Asianet Suvarna News Asianet Suvarna News

ಮಕ್ಕಳ ದಿನ: ನಮ್ಮ ದೇಶದಲ್ಲಿ ಮಕ್ಕಳು ಎಷ್ಟು ಸುರಕ್ಷಿತ?

ದಕ್ಷಿಣ ಭಾರತದ ರಾಜ್ಯಗಳನ್ನು ಹೋಲಿಸಿದರೆ ಕರ್ನಾಟಕದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ದಾಖಲಾಗಿವೆ. 2015ರಲ್ಲಿ 3,961 ಪ್ರಕರಣಗಳು ದಾಖಲಾಗಿದ್ದರೆ, 2016ರಲ್ಲಿ 4,455 ಪ್ರಕರಣಗಳು ದಾಖಲಾಗಿವೆ.  

Know How Much Safe Our Children Are On The Occasion Of Children Day
Author
Bengaluru, First Published Nov 14, 2019, 4:48 PM IST

ಮಕ್ಕಳೆಂದರೆ ದೇವರು, ಆದ್ದರಿಂದಲೇ ಮಕ್ಕಳಿರಲಿ ಮನೆ ತುಂಬ ಎನ್ನುವ ದೇಶ ನಮ್ಮದು. ಆದರೆ, ಈಗ ಎಲ್ಲವೂ ಬದಲಾಗುತ್ತಿದೆ. ಇಂಥ ಪುಟಾಣಿಗಳನ್ನೇ ಕಾಮದ ವಸ್ತುವನ್ನಾಗಿ ನೋಡುವ ವಿಕೃತ ಮನಸ್ಸಿನ ಜನರೂ ಹೆಚ್ಚುತ್ತಿದ್ದಾರೆ.

ಮಕ್ಕಳ ಕಳ್ಳಸಾಗಾಣಿಕೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳೂ ದಿನೇ ದಿನೇ ಹೆಚ್ಚುತ್ತಿವೆ. ಇತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಎನ್‌ಸಿಆರ್‌ಬಿ) -2017ನೇ ಸಾಲಿನ ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಆಘಾತಕಾರಿ ಅಂಶಗಳು ಬಯಲಾಗಿವೆ.

ಮಕ್ಕಳ ಜೊತೆ ಮಗುವಾದ ಯಶ್; ರಾಕಿ ಭಾಯ್ ಜೊತೆ ಮಕ್ಕಳೂ ಖುಷ್!

ಮಕ್ಕಳ ಮೇಲಿನ ದೌರ್ಜನ್ಯ 20% ಏರಿಕೆ

ಎನ್‌ಸಿಆರ್‌ಬಿ ವರದಿ ಪ್ರಕಾರ 2015ರಿಂದ 2017ರ ವೇಳೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಮಾಣ 20% ಏರಿಕೆಯಾಗಿದೆ. ಒಟ್ಟು ಅಪರಾಧದಲ್ಲಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಕ್ರಮವಾಗಿ 14.8% ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರವಿದೆ.

ಒಟ್ಟು ದೌರ್ಜನ್ಯದಲ್ಲಿ ಈ 3 ರಾಜ್ಯಗಳಲ್ಲಿಯೇ 45%ಗೂ ಹೆಚ್ಚು ದೌರ್ಜನ್ಯ ನಡೆಯುತ್ತಿವೆ ಎಂದು ವರದಿ ಹೇಳಿದೆ. ಇನ್ನು ಈಶಾನ್ಯ ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ನಾಗಾಲ್ಯಾಂಡ್‌, ಸಿಕ್ಕಿಂ, ಮಣಿಪುರಗಳಲ್ಲಿ 0.1% ದೌರ್ಜನ್ಯ ಪ್ರಕರಣಗಳು ಸಾಕ್ಷಿಯಾಗಿವೆ.

2015-94,172

2016-1,06,958

2017-1,29,032

ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಹೆಚ್ಚು ಕೇಸು

ದಕ್ಷಿಣ ಭಾರತದ ರಾಜ್ಯಗಳನ್ನು ಹೋಲಿಸಿದರೆ ಕರ್ನಾಟಕದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ದಾಖಲಾಗಿವೆ. 2015ರಲ್ಲಿ 3,961 ಪ್ರಕರಣಗಳು ದಾಖಲಾಗಿದ್ದರೆ, 2016ರಲ್ಲಿ 4,455 ಪ್ರಕರಣಗಳು ದಾಖಲಾಗಿವೆ.

