕ್ಕೆ ಹಾರಿದ್ದ. ಹಾಗೆ ಹೋದ ಎರಡನೇ ವರ್ಷದಲ್ಲಿ ವಿಧಿ ಆತನ ಬಾಳಲ್ಲಿ ಆಟವಾಡಿದೆ. ಇದೀಗ ವಿದೇಶದಲ್ಲೇ ಪ್ರಜ್ಞಾಹೀನನಾಗಿ ಮಲಗಿದ್ದು ತಾಯ್ನಾಡಿಗೆ ವಾಪಸ್ ಮರಳಲು ದಿಕ್ಕು ತೋಚದಂತೆ ಆಗಿದೆ.
ತೀರಾ ಬಡತನದಲ್ಲಿ ಹುಟ್ಟಿ ಬೆಳೆದು ವಿದೇಶದಲ್ಲಿ ಉದ್ಯೋಗ ಅರಸಿ ಗಯಾನಾ ದೇಶಕ್ಕೆ ಹೋದ ಇವರು ಗಿರೀಶ್. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದವರು. ಕಷ್ಟಪಟ್ಟು ನರ್ಸಿಂಗ್ ಓದಿಕೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದರು. ಅದರ ನಡುವೆ ಜಾನಕಿ ಎಂಬುವವರನ್ನು ವಿವಾಹವಾಗಿದ್ದ ಇವರಿಗೆ ಮುದ್ದಾದ ಮಗುವೊಂದು ಇತ್ತು. ಹೆಚ್ಚಿನ ದುಡಿಮೆ ಮಾಡಬೇಕು ಎಂಬ ಆಸೆಯಿಂದ ಪತ್ನಿ ಮಗುವನ್ನು ಬಿಟ್ಟು ಗಿರೀಶ್ ಗಯಾನಾ ವಿದೇಶಕ್ಕೆ ಹಾರಿದ್ದರು. ಗಯಾನಾದ ಪನಾಮಾ ಸಿಟಿ ಶೆರಿಫ್ ಜನರಲ್ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿ ಗಿರೀಶ್ ಕೆಲಸ ಮಾಡುತ್ತಿದ್ದರು.
ಕಳೆದ ನಾಲ್ಕು ದಿನಗಳ ಹಿಂದೆ ಬ್ರೈನ್ ಸ್ಟ್ರೋಕ್ ಆದ ಕಾರಣ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಕೋಮಾಸ್ಥಿತಿಯಲ್ಲಿ ಇದ್ದಾರೆ. ಗಿರೀಶ್ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ಈಗ ಗಿರೀಶ್ ಕುಟುಂಬಕ್ಕೆ ಗೊತ್ತಾಗಿದ್ದು ಕುಟುಂಬದವರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ. ಗಿರೀಶ್ನನ್ನು ಇದೀಗ ವಾಪಸ್ ತಾಯ್ನಾಡಿಗೆ ಕರೆತರಲು ದಿಕ್ಕು ತೋಚದಂತೆ ಆಗಿದೆ. ಅಲ್ಲಿರುವ ಸಿಬ್ಬಂದಿಯೊಂದಿಗೆ ಗಿರೀಶ್ನನ್ನು ಭಾರತಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಆಸ್ಪತ್ರೆಯವರು ಮಾತ್ರ ಗಿರೀಶ್ ಕೋಮಾಸ್ಥಿತಿಯಲ್ಲಿ ಇರುವುದರಿಂದ ನಿಮ್ಮ ಕುಟುಂಬದವರು ಯಾರಾದರೂ ಬಂದರೆ ಮಾತ್ರವೇ ಕಳುಹಿಸಿಕೊಡಲು ಸಾಧ್ಯ ಎನ್ನುತ್ತಿದ್ದಾರೆ.
ಗಿರೀಶ್ ಪತ್ನಿ ಜಾನಕಿ ಚಿಕ್ಕಮಗುವನ್ನು ಹೊಂದಿದ್ದು ಗಂಡನ ಪರಿಸ್ಥಿತಿ ತಿಳಿದು ದಿಕ್ಕು ತೋಚದಂತೆ ಆಗಿದ್ದಾರೆ. ಮತ್ತೊಂದೆಡೆ ಗಿರೀಶನನ್ನು ಕರೆತರಲು ಗಯಾನಕ್ಕೆ ಹೋಗುವುದಕ್ಕೆ ಈ ಕುಟುಂಬದವರು ಯಾರೂ ಅಷ್ಟು ಶಿಕ್ಷಿತರು ಅಲ್ಲ, ಜೊತೆಗೆ ಇವರ ಕುಟುಂಬದವರ ಯಾರಿಗೂ ವೀಸಾ ಇಲ್ಲ. ಎರಡು ವರ್ಷಗಳಿಂದಲೂ ದಿನಕ್ಕೆ ಎರಡು ಬಾರಿ ತಮ್ಮ ತಾಯಿ ಹಾಗೂ ಪತ್ನಿಗೆ ವೀಡಿಯೋ ಕರೆ ಮಾಡಿ ಮಾತನಾಡಿಸುತ್ತಿದ್ದರಂತೆ. ಆದರೆ ಮೂರು ದಿನಗಳಿಂದ ಗಿರೀಶ್ ಕರೆ ಮಾಡದಿರುವುದರಿಂದ ಆರೋಗ್ಯ ಸರಿಯಿಲ್ಲದಿರುವ ತಾಯಿ ಜಾನಕಿ ಕೂಡ ತಮ್ಮ ಮಗನಿಗಾಗಿ ಅಂಬಲಿಸುತ್ತಿದ್ದಾರೆ. ಒಂದೆಡೆ ಗಯಾನಕ್ಕೆ ಹೋಗಿ ಗಿರೀಶನನ್ನು ವಾಪಸ್ ಕರೆತರುವುದಕ್ಕೆ ಏರ್ ಅಂಬ್ಯುಲೆನ್ಸ್ ಬೇಕಾಗಿದ್ದು 25 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎನ್ನಲಾಗುತ್ತಿದೆ. ಗಿರೀಶ್ ರನ್ನು ಭಾರತಕ್ಕೆ ಕರೆಸಿಕೊಡುವಂತೆ ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ. ಪತಿಯನ್ನು ಕರೆಸಿಕೊಡುವಂತೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ತಾಯಿ, ಪತ್ನಿ ಮನವಿ ಮಾಡಿದ್ದಾರೆ.
ಗಿರೀಶ್ ಕರೆಸಿಕೊಳ್ಳಲು ಲಕ್ಷಾಂತರ ರೂ ವೆಚ್ಚ ತಗಲುತಿದ್ದು, ಅಷ್ಟು ವೆಚ್ಚ ಬರಿಸಲಾಗದೆ ಕುಟುಂಬ ಪರದಾಡುತ್ತಿದೆ. ಒಟ್ಟಿನಲ್ಲಿ ಎಲ್ಲರಂತೆ ದುಡಿದು ನಾವು ನೆಮ್ಮದಿಯ ಬದುಕು ನಡೆಸಬೇಕೆಂಬ ಹಂಬಲದಿಂದ ಗಯಾನಾಕ್ಕೆ ಹೋದ ಗಿರೀಶ್ ಕೋಮಾಸ್ಥಿತಿಯಲ್ಲಿದ್ದು ಅವರನ್ನು ವಾಪಸ್ ಕರೆ ತರಲು ಇಡೀ ಕುಟುಂಬ ದಿಕ್ಕು ತೋಚದೆ ಕಣ್ಣೀರಿಡುತ್ತಿದೆ.


