ಜೂ.28ರಿಂದ ಪ್ರತಿ ಕ್ಷೇತ್ರದಲ್ಲೂ ಕೆಂಪೇಗೌಡ ಜಯಂತಿ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್
ಬಿಬಿಎಂಪಿಯು ಜೂ.28ರಿಂದ ಜು.5ರವರೆಗೆ ನಗರದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ದಿನ ನಾಡಪ್ರಭು ಕೆಂಪೇಗೌಡ ಜಯಂತಿ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದರು.
ಬೆಂಗಳೂರು (ಜೂ.23): ಬಿಬಿಎಂಪಿಯು ಜೂ.28ರಿಂದ ಜು.5ರವರೆಗೆ ನಗರದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ದಿನ ನಾಡಪ್ರಭು ಕೆಂಪೇಗೌಡ ಜಯಂತಿ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದರು. ಬಿಬಿಎಂಪಿ ವತಿಯಿಂದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಆಯೋಜಿಸುವ ಕುರಿತು ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನಗರದ 28 ವಿಧಾನಸಭಾ ಕ್ಷೇತ್ರದಲ್ಲಿ ಜೂನ್ 28ರಿಂದ ಜುಲೈ 5ರವರೆಗೆ ಬೇರೆ ಬೇರೆ ದಿನ ಕೆಂಪೇಗೌಡ ದಿನಾಚರಣೆ ನಡೆಸಬೇಕು. ಜುಲೈ 9ರಂದು ವಿಧಾನಸೌಧದ ಮೆಟ್ಟಿಲ ಮೇಲೆ ಸಮಾರೋಪ ಸಮಾರಂಭ ನಡೆಸಬೇಕು. ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಪಾಲಿಕೆ ವತಿಯಿಂದ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಬಿಬಿಎಂಪಿಯ ಪ್ರತಿ ವಾರ್ಡ್‌ನಲ್ಲಿ ವಿವಿಧ ಸೇವೆ ಸಲ್ಲಿಸಿ ಸಾಧನೆ ಮಾಡಿದ ತಲಾ ಒಬ್ಬರನ್ನು ಗುರುತಿಸಿ 198 ಕೆಂಪೇಗೌಡ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿ ಆಯ್ಕೆಗೆ ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಕೂಡಾ ರಚನೆಯಾಗಲಿದೆ ಎಂದು ಹೇಳಿದರು. ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಸಮಾರಂಭವನ್ನು ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಆಚರಿಸಬೇಕು. ಈ ಪೈಕಿ ಆಯಾ ವಲಯ ಆಯುಕ್ತರು ಹಾಗೂ ವಲಯ ಜಂಟಿ ಆಯುಕ್ತರು ವಿಧಾನಸಭಾ ಕ್ಷೇತ್ರದ ಶಾಸಕರ ಸಮಯ ಪಡೆದು ಅದರಂತೆ ಸಿದ್ಧತೆಗಳನ್ನು ಮಾಡಿಕೊಂಡು ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನಲ್ಲಿ ಅಪಾರ್ಟ್‍ಮೆಂಟ್‍ನ 10ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು
ಮೆರವಣಿಗೆಯ ವ್ಯವಸ್ಥೆ: ನಗರದಲ್ಲಿ ಜೂನ್ 27ರಂದು ವಿಧಾನಸೌಧದ ಆವರಣದಲ್ಲಿ ರಾಜ್ಯ ಮಟ್ಟದ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಕೆಂಪೇಗೌಡರ 4 ಗೋಪುರಗಳಾದ ಮೇಕ್ರಿ ವೃತ, ಹಲಸೂರು ಕೆರೆ, ಲಾಲ್‌ಬಾಗ್ ಹಾಗೂ ಕೆಂಪಾಂಬುದಿ ಕೆರೆ ಬಳಿಯಿರುವ ಗೋಪುರ ಹಾಗೂ ಮಾಗಡಿಯಲ್ಲಿರುವ ನಾಡಪ್ರಭು ಕೆಂಪೇಗೌಡರ ಸಮಾಧಿ ಬಳಿಯಿಂದ ದಿವ್ಯ ಜ್ಯೋತಿಯ ಮೂಲಕ ಬೆಳಗ್ಗೆ 9ಕ್ಕೆ ಮೆರವಣಿಗೆ ಪ್ರಾರಂಭವಾಗಲಿದೆ. ಗೋಪುರಗಳಿಂದ ಹೊರಡುವ ಮೆರವಣಿಗೆಗೆ ಬೆಂಗಳೂರು ನಗರ ಪ್ರತಿನಿಧಿಸುವ ಸಚಿವರು ಚಾಲನೆ ನೀಡಲಿದ್ದು, ಶಾಸಕರ ಸಮ್ಮುಖದಲ್ಲಿ ಗೋಪುರಗಳಿಂದ ವಿಧಾನಸೌದಧ ಆವರಣಕ್ಕೆ ದಿವ್ಯ ಜ್ಯೋತಿಯನ್ನು ಮೆರವಣಿಗೆಯ ಮೂಲಕ ತರಬೇಕಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಸಮನ್ವಯ ಸಾಧಿಸಿ ಮಳೆ ಅನಾಹುತ ತಡೆಯಿರಿ: ನಗರದಲ್ಲಿ ಮಳೆ ಬಂದ ಸಂದರ್ಭದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಗಾ ವಹಿಸಬೇಕೆಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ನಿರ್ದೇಶಿಸಿದ್ದಾರೆ. ವಿಧಾನಸೌಧದಲ್ಲಿ ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಪೊಲೀಸ್, ಬೆಸ್ಕಾಂ, ಅಗ್ನಿ ಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿದ ಅವರು, ಮಳೆ ಬಂದಾಗ ಜಲಾವೃತವಾಗದಂತೆ ರಾಜಕಾಲುವೆ, ಚರಂಡಿಗಳಲ್ಲಿ ಹೂಳನ್ನು ತೆರವುಗೊಳಿಸಬೇಕು.
ಹೂಳೆತ್ತಿರುವ ಬಗ್ಗೆ ಸ್ಥಳ ಸಹಿತ ಛಾಯಾಚಿತ್ರಗಳನ್ನು ತೆಗೆದು ನಿಖರವಾದ ಮಾಹಿತಿಯನ್ನು ದಾಖಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು. ನಗರದಲ್ಲಿರುವ 20 ಅಗ್ನಿ ಶಾಮಕಠಾಣೆ ಹಾಗೂ ಒಂದು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು (ಎಸ್‌ಡಿಆರ್‌ಎಫ್) ಮಳೆ ಬಂದ ಸಂದರ್ಭದಲ್ಲಿ ತೊಂದರೆ ಉಂಟಾದ ಸ್ಥಳಕ್ಕೆ ತೆರಳಿ ಜನರಿಗೆ ಸ್ಪಂದಿಸಬೇಕು. ಅಗ್ನಿ ಶಾಮಕ ಠಾಣೆ ಹಾಗೂ ಕಚೇರಿ ಮುಖ್ಯಸ್ಥರ ಮಾಹಿತಿ, ದೂರವಾಣಿ ಸಂಖ್ಯೆಯನ್ನು ಪಾಲಿಕೆ ನಿಯಂತ್ರಣ ಕೊಠಡಿಗಳಿಗೆ ನೀಡಿ ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತರೆ ದೇಶವನ್ನೇ ಕಳೆದುಕೊಳ್ಳಲಿದೆ: ಸಿ.ಟಿ.ರವಿ
ಮೆಟ್ರೋ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಮಳೆ ನೀರುಗಾಲುವೆ ದುರಸ್ತಿಪಡಿಸಿಕೊಳ್ಳಲು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚಿಸಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಬಂಧಪಟ್ಟಅಧಿಕಾರಿಗಳು ಪರಿಹಾರ ಕ್ರಮ ಕೈಗೊಳ್ಳಬೇಕು. ಜಲಾವೃತ ಪ್ರದೇಶಗಳಲ್ಲಿ ನೀರನ್ನು ತೆರವುಗೊಳಿಸುವ 6 ಸೂಪರ್ ಸಕ್ಕಿಂಗ್ ಯಂತ್ರಗಳನ್ನು ಮಳೆಗಾಲ ಮುಗಿಯುವವರೆಗೆ ಜಲಮಂಡಳಿಯು ಪಾಲಿಕೆಗೆ ಹಸ್ತಾಂತರಿಸಲು ಸೂಚಿಸಿದರು. ಬಿಬಿಎಂಪಿ ಶಾಶ್ವತ 9 ನಿಯಂತ್ರಣ ಕೊಠಡಿ ಹಾಗೂ ಉಪ ವಿಭಾಗದ 63 ತಾತ್ಕಾಲಿಕ ನಿಯಂತ್ರಣ ಕೊಠಡಿಗಳು ಮಳೆಗಾಲ ಪೂರ್ಣಗೊಳ್ಳುವವರೆಗೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ದೂರುಗಳನ್ನು ಸಂಬಂಧಪಟ್ಟಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.