ಅಲ್ಲದೆ ಅಪ್ರಾಪ್ತರ ಮೇಲೆ 2017ರಲ್ಲಿ 5,890 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಬೆಂಗಳೂರಿನಲ್ಲಿ ಇಂಥ ಪ್ರಕರಣಗಳು ಹೆಚ್ಚು. ನೆರೆಯ ಆಂಧ್ರಪ್ರದೇಶ, ಕೇರಳದಲ್ಲೂ 2015ಕ್ಕಿಂತ ಅಲ್ಪಮಟ್ಟಿಗೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಏರಿಕೆಯಾಗಿವೆ.

'ಮಕ್ಕಳ ದಿನಾಚರಣೆ' ಗೂಗಲ್ ಡೂಡಲ್ ವಿಶ್; ಮಕ್ಕಳು ಫುಲ್ ಖುಷ್!

ಹಾಗೆಯೇ ಕರ್ನಾಟಕದಲ್ಲಿ ಮಕ್ಕಳ ಕೊಲೆ ಪ್ರಕರಣಗಳೂ ಹೆಚ್ಚಾಗಿದ್ದು, 2015-17ರಲ್ಲಿ 109 ಮಕ್ಕಳು ಕೊಲೆಯಾಗಿದ್ದಾರೆ. ಇದು ದಕ್ಷಿಣ ಭಾರತದ ರಾಜ್ಯಗಳಲ್ಲೇ ಹೆಚ್ಚು. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ದೇಶದಲ್ಲೇ ಅತಿ ಹೆಚ್ಚು ಕೊಲೆಗಳು ನಡೆದಿವೆ.

ಮಕ್ಕಳ ಮೇಲಿನ ದೌರ್ಜನ್ಯ ಅಂದರೆ ಏನು?

ಮಕ್ಕಳಿಗೆ ಹಾನಿಯುಂಟು ಮಾಡುವ (ದೈಹಿಕವಾಗಿ, ಮಾನಸಿಕವಾಗಿ ಅಥವಾ ಭಾವನಾತ್ಮವಾಗಿ) ಯಾವುದೇ ತರಹದ ವರ್ತನೆಯನ್ನು ದೌರ್ಜನ್ಯ ಎಂದೇ ಪರಿಗಣಿಸಬಹುದು. ಉದಾಹರಣೆಗೆ ಕೆಟ್ಟದಾಗಿ ನಡೆಸಿಕೊಳ್ಳುವುದು, ನಿಂದನೆ, ನಿರ್ಲಕ್ಷ್ಯ, ಭಿಕ್ಷೆ ಬೇಡುವಂತೆ ಮಾಡುವುದು, ಬಾಲ ಕಾರ್ಮಿಕರಾಗಿ ದುಡಿಸುವುದು, ದೈಹಿಕ ಹಿಂಸೆ, ಅತ್ಯಾಚಾರ, ಕಾಮುಕ ದೃಷ್ಟಿಯಲ್ಲಿ ನೋಡುವುದು, ಮಕ್ಕಳನ್ನು ಪೋರ್ನೋಗ್ರಫಿಯಲ್ಲಿ ಬಳಸಿಕೊಳ್ಳುವುದು ಇತ್ಯಾದಿಗಳೆಲ್ಲವೂ ದೌರ್ಜನ್ಯವೇ.

ಆದರೆ ಬಹುತೇಕ ಸಂದರ್ಭಗಳಲ್ಲಿ ಈ ದೌರ್ಜನ್ಯ ಮಕ್ಕಳ ಗಮನಕ್ಕೇ ಬಂದಿರುವುದಿಲ್ಲ. ಕೆಲವೊಮ್ಮೆ ಮಕ್ಕಳೇ ಅದನ್ನು ಗುರುತಿಸಿ ತಂದೆ ತಾಯಿಯೊಂದಿಗೆ ಹೇಳಿಕೊಂಡರೂ ಪೋಷಕರು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಗಾಗಿಯೇ ಎಷ್ಟೋ ಮಕ್ಕಳು ಮನಸ್ಸಲ್ಲಿಯೇ ನೊಂದು ಆತ್ಮಹತ್ಯೆಗೆ ಶರಣಾದ ಘಟನೆಗಳಿವೆ. ಇನ್ನು ಕೆಲವೊಮ್ಮೆ ಡ್ರಗ್ಸ್‌, ಸಿಗರೇಟ್‌ ಮುಂತಾದ ವ್ಯಸನಗಳನ್ನು ರೂಢಿಸಿಕೊಂಡು ಕುಕೃತ್ಯಗಳಲ್ಲಿ ತೊಡಗಿಸಿಕೊಂಡು ಮುಂದೆ ಸಮಾಜಕ್ಕೇ ಕಂಟಕವಾಗುವ ಅಪಾಯವಿದೆ.

