ಕೊಡಗು ದೇವಾಲಯದಲ್ಲಿ ಧಾರ್ಮಿಕ ಉಡುಪು ವಿವಾದ; ಕೊಡವ-ಗೌಡ ಸಂಘರ್ಷಕ್ಕೆ ಹೊಸ ತಿರುವು!

ಕೊಡಗಿನ ಕಟ್ಟೆಮಾಡು ಮಹಾಮೃತ್ಯುಂಜಯ ದೇವಾಲಯದಲ್ಲಿ ಕುಪ್ಯೆಚಾಲೆ ಧರಿಸಿ ಬರುವ ವಿಚಾರದಲ್ಲಿ ಆರಂಭವಾದ ಗಲಾಟೆ ಹೊಸ ತಿರುವು ಪಡೆದುಕೊಂಡಿದೆ. ದೇವಾಲಯದ ಹೆಸರು ಮತ್ತು ಆಚರಣೆಗಳ ಬದಲಾವಣೆಯಿಂದ ಗಲಾಟೆಗೆ ಕಾರಣ ಎಂದು ಅಖಿಲ ಕೊಡವ ಸಮಾಜ ಆರೋಪಿಸಿದೆ. ಗೌಡ ಸಮಾಜದ ಮುಖಂಡರು ಇದನ್ನು ಅಲ್ಲಗಳೆದಿದ್ದು, ಅಧಿಕಾರಕ್ಕಾಗಿ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದಿದ್ದಾರೆ.

Kodagu communal calsh controversy kodav community outraged against gowda community rav

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜ.4) : ಕೊಡವರ ಸಾಂಪ್ರದಾಯಿಕ ಉಡುಗೆ ಕುಪ್ಯೆಚಾಲೆಯನ್ನು ಹಾಕಿಕೊಂಡು ದೇವಾಲಯಕ್ಕೆ ಬರುವಂತಿಲ್ಲ ಎಂದು ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಮಹಾಮೃತ್ಯುಂಜಯ ದೇದಾಲಯದಲ್ಲಿ ಆರಂಭವಾಗಿದ್ದ ಗಲಾಟೆ ಹೊಸ ತಿರುವು ಪಡೆದುಕೊಂಡಿದೆ. 

ಇದುವರೆಗೆ ಕುಪ್ಯೆಚಾಲೆಯನ್ನು ಹಾಕಿಕೊಂಡು ದೇವಾಲಯಕ್ಕೆ ಬಂದರೆ ಇವರಿಗೇನು ಕಷ್ಟ ಎನ್ನುತ್ತಿದ್ದ ಕೊಡವರು ಈಗ ದೇವಾಲಯದ ಹೆಸರನ್ನೇ ಬದಲಾಯಿಸಿ ಅದರ ಆಚಾರ, ವಿಧಿ ವಿಧಾನಗಳನ್ನೇ ಬದಲಾಯಿಸಲಾಗಿದೆ. ಇದರಿಂದಾಗಿ ದೇವಾಲಯದಲ್ಲಿ ಇಂತಹ ಗಲಭೆಯಾಗುವುದಕ್ಕೆ ಕಾರಣವಾಗಿದೆ ಎಂದು ಅಖಿಲ ಕೊಡವ ಸಮಾಜ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. 

