ಖೋ ಖೋ ವಿಶ್ವಕಪ್ ವಿಜೇತ ಕರ್ನಾಟಕದ ಆಟಗಾರರಿಗೆ ಕೇವಲ 5 ಲಕ್ಷ ರೂ. ಬಹುಮಾನ ನೀಡಿದ್ದಕ್ಕೆ ಜೆಡಿಎಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಮಹಾರಾಷ್ಟ್ರ ಸರ್ಕಾರ ತನ್ನ ಆಟಗಾರರಿಗೆ 2.5 ಕೋಟಿ ರೂ. ನೀಡಿರುವುದನ್ನು ಉದಾಹರಣೆಯಾಗಿ ಜೆಡಿಎಸ್ ಸೂಕ್ತ ಪ್ರೋತ್ಸಾಹಧನ ನೀಡುವಂತೆ ಆಗ್ರಹಿಸಿದೆ.

ಬೆಂಗಳೂರು (ಜ.26): ಭಾರತ ಖೋಖೋ ವಿಶ್ವಕಪ್ ವಿಜೇತ ತಂಡದ ಆಟಗಾರರಿಗೆ ಮಹಾರಾಷ್ಟ್ರ ಸರ್ಕಾರದಿಂದ ತಲಾ 2.5 ಕೋಟಿ ರೂ. ನಗದು ಬಹುಮಾನವನ್ನು ನೀಡಿ, ರಾಜ್ಯ ಸರ್ಕಾರದಲ್ಲಿ ಗ್ರೇಡ್ ಎ ಕೆಟಗರಿ ಹುದ್ದೆ ನೀಡವುದಾಗಿ ಘೋಷಣೆ ಮಾಡಿದೆ. ಆದರೆ, ನಮ್ಮ ಸಿಎಂ ಸಿದ್ದರಾಮಯ್ಯ ಒಂದು ಶಾಲು ಹೊದಿಸಿ, 5 ಲಕ್ಷ ರೂ. ಕೊಟ್ಟು ಕೈತೊಳೆದುಕೊಂಡು ಆಟಗಾರರಿಗೆ ಅವಮಾನ ಮಾಡಿದ್ದಾರೆ ಎಂದು ಜೆಡಿಎಸ್ ಪಕ್ಷದಿಂದ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೆಡಿಎಸ್ 'ಪುಡಿಗಾಸು 5 ಲಕ್ಷ ರೂ. ಘೋಷಿಸಿ ಚೊಚ್ಚಲ ಖೋ ಖೋ ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಖೋ ಖೋ ಆಟಗಾರರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅವಮಾನಿಸಿರುವುದು ಸರಿಯಲ್ಲ. ಪಕ್ಕದ ಕೇರಳ ರಾಜ್ಯಕ್ಕೆ ಸದಾ ಮಿಡಿಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನ ಕನ್ನಡಿಗರಾದ ಬಿ. ಚೈತ್ರಾ ಹಾಗೂ ಎಂ.ಕೆ ಗೌತಮ್ ಅವರ ಅಮೋಘ ಸಾಧನೆಗೆ ಮಿಡಿಯದಿರುವುದು ವಿಪರ್ಯಾಸ.

ಇದನ್ನೂ ಓದಿ: ವಿಶ್ವಕಪ್ ಖೋ ಖೋ ವಿಜೇತ ತಂಡದ ರಾಜ್ಯದ ಆಟಗಾರರಿಗೆ ₹5 ಲಕ್ಷ ಬಹುಮಾನ; ಸಿಎಂ ಸಿದ್ದರಾಮಯ್ಯ

ಮಹಾರಾಷ್ಟ್ರ ಆಟಗಾರರಿಗೆ ಅಲ್ಲಿನ ಸರ್ಕಾರ ₹2.5 ಕೋಟಿ ಪ್ರೋತ್ಸಾಹಧನ ಮತ್ತು ಎ ಕೆಟಗರಿ ಉದ್ಯೋಗ ಘೋಷಿಸಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ಜಮ್ಮು ಕಾಶ್ಮೀರ ಸರ್ಕಾರಗಳೂ ತಮ್ಮ ರಾಜ್ಯದ ಆಟಗಾರರಿಗೆ ಸೂಕ್ತ ಗೌರವ ನೀಡಿವೆ. 

ಆದರೆ, ಸಿದ್ದರಾಮಯ್ಯ ಸರ್ಕಾರ ಕಾಟಾಚಾರಕ್ಕೆ ತಲಾ 5 ಲಕ್ಷ ರೂ. ನೀಡಿ ಗಮನಾರ್ಹ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ. ವಿಶ್ವ ಕಪ್ ವಿಜೇತ ತಂಡದ ಕನ್ನಡಿಗರ ಐತಿಹಾಸಿಕ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಸೂಕ್ತ ಪ್ರೋತ್ಸಾಹಧನ ತಕ್ಷಣ ಪ್ರಕಟಿಸಬೇಕು ಎಂದು ಜೆಡಿಎಸ್ ಪಕ್ಷವು ಆಗ್ರಹಿಸುತ್ತದೆ' ಎಂದು ಟ್ವೀಟ್ ಮಾಡಿದೆ.

Scroll to load tweet…