ಭಾವನಾತ್ಮಕ ದೌರ್ಜನ್ಯ

ಚಿಕ್ಕ ವಯಸ್ಸಿನ ಮಕ್ಕಳು ಅತಿ ಹೆಚ್ಚು ಅನುಭವಿಸುತ್ತಿರುವ ದೌರ್ಜನ್ಯ ಇದು. ತಮ್ಮ ಸುತ್ತಮುತ್ತಲ ಪರಿಸರದಲ್ಲಿ ವ್ಯಕ್ತವಾಗುವ ಟೀಕೆ, ತಿರಸ್ಕಾರ, ತಾರತಮ್ಯ, ಅವಮಾನ, ನಿರ್ಲಕ್ಷ್ಯ, ಏಕಾಂಗಿತನ, ಭ್ರಷ್ಟತೆ, ದುರ್ಬಳಕೆ ಇತ್ಯಾದಿಗಳು ಭಾವನಾತ್ಮಕ ದೌರ್ಜನ್ಯ ಎನಿಸಿಕೊಳ್ಳುತ್ತವೆ.

ಇದೇ ತರಹದ ಪರಿಸರದಲ್ಲಿ ಮಕ್ಕಳು ಬೆಳೆದರೆ ಹಿಂಸಾತ್ಮಕವಾಗಿ ವರ್ತಿಸುತ್ತಾರೆ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಇಂಥ ದೌರ್ಜನ್ಯಗಳನ್ನು ಮಕ್ಕಳು ಎದುರಿಸುತ್ತಿದ್ದರೆ ತತ್‌ಕ್ಷಣಕ್ಕೆ ಮಕ್ಕಳ ವರ್ತನೆಯಲ್ಲೇ ಅದು ಗೋಚರವಾಗುತ್ತದೆ. ಆದರೆ ಅದನ್ನು ಪೋಷಕರು ಗುರುತಿಸಿಬೇಕಷ್ಟೆ.

- ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಾರೆ

- ಮನೋಬೇನೆ (ತಲೆನೋವು, ವಾಕರಿಕೆ, ಕಿಬ್ಬೊಟ್ಟೆನೋವಿನಿಂದ ಬಳಲುತ್ತಾರೆ)

- ಆತ್ಮಹತ್ಯೆಗೆ ಮುಂದಾಗಬಹುದು, ಡ್ರಗ್‌ ಅಥವಾ ಮದ್ಯಪಾನಿಗಳಾಗಬಹುದು

- ಆಟದ ವೇಳೆ ಒರಟಾಗಿ ವರ್ತಿಸುತ್ತಾರೆ

ಲೈಂಗಿಕ ದೌರ್ಜನ್ಯ

ನಮ್ಮ ದೇಶದಲ್ಲಿ ಶೇ.53 ಮಕ್ಕಳು ಒಂದಲ್ಲಾ ಒಂದು ರೀತಿಯ ಲೈಂಗಿಕ ಶೋಷಣೆಗೆ ಗುರಿಯಾಗುತ್ತಿದ್ದಾರೆ ಎಂದು ಅಧ್ಯಯಗಳು ಹೇಳುತ್ತವೆ. ಇದರಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲ. ಮಕ್ಕಳನ್ನು ಹತ್ತಿರದಿಂದ ಬಲ್ಲವರು ಹಾಗೂ ಮಕ್ಕಳು ಅತಿ ಹೆಚ್ಚು ನಂಬುವ ವ್ಯಕ್ತಿಗಳಿಂದಲೇ ಇಂಥ ಕೃತ್ಯ ನಡೆಯುತ್ತದೆ. ಲೈಂಗಿಕ ದೃಷ್ಟಿಯಿಂದ ಸ್ಪರ್ಶಿಸುವುದು, ಜನನಾಂಗ, ಎದೆಯ ಭಾಗವನ್ನು ಮುದ್ದಿಸುವುದು, ಮಕ್ಕಳೆದುರು ನಗ್ನರಾಗುವುದು ಇವು ಲೈಂಗಿಕ ದೌರ್ಜನ್ಯ.