ಮಹದೇವ ದೇವಾಲಯದ ಹೆಸರನ್ನು ಮಹದೇಶ್ವರ ಅಥವಾ ಮಹಾಮೃತ್ಯುಂಜಯ ಎಂದು ಬದಲಾಯಿಸಿದ್ದಾರೆ. ಇದೊಂದು ಅತ್ಯಂತ ಪುರಾತನ ದೇವಾಲಯವಾಗಿದ್ದು ಇದಕ್ಕೂ ಒಬ್ಬರು ತಂತ್ರಿಗಳಿದ್ದಾರೆ. ಇದಕ್ಕೂ ಅದರದ್ದೇ ಆದ ಪೂಜಾ ವಿಧಿವಿಧಾನಗಳಿವೆ. ತಂತ್ರಿಗಳನ್ನೆಲ್ಲಾ ಹೊರಗಿಟ್ಟು, ಪೂಜಾ ವಿಧಿ, ವಿಧಾನಗಳನ್ನೆಲ್ಲಾ ಬದಲಾಯಿಸಿ ಇದೀಗ ಅವುಗಳಿಗೆ ಭಂಗ ಆಗುವಂತೆ ಮಾಡಿದ್ದಾರೆ. ಹೀಗಾಗಿಯೇ ದೇವಾಲಯದಲ್ಲಿ ವಾರ್ಷಿಕ ಪೂಜೆಯ ವೇಳೆ ಇಂತಹ ಗಲಭೆ, ಘಟನೆಗಳೆಲ್ಲಾ ಆಗುವುದಕ್ಕೆ ಕಾರಣವಾಗಿದೆ. ದೇವಾಲಯದಲ್ಲಿ ಹಣಕಾಸಿನ ವ್ಯವಹಾರದಲ್ಲೂ ಸಾಕಷ್ಟು ಅವ್ಯವಹಾರ ಆಗಿರುವ ಸಾಧ್ಯತೆ ಇದೆ. ಹೀಗಾಗಿ ದೇವಾಲಯವನ್ನು ಸರ್ಕಾರ ತನ್ನ ವಶಕ್ಕೆ ಪಡೆಯಬೇಕು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಸುಬ್ರಹ್ಮಣಿ ಕಾವೇರಪ್ಪ ಹೇಳಿದ್ದಾರೆ. 

ಇದನ್ನೂ ಓದಿ: ಕೊಡಗಿನಲ್ಲಿ ತಣ್ಣಗಾಗದ ವಸ್ತ್ರ ಸಂಹಿತೆ ದಂಗಲ್ ಕಿಚ್ಚು; ಎರಡು ಸಮುದಾಯ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ನಿಂದನೆ

ಆದರೆ ಇದಕ್ಕೆ ತಿರುಗೇಟು ನೀಡಿರುವ ಗೌಡ ಸಮಾಜದ ಮುಖಂಡರು ಹಾಗೂ ದೇವಾಲಯ ಸಮಿತಿಯ ಸದಸ್ಯರು ದೇವಾಲಯ ನಿರ್ಮಾಣದ ಕಾರ್ಯದಲ್ಲಿ ಕೊಡವರು ಸಣ್ಣ ಒಂದೇ ಒಂದು ಕಸ, ಕಡ್ಡಿಯನ್ನು ತೆಗೆದು ಆಚೆಗೆ ಹಾಕುವ ಕೆಲಸ ಮಾಡಿಲ್ಲ. ಆದರೆ ಈಗ ಅಧಿಕಾರಕ್ಕಾಗಿ ಏನೆಲ್ಲಾ ಇಲ್ಲದ ಸುಳ್ಳುಗಳನ್ನು ಸೃಷ್ಠಿ ಮಾಡುತ್ತಿದ್ದಾರೆ. ದೇವಾಲಯಕ್ಕೆ ನಾಲ್ಕೈದು ಕೋಟಿ ವೆಚ್ಚವಾಗಿದ್ದು ಎಲ್ಲರೂ ದೇಣಿಗೆ ನೀಡಿದ್ದಾರೆ. ಜೊತೆಗೆ ದೇವಾಲಯಕ್ಕಾಗಿ ಕೆಲಸವನ್ನು ಮಾಡಿದ್ದಾರೆ. ಹೀಗಿರುವಾಗ ಯಾವುದೇ ಒಂದು ಸಮುದಾಯದ ಸಂಸ್ಕೃತಿ ದೇವಾಲಯದಲ್ಲಿ ಬಿಂಬಿತವಾಗುವುದಕ್ಕೆ ಬಿಡುವುದಿಲ್ಲ. ಹಾಗೆ ನೋಡಿದರೆ ಗೌಡ ಸಮುದಾಯಕ್ಕೂ ತಮ್ಮದೇ ಆದ ಉಡುಗೆ ಇದೆ. ಹಾಗಂತ ನಾವೂ ಮತ್ತು ಕೊಡವರು ಅವರ ಸಾಂಪ್ರದಾಯಿಕ ಉಡುಗೆಗಳನ್ನು ಹಾಕಿಕೊಂಡು ದೇವಾಲಯಕ್ಕೆ ಬರಲು ಆರಂಭಿಸಿದರೆ ಈ ರೀತಿ ವಿಶೇಷ ಉಡುಗೆ ಇಲ್ಲದ ಎಷ್ಟೋ ಸಮುದಾಯಗಳು ದೇವಾಲಯದಲ್ಲಿ ಮೂಲೆಗುಂಪು ಆದದಂತೆ ಆಗುತ್ತದೆ. ಇದರಿಂದ ಯಾವುದೇ ಕಾರಣಕ್ಕೂ ಯಾವ ಸಮುದಾಯದ ಸಾಂಪ್ರದಾಯಿಕ ಉಡುಗೆಗೆ ಅವಕಾಶ ನೀಡುವುದಿಲ್ಲ. ಇಲ್ಲಿ ಉಡುಗೆಯ ವಿಷಯ ಕೇವಲ ನೆಪ ಮಾತ್ರವಾಗಿದ್ದು ಗೌಡ ಸಮುದಾಯದವರು ದೇವಾಲಯದ ಸಮಿತಿ ಅಧ್ಯಕ್ಷರಾಗಿದ್ದಾರೆ ಎಂಬುದನ್ನು ಸಹಿಸಿಕೊಳ್ಳಲಾಗದೆ ಕೊಡವರಿಗೆ ಅದರ ಆಡಳಿತ ಬೇಕು ಎನ್ನುವ ಕಾರಣಕ್ಕೆ ಈ ಅಶಾಂತಿಯನ್ನು ಸೃಷ್ಟಿಸಲಾಗಿದೆ ಎಂದು ದೇವಾಲಯ ಸಮಿತಿ ಸದಸ್ಯ, ಗೌಡ ಸಮುದಾಯದ ಮುಖಂಡ ಪ್ರಸನ್ನ ಹೇಳಿದ್ದಾರೆ.

