ವಿಶ್ವಕಪ್‌ನಲ್ಲಿ ಭಾರತ ತಂಡದ ಭಾಗವಾಗಿದ್ದ ರಾಜ್ಯದ ಇಬ್ಬರು ಆಟಗಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಈ ಇಬ್ಬರು ಆಟಗಾರರು ಮಂಡ್ಯ ಜಿಲ್ಲೆಯ ಎಂ.ಕೆ ಗೌತಮ್ ಮತ್ತು ಮೈಸೂರು ಜಿಲ್ಲೆಯ ಚೈತ್ರಾ.

ಬೆಂಗಳೂರು (ಜ.24): ಭಾರತದಲ್ಲಿ ಇತ್ತೀಚೆಗೆ ನಡೆದ ಖೋ ಖೋ ವಿಶ್ವಕಪ್‌ನಲ್ಲಿ ವಿಜೇತರಾದ ಭಾರತ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯದ ಆಟಗಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವಿಸಿ, ತಲಾ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದರು.

ಇತ್ತೀಚೆಗೆ ನಡೆದ 2025ರ ಪುರುಷರ ಹಾಗೂ ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತ ತಂಡಗಲು ವಿಜೇತರಾಗಿವೆ. ಭಾರತ ತಂಡದ‌ಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಜ್ಯದ ಇಬ್ಬರು ಆಟಗಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಚೇರಿಗೆ ಕರೆಸಿಕೊಂಡು ಸನ್ಮಾನ ಮಾಡಿ ಗೌರವಿಸಿದ್ದಾರೆ. ಜೊತೆಗೆ, ಇದೇ ವೇಳೆ ಇಬ್ಬರೂ ಆಟಗಾರರಿಗೆ ತಲಾ 5 ಲಕ್ಷ ರೂಪಾಯಿಯ ಬಹುಮಾನ ಘೋಷಣೆ ಮಾಡಿದ್ದಾರೆ. ಮುಂದುವರೆದು, ಅವರ ಕ್ರೀಡಾ ಸ್ಪೂರ್ತಿಗೆ ಮೆಚ್ಚಿ ಖೋ ಖೋ ಆಟದಲ್ಲಿ ಮತ್ತಷ್ಟು ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದ್ದಾರೆ.

ಭಾರತ ವಿಶ್ವ ಚಾಂಪಿಯನ್ ಆಗಲು ಅತ್ಯುತ್ತಮ‌ ಪ್ರದರ್ಶನ ನೀಡಿದ ಇಬ್ಬರು ಆಟಗಾರರಾದ ಮಂಡ್ಯ ಜಿಲ್ಲೆಯ ಡಿ.ಮಲ್ಲಿಗೆರೆ ಗ್ರಾಮದ ಎಂ.ಕೆ ಗೌತಮ್ ಹಾಗೂ ಮೈಸೂರು ಜಿಲ್ಲೆ ಟಿ‌. ನರಸೀಪುರ ತಾಲೂಕಿನ ಕುರಬೂರಿನ ಚೈತ್ರಾ ಇಬ್ಬರನ್ನೂ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ ಗೌರವಿಸಿ, ಬಹುಮಾನ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ನಿಧಿ ಅಥವಾ ಕ್ರೀಡಾ ಇಲಾಖೆಯ ನಿಧಿಯಿಂದ ಅವರ ಖಾತೆಗೆ ಹಣ ವರ್ಗಾವಣೆ ಆಗಲಿದೆ. ಇನ್ನು ಕ್ರೀಡಾಪಟುಗಳಿಗೆ ಸನ್ಮಾನಿಸಿದ ವೇಳೆ ಕೃಷಿ ಇಲಾಖೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಜರಿದ್ದರು.