ಇದಲ್ಲದೆ ಕೆಟ್ಟಉದ್ದೇಶದಿಂದ ಅರೆನಗ್ನರಾಗಿರುವ ಮಕ್ಕಳ ಫೋಟೋ ತೆಗೆಯುವುದು, ಚೈಲ್ಡ್‌ ಪೋರ್ನೋಗ್ರಫಿಗೆ ಅದನ್ನು ಬಳಸುವುದು, ಮಕ್ಕಳೊಂದಿಗೆ ಅಶ್ಲೀಲ ಲೈಂಗಿಕ ಸಂಭಾಷಣೆ ನಡೆಸುವುದು ಇತ್ಯಾದಿಗಳೂ ಲೈಂಗಿಕ ದೌರ್ಜಜ್ಯಗಳಾಗುತ್ತವೆ. ಹಲವು ಬಾರಿ ಪುಟ್ಟಮಕ್ಕಳಿಗೆ ಇಂಥ ನಡವಳಿಕೆಗಳ ಅರ್ಥವೇನು ಎಂದೂ ತಿಳಿಯುವುದಿಲ್ಲ. ಆಗ ಪೋಷಕರು ಇದನ್ನು ಪತ್ತೆಹಚ್ಚಿ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು.

ಮಕ್ಕಳ ಮೇಲಿನ ದೌರ್ಜನ್ಯ ಪತ್ತೆಹಚ್ಚುವುದು ಹೇಗೆ?

- ಒಳವಸ್ತ್ರಗಳ ಹರಿದಿರುವಿಕೆ ಅಥವಾ ರಕ್ತದ ಕಲೆ

- ಜನನಾಂಗವು ಊದಿಕೊಂಡಿದ್ದರೆ, ಕೆಂಪು ಬಣ್ಣಕ್ಕೆ ತಿರುಗಿದ್ದರೆ

- ಅಸ್ವಾಭಾವಿಕ ತುರಿಕೆ, ನೋವು

- ಕೂರಲು ಮತ್ತು ನಡೆಯಲು ಮಕ್ಕಳು ಕಷ್ಟಪಡುತ್ತಿದ್ದರೆ

- ನಿದ್ರಾಹೀನತೆ, ಭಯ, ಆಹಾರದಲ್ಲಿ ಏರುಪೇರು, ತನಗೆ ತಾನೇ ಹಾನಿಯುಂಟು ಮಾಡಿಕೊಳ್ಳುವುದು ಇತ್ಯಾದಿ

ಪೋಷಕರೇನು ಮಾಡಬೇಕು?

- ದೌರ್ಜನ್ಯ ಎಂದರೇನು, ಯಾವ ರೀತಿ ನಡೆಯುತ್ತದೆಂಬ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು

- ಮಕ್ಕಳ ವರ್ತನೆಯನ್ನು ಗಮನಿಸುತ್ತಿರಬೇಕು

- ಪರಿಚಯಸ್ಥರು ಮಕ್ಕಳೊಂದಿಗೆ ಹೇಗೆ ವರ್ತಿಸುತ್ತಾರೆಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು

ದೌರ್ಜನ್ಯದ ಬಗ್ಗೆ ನಿರ್ಲಕ್ಷ್ಯ ಏಕೆ?