ಶಾಸಕ ಎ.ಎಸ್.ಪೊನ್ನಣ್ಣ ಪ್ರತಿಕೃತಿ ದಹನ: ಕೊಡವರ ಸಂಪ್ರದಾಯಕ್ಕೆ ಅಪಮಾನ ಎಂದು ಕಾಂಗ್ರೆಸ್ ಆಕ್ರೋಶ 

ದೇವಾಲಯದ ಬೈಲಾವನ್ನು ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡುವುದೇ ಇಲ್ಲ. ಯಾರೂ ದೇವಾಲಯಕ್ಕೆ ಬರುವುದಕ್ಕೂ ನಮ್ಮ ವಿರೋಧವಿಲ್ಲ, ಆದರೆ ಯಾರ ಸಾಂಪ್ರದಾಯಿಕ ಆಚರಣೆಗಳಿಗೂ ಇಲ್ಲಿ ಅವಕಾಶವಿಲ್ಲ ಎಂದು ಗೌಡ ಸಮುದಾಯದ ಮುಖಂಡರು ನಿರ್ಧಾರ ತಿಳಿಸಿದ್ದಾರೆ. ಒಟ್ಟಿನಲ್ಲಿ ಸಾಂಪ್ರದಾಯಿಕ ಉಡುಗೆಯಕ್ಕೆ ಆರಂಭವಾದ ಗಲಾಟೆಯ ಹಿಂದೆ ನಿಜವಾಗಿಯೂ ಅಧಿಕಾರ ಲಾಲಸೆಯೇ ಇದೆಯಾ ಅಥವಾ ಉಡುಗೆ ವಿಚಾರಕ್ಕಾಗಿಯೇ ಇದೆಲ್ಲಾ ಆಗಿದೆಯಾ ಎನ್ನುವುದು ಬಯಲಾಗಿ ಶಾಂತಿ ಸುವ್ಯವಸ್ಥೆ ನೆಲಸಬೇಕಾದ ಅಗತ್ಯವಿದೆ.

Latest Videos
Follow Us:
Download App:
  • android
  • ios