ಖೋ ಖೋ ವಿಶ್ವಕಪ್ ಗೆದ್ದ ಕರ್ನಾಟಕದ ಆಟಗಾರರು ಸಿಎಂ ಸಿದ್ದರಾಮಯ್ಯ ನೀಡಿದ ₹5 ಲಕ್ಷ ಬಹುಮಾನವನ್ನು ತಿರಸ್ಕರಿಸಿದ್ದಾರೆ. ಸರ್ಕಾರದಿಂದ ಸರಿಯಾದ ಅನುದಾನ ಮತ್ತು ಸವಲತ್ತುಗಳು ದೊರೆಯದಿರುವುದು ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ.
ಬೆಂಗಳೂರು: ಖೋ ಖೋ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಎಂ.ಕೆ ಗೌತಮ್ ಮತ್ತು ಚೈತ್ರಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದ ₹5 ಲಕ್ಷ ಬಹುಮಾನವನ್ನು ತಿರಸ್ಕರಿಸುವುದಾಗಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಚೈತ್ರಾ ಹಾಗೂ ಗೌತಮ್ ಮಾತನಾಡಿ, ‘ಖೋ ಖೋ ಆಟಕ್ಕೆ ನಮ್ಮ ಸರ್ಕಾರದ ಕಡೆಯಿಂದ ಸರಿಯಾಗಿ ಅನುದಾನ ಸಿಗುತ್ತಿಲ್ಲ. ನಾವು ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಬಂದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಕೇವಲ ₹5 ಲಕ್ಷ ಬಹುಮಾನವನ್ನು ಘೋಷಿಸಿದ್ದಾರೆ. ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಆಟಗಾರರಿಗೆ ದೊಡ್ಡ ಮೊತ್ತ ಘೋಷಿಸುವುದರ ಜೊತೆಗೆ, ‘ಎ’ ದರ್ಜೆ ಸರ್ಕಾರಿ ಹುದ್ದೆ ನೀಡುವ ಭರವಸೆಯನ್ನೂ ನೀಡಲಾಗಿದೆ. ಆದರೆ ನಮಗೆ ಆ ರೀತಿಯ ಯಾವ ಸವಲತ್ತನ್ನೂ ಕೊಡುವುದಾಗಿ ತಿಳಿಸದೆ ಇರುವುದು ತೀವ್ರ ಬೇಸರ ಮೂಡಿಸಿದೆ ಎಂದು ಹೇಳಿದ್ದರು.
ಪ್ರಶಸ್ತಿಯನ್ನು ತಿರಸ್ಕರಿಸುವ ನಿರ್ಧಾರವನ್ನು ಪ್ರಕಟಿಸಿದ ಬಳಿಕ ಮಾತನಾಡಿದ್ದ ಗೌತಮ್, ನಾವು ನಗದು ಪ್ರಶಸ್ತಿಯನ್ನು ತಿರಸ್ಕರಿಸುವ ಮೂಲಕ ಮುಖ್ಯಮಂತ್ರಿಗಳನ್ನು ಅವಮಾನಿಸುತ್ತಿಲ್ಲ. ಆದರೆ ನಮಗೆ ಅರ್ಹವಾದ ಗೌರವ ಸಿಗಲಿಲ್ಲ, ಆದ್ದರಿಂದ ನಾವು ನಗದು ಬಹುಮಾನ ತಿರಸ್ಕರಿಸುತ್ತಿದ್ದೇವೆ. ರಾಜ್ಯ ಸರ್ಕಾರವು ಈ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿ ಬಹುಮಾನ ಘೋಷಿಸಬೇಕು. ನೆರೆಯ ಮಹಾರಾಷ್ಟ್ರದಲ್ಲಿ ಹೇಗೆ ಮಾಡಲಾಗಿದೆ ಎಂಬುದನ್ನು ನೋಡಿ ನಂತರ ನಿರ್ಧರಿಸಬೇಕು ಎಂಬುದು ನನ್ನ ಬೇಡಿಕೆಯಾಗಿದೆ ಎಂದಿದ್ದಾರೆ.