ಕೆಲವು ದೇಶಗಳಲ್ಲಿ ಬೇರೆಯವರ ಮಕ್ಕಳನ್ನು ಸ್ಪರ್ಶಿಸಿದರೂ ಅದು ದೌರ್ಜನ್ಯವೆಂದೆನಿಸಿಕೊಳ್ಳುತ್ತದೆ. ಆದರೆ, ನಮ್ಮ ದೇಶದ ಕತೆಯೇ ಬೇರೆ. ಮಕ್ಕಳಲ್ಲಿ ದೇವರನ್ನು ಕಾಣುವ ದೇಶ ನಮ್ಮದು. ಆದರೆ, ಇಲ್ಲಿಯೂ ಮೌಲ್ಯಗಳು ಕುಸಿದು ಮಕ್ಕಳನ್ನು ಕಾಮದ ವಸ್ತುಗಳಂತೆ ಕಾಣುವ ಪ್ರವೃತ್ತಿ ಹೆಚ್ಚುತ್ತಿದೆ. ಅತ್ಯಂತ ನಿಕಟವರ್ತಿಗಳಿಂದಲೇ ಇದು ನಡೆಯುತ್ತಿರುತ್ತದೆ. ಆದರೆ ಸಂಬಂಧಗಳ ಬಗ್ಗೆ ನಮಗಿರುವ ನಂಬಿಕೆಗಳಿಂದಲೇ ದೌರ್ಜನ್ಯಗಳು ನಡೆದರೂ ಗಮನಕ್ಕೆ ಬರುವುದಿಲ್ಲ. ದೌರ್ಜನ್ಯಕ್ಕೊಳಗಾದವರಿಗೇ ಕಳಂಕ ಅಂಟಿಸುವ ನಮ್ಮ ಸಾಮಾಜಿಕ ವ್ಯವಸ್ಥೆಯೂ ಇದಕ್ಕೆ ಮತ್ತೊಂದು ಕಾರಣ. ಹೀಗಾಗಿ ಇನ್ನೂ ಜಗತ್ತನ್ನು ಅರಿಯದ ಮಗು ಇಂತಹ ಕ್ರೌರ್ಯದಿಂದ ಬಾಲ್ಯವನ್ನೇ ಕಳೆದುಕೊಳ್ಳುತ್ತದೆ.

ಮಕ್ಕಳೇ ಪ್ರತಿಭಟಿಸುವವರೆಗೆ, ಪೋಷಕರು ಎದ್ದು ನಿಲ್ಲುವವರೆಗೆ, ದೌರ್ಜನ್ಯವೆಸಗಿದ ವ್ಯಕ್ತಿಯ ವಿರುದ್ಧ ದೂರು ದಾಖಲಾಗುವವರೆಗೆ ಅಪರಾಧಿಗಳು ಆರಾಮಾಗಿರುವ ಪರಿಸ್ಥಿತಿ ಇದೆ. ಒಂದೊಮ್ಮೆ ಪ್ರಕರಣ ಬೆಳಕಿಗೆ ಬಂದು ದೂರು ದಾಖಲಾದರೂ ಆರೋಪಿಗಳನ್ನು ಶಿಕ್ಷಿಸಲು ನಮ್ಮಲ್ಲಿ ಕಾನೂನು ಬಲವಾಗಿಲ್ಲ. ವಿಕೃತ ಮನಸ್ಸುಗಳು ಅದರ ಪ್ರಯೋಜನ ಪಡೆಯುತ್ತಿವೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆಂದೇ ಇದೆ ಪೋಕ್ಸೊ

ಮಕ್ಕಳ ಮೇಲಿನ ದೌರ್ಜನ್ಯ ತಡೆಗೆಂದೇ ಸರ್ಕಾರ 2012ರ ನವೆಂಬರ್‌ 14ರಂದು ಪೋಕ್ಸೊ ಕಾಯ್ದೆ ಜಾರಿಗೆ ತರುವ ಮೂಲಕ ಅತ್ಯಾಚಾರ ಎಸಗುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತಂದಿದೆ. ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲತೆಯ ಅಪರಾಧಗಳಿಂದ ಮಕ್ಕಳ ರಕ್ಷಣೆಗಾಗಿ ದೃಢವಾದ ಕಾನೂನು ಚೌಕಟ್ಟನ್ನು ಒದಗಿಸಲು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯನ್ನು ಜಾರಿಗೆ ತರಲಾಯಿತು.

ಈ ಕಾಯ್ದೆಯಡಿ ನ್ಯಾಯಾಂಗವು ಪ್ರತಿಯೊಂದು ಹಂತದಲ್ಲೂ ಮಗುವಿನ ಹಿತಾಸಕ್ತಿಯನ್ನು ಕಾಪಾಡುತ್ತದೆ. ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಗಲ್ಲು ಶಿಕ್ಷೆ ವಿಧಿಸುವುದೂ ಸೇರಿದಂತೆ ಪೋಕ್ಸೊ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಇತ್ತೀಚೆಗೆ ಒಪ್ಪಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಸೇರ್ಪಡೆ ಮಾಡಲಾಗಿರುವ ಪ್ರಬಲ ನಿಯಮಗಳಿಂದಾಗಿ ಕಾಯ್ದೆಗೆ ಮತ್ತಷ್ಟುಬಲ ಬಂದಿದೆ. ಹಾಗೆಯೇ ಸಂಕಷ್ಟದಲ್ಲಿರುವ ಮಕ್ಕಳ ಸುರಕ್ಷತೆ ಹಾಗೂ ಮಕ್ಕಳ ಘನತೆಯನ್ನು ಕಾಪಾಡುವ ಉದ್ದೇಶವನ್ನೂ ತಿದ್ದುಪಡಿ ಮಸೂದೆ ಹೊಂದಿದೆ.

