ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿದ ಘಟನೆಗೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಮತ್ತು ಹಿಂದೂ ಕಾರ್ಯಕರ್ತರು 'ಕರಾಳ ದಿನ' ಆಚರಿಸಿದ್ದಾರೆ. ಸರ್ಕಾರದ ನೀತಿಯನ್ನು ಖಂಡಿಸಿ, ಗ್ರಾಮದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮಂಡ್ಯ (ಜ.28): ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ನಡೆದಿದ್ದ ಐತಿಹಾಸಿಕ 'ಹನುಮ ಧ್ವಜ' ವಿವಾದಕ್ಕೆ ಇಂದಿಗೆ ಎರಡು ವರ್ಷ ಸಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಹಿಂದೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅಂದು ನಡೆದ ಘಟನೆಯನ್ನು ನೆನೆದು ಇಂದು ಗ್ರಾಮದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸುವ ಮೂಲಕ 'ಕರಾಳ ದಿನ'ವನ್ನಾಗಿ ಆಚರಿಸಲಾಯಿತು.

ಸ್ತಂಭದಿಂದ ಧ್ವಜ ಇಳಿಸಿದ್ದ ಜಿಲ್ಲಾಡಳಿತ

2023ರ ಜನವರಿ 28ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ನೆನಪಿಗಾಗಿ ಕೆರಗೋಡು ಗ್ರಾಮಸ್ಥರು ಅರ್ಜುನ ಸ್ತಂಭವನ್ನು ನಿರ್ಮಿಸಿ, ಅದರ ಮೇಲೆ ಬೃಹತ್ ಹನುಮ ಧ್ವಜವನ್ನು ಹಾರಿಸಿದ್ದರು. ಆದರೆ, ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಜಿಲ್ಲಾಡಳಿತವು ಬಿಗಿ ಪೊಲೀಸ್ ಭದ್ರತೆಯಲ್ಲಿ ಹನುಮ ಧ್ವಜವನ್ನು ಕೆಳಗಿಳಿಸಿ, ತ್ರಿವರ್ಣ ಧ್ವಜವನ್ನು ಹಾರಿಸಿತ್ತು. ಈ ಕ್ರಮವು ಅಂದು ರಾಜ್ಯಾದ್ಯಂತ ದೊಡ್ಡ ಮಟ್ಟದ ಕಿಚ್ಚು ಹಚ್ಚಿತ್ತು.

ಪಂಜಿನ ಮೆರವಣಿಗೆ ಮೂಲಕ ಸರ್ಕಾರದ ವಿರುದ್ಧ ಸಮರ

ಧ್ವಜ ಇಳಿಸಿದ ಘಟನೆ ನಡೆದು ಇಂದಿಗೆ ಸರಿಯಾಗಿ ಎರಡು ವರ್ಷ ತುಂಬಿದೆ. ಈ ದಿನವನ್ನು ಮರೆಯದ ಕೆರಗೋಡು ಜನರು ಮತ್ತು ಹಿಂದೂ ಪರ ಸಂಘಟನೆಗಳು ಕತ್ತಲಲ್ಲಿ ಪಂಜಿನ ಮೆರವಣಿಗೆ ನಡೆಸುವ ಮೂಲಕ ಸರ್ಕಾರದ ನೀತಿಯನ್ನು ಖಂಡಿಸಿದರು. 'ನಮ್ಮ ಭಕ್ತಿಯ ಸಂಕೇತವನ್ನು ಬಲವಂತವಾಗಿ ಇಳಿಸಿದ ಘಟನೆಯನ್ನು ನಾವು ಎಂದಿಗೂ ಮರೆಯುವುದಿಲ್ಲ' ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.