ರಾಜ್ಯ ಖೋ ಖೋ ಸಂಸ್ಥೆಯ ಅಧ್ಯಕ್ಷ ಶ್ರೀ ಲೋಕೇಶ್ವರ್ ಮಾತನಾಡಿ, ‘ಸರ್ಕಾರ ರಾಜ್ಯದ ಕ್ರೀಡಾ ನೀತಿಯನ್ನು ಬದಲಾಯಿಸಬೇಕು. ಕ್ರೀಡೆಗಳಿಗೆ ಸರಿಯಾದ ಅನುದಾನ ಜಾರಿಗೊಳಿಸಬೇಕು. ಉನ್ನತ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ಅರ್ಹತೆ ತಕ್ಕಂತೆ ಹುದ್ದೆ ನೀಡಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದರು. ಆಟಗಾರರ ಪ್ರಕಾರ, ಮಹಾರಾಷ್ಟ್ರ ಸರ್ಕಾರವು ತಮ್ಮ ವಿಜೇತ ತಂಡದ ಆಟಗಾರರಿಗೆ ₹2.25 ಕೋಟಿ ನಗದು ಬಹುಮಾನ ಮತ್ತು ಸರ್ಕಾರಿ ಉದ್ಯೋಗವನ್ನು ಘೋಷಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಖೋ ಖೋ ಆಟಗಾರರಿಗೆ ಮಹಾರಾಷ್ಟ್ರ ₹2.5 ಕೋಟಿ, ಸರ್ಕಾರಿ ನೌಕರಿ ಕೊಟ್ಟಿದೆ; ಸಿದ್ದರಾಮಯ್ಯ ₹5 ಲಕ್ಷ ಕೊಟ್ಟು ಕೈ ತೊಳ್ಕಂಡ್ರು!
ಚಿನ್ನದ ಸರ ನೀಡಿದ ಸಂಸದ ಸುನಿಲ್ ಬೋಸ್
ಮಹಿಳಾ ಖೋ ಖೋ ವಿಶ್ವಕಪ್ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡವು ವಿಶ್ವ ಚಾಂಪಿಯನ್ ಆಗಲು ನೆರವಾದ ತಾಲೂಕಿನ ಕುರಬೂರಿನ ಚೈತ್ರಾ ಹಾಗೂ ಅವರ ತಾಯಿ ಅವರನ್ನು ಸಂಸದ ಸುನಿಲ್ ಬೋಸ್ ಸನ್ಮಾನಿಸಿದರು. ತವರಿಗೆ ಆಗಮಿಸಿದ ಚೈತ್ರಾ ಅವರನ್ನು ಟಿ. ನರಸೀಪುರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಚೈತ್ರಾ ಅವರು ಓದಿದ ಶಾಲೆಯಲ್ಲಿ ಸುನಿಲ್ ಬೋಸ್ ಅವರು ಚಿನ್ನದ ಸರ ಹಾಕಿ ಸನ್ಮಾನಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು. ಜೊತೆಗೆ ಇಬ್ಬರಿಗೂ ತಲಾ 5 ಲಕ್ಷ ರು. ಬಹುಮಾನ ಘೋಷಿಸಿ, ಕ್ರೀಡಾ ಬದುಕು ಮತ್ತಷ್ಟು ಯಶಸ್ಸುಗಳಿಂದ ಕೂಡಿರಲಿ ಎಂದು ಶುಭ ಕೋರಿದರು. ಸಚಿವರಾದ ಚಲುವರಾಯಸ್ವಾಮಿ ಮತ್ತು ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಆದ ಗೋವಿಂದರಾಜು ಅವರು ಉಪಸ್ಥಿತರಿದ್ದರು.
ಇದನ್ನೂ ಓದಿ: ವಿಶ್ವಕಪ್ ಖೋ ಖೋ ವಿಜೇತ ತಂಡದ ರಾಜ್ಯದ ಆಟಗಾರರಿಗೆ ₹5 ಲಕ್ಷ ಬಹುಮಾನ; ಸಿಎಂ ಸಿದ್ದರಾಮಯ್ಯ