ಮಕ್ಕಳ ಅಪಹರಣ 25% ಇಳಿಕೆ

ಸಮಾಧಾನದ ಸಂಗತಿ ಎಂದರೆ, ಎನ್‌ಸಿಆರ್‌ಬಿ ವರದಿ ಪ್ರಕಾರ 2016ಕ್ಕಿಂತ 2017ರಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಪ್ರಮಾಣ 25%ನಷ್ಟುಇಳಿದಿದೆ. 2016ರಲ್ಲಿ 9034 ಮಕ್ಕಳು ಅಪಹರಣವಾದ ಪ್ರಕರಣಗಳು ದಾಖಲಾಗಿದ್ದರೆ, 2017ರಲ್ಲಿ ಅದು 3553ಕ್ಕೆ ಇಳಿದಿದೆ. ಪಶ್ಚಿಮ ಬಂಗಾಳ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್‌ ಮತ್ತು ಕರ್ನಾಟಕ ಮಕ್ಕಳ ಕಳ್ಳ ಸಾಗಾಣಿಕೆ ಹೆಚ್ಚಿರುವ ರಾಜ್ಯಗಳು. 2016ರಲ್ಲಿ ಕರ್ನಾಟದಲ್ಲಿ 209 ಮಕ್ಕಳ ಕಳ್ಳ ಸಾಗಾಣಿಕೆ ನಡೆದಿದೆ.

ಕಳ್ಳಸಾಗಾಣಿಕೆ ಬಗ್ಗೆ ನಿರ್ಲಕ್ಷ್ಯ

ಎನ್‌ಸಿಆರ್‌ಬಿ ವರದಿಯಲ್ಲಿ ದೊಡ್ಡ ದೊಡ್ಡ ನಗರಗಳಲ್ಲೇ ಮಕ್ಕಳ ಅಪಹರಣ, ದೌರ್ಜನ್ಯ ಹೆಚ್ಚು ಎಂದು ಹೇಳಲಾಗಿದೆ. ತಂತ್ರಜ್ಞಾನದಲ್ಲಿ ಇಷ್ಟೆಲ್ಲಾ ಮುಂದೆ ಬಂದಿದ್ದರೂ, ಬಲಿಷ್ಠ ಕಾನೂನುಗಳಿದ್ದರೂ ಏಕೆ ಇಂಥ ಪ್ರಕರಣಗಳು ನಿಲ್ಲುತ್ತಿಲ್ಲ ಎಂಬುದಕ್ಕೆ ಉತ್ತರ- ಕಾನೂನುಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ನಗರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ, ಆದರೆ ಅವುಗಳಿಗೆ ಸರಿಯಾಗಿ ಸೆರೆಹಿಡಿಯುವ ಸಾಮರ್ಥ್ಯವೇ ಇರುವುದಿಲ್ಲ.

ಅವು ಸರಿಯಾಗಿ ಕಾರ‍್ಯನಿರ್ವಹಿಸುತ್ತಿವೆಯೇ ಇಲ್ಲವೇ ಎಂಬ ಬಗ್ಗೆ ಆಗಾಗ ಪರಿಶೀಲನೆ ಕೂಡ ಮಾಡುವುದಿಲ್ಲ. ಅಪ್ರಾಪ್ತರು ಕಣ್ಮರೆಯಾಗಿದ್ದರೆ ಅಪಹರಣ ಎಂತಲೇ ಪ್ರಕರಣ ದಾಖಲಿಸಬೇಕು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಅದು ವಾಸ್ತವದಲ್ಲಿ ಇನ್ನೂ ಜಾರಿಯಾಗಿಲ್ಲ. ಅದರ ಬದಲಾಗಿ, ನಿಮ್ಮ ಮಗು ಇನ್ನೆರಡು ದಿನದಲ್ಲಿ ವಾಪಸಾಗುತ್ತದೆ, ಅಲ್ಲೇ ಇಲ್ಲೋ ಇದ್ದಿರಬೇಕು ಎಂದು ಪೊಲೀಸರು ಆಲಸ್ಯ ತೋರುತ್ತಾರೆ.

Follow Us:
Download App:
  • android
  • ios