ಹವಾಮಾನ ವೈಪರೀತ್ಯ: ಊಟಕ್ಕಿಲ್ಲ ಅಪ್ಪೆಮಿಡಿ ಉಪ್ಪಿನಕಾಯಿ!
ಮಲೆನಾಡಿನಲ್ಲಿ ಮನೆ ಮನೆಗಳಲ್ಲಿ ಈ ಬಾರಿ ಅಪ್ಪೆಮಿಡಿಗಳ ಘಮವೇ ಇಲ್ಲವಾಗಿದೆ. ಉಪ್ಪಿನಕಾಯಿಗೆ ಪರಿಮಳಯುಕ್ತ ಅಪ್ಪೆಮಿಡಿ ಎಲ್ಲಿಂದ ತರುವುದು ಎಂದು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಹವಾಮಾನ ವೈಪರೀತ್ಯ!.
- ರಾಘವೇಂದ್ರ ಅಗ್ನಿಹೋತ್ರಿ
ಸೆಪ್ಟೆಂಬರ್, ಅಕ್ಟೋಬರ್ ವೇಳೆಯಲ್ಲಿ ಉತ್ತಮ ಚಳಿ ಬಿದ್ದರೆ ಮಾತ್ರ ಮಾವು ಹೂವು ಬಿಡಲು ಅನುಕೂಲ. ಆದರೆ ಕಳೆದೆರಡು ವರ್ಷಗಳಿಂದ ಸರಿಯಾಗಿ ಚಳಿಯೇ ಬಿದ್ದಿಲ್ಲ, ಹಾಗಾಗಿ ಮಲೆನಾಡಿನ ಜೀವನಾಡಿಯೇ ಆಗಿರುವ ಅಪ್ಪೆಮಿಡಿಗಳು ಮರದಲ್ಲಿ ಕಾಣುತ್ತಿಲ್ಲ. ಹಾಗಾಗಿ ಮಲೆನಾಡಿಗರು ಮಿಡಿಗಾಗಿ ಹುಡುಕಿ ಹುಡುಕಿ ಹೈರಾಣಾಗುತ್ತಿದ್ದಾರೆ. ಲಕ್ಷಗಟ್ಟಲೆ ಅಪ್ಪೆಮಿಡಿಗಳನ್ನು ಕೊಯ್ದು ಮಾರಾಟ ಮಾಡುತ್ತಿದ್ದವರು ಈ ಬಾರಿ ಮರದಲ್ಲಿ ಸಾವಿರದಷ್ಟು ಮಿಡಿಗಳನ್ನೂ ಕಾಣದೇ ಕಂಗಾಲಾಗಿದ್ದಾರೆ. ಒಂದೆಡೆ ಬಳಕೆದಾರರು ಉಪ್ಪಿನಕಾಯಿಗೆ ಮಿಡಿಮಾವು ಸಿಗದೇ ಕೈಕಟ್ಟಿ ಕುಳಿತರೆ, ಬೆಳೆಗಾರರು ಬೆಳೆಯೇ ಇಲ್ಲದೇ ದಿಗಿಲುಗೊಂಡಿದ್ದಾರೆ.
ಏನಿದು ಅಪ್ಪೆಮಿಡಿ ವಿಶೇಷ?
ಉಪ್ಪಿನಕಾಯಿಗೆ ಹೇಳಿ ಮಾಡಿಸಿದ ಅಪರೂಪದ ಮಾವು ತಳಿ ಅಪ್ಪೆಮಿಡಿ. ಅನೂಹ್ಯ ಪರಿಮಳ ಹಾಗೂ ರುಚಿಯಿಂದಾಗಿ ಮಲೆನಾಡಿನ ಅಸ್ಮಿತೆಯಾಗಿ ಜಿಐ ಟ್ಯಾಗ್ ಕೂಡ ಪಡೆದಿದೆ. ಅಪ್ಪೆಮಿಡಿಯಿಂದ ತಯಾರಿಸಿದ ಉಪ್ಪಿನಕಾಯಿ ಎಂದರೆ ಎಲ್ಲರ ಬಾಯಲ್ಲಿ ನೀರೂರುರುವುದು ಸಹಜ. ಅದರಲ್ಲೂ ಜೀರಿಗೆ ಅಪ್ಪೆಮಿಡಿ ಇದ್ದರೆ ದುಪ್ಪಟ್ಟು ಸ್ವಾದ. ಅಪ್ಪೆಮಿಡಿಗಳಿಂದ ಉಪ್ಪಿನಕಾಯಿಯಲ್ಲದೇ ಅಪ್ಪೆಹುಳಿ, ಗೊಜ್ಜು, ತಂಬುಳಿ ಹೀಗೆ ಹಲವು ಬಗೆಯ ಪದಾರ್ಥ ಬೇಸಗೆ ಕಾಲದಲ್ಲಿ ಮಲೆನಾಡಿನ ಮನೆ ಮನೆಗಳಲ್ಲಿ ಸಾಮಾನ್ಯ. ಕ್ರಮಬದ್ಧವಾಗಿ ಮಾಡಿದ ಅಪ್ಪೆಮಿಡಿ ಉಪ್ಪಿನಕಾಯಿ ವರ್ಷ ಎರಡು ವರ್ಷ ಇಟ್ಟರೂ ಕೆಡುವುದಿಲ್ಲ. ಅದಕ್ಕಾಗಿ ಅಪ್ಪೆಮಿಡಿಗೆ ಎಲ್ಲಿಲ್ಲದ ಬೇಡಿಕೆ. ಆದರೆ ಕಳೆದೆರಡು ವರ್ಷಗಳಿಂದ ಬೇಡಿಕೆಯಿದ್ದಷ್ಟು ಬೆಳೆಯೇ ಇಲ್ಲವಾಗಿದೆ.
ಎಲ್ಲಿ ಬೆಳೆಯುತ್ತಾರೆ?:
ಉತ್ತರ ಕನ್ನಡದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ, ರಿಪ್ಪನ್‌ಪೇಟೆಗಳ ಕಾಡಂಚಿನಲ್ಲಿ ಯಛೇಚ್ಛವಾಗಿ ಅಪ್ಪೆ ಬೆಳೆಯುತ್ತಿತ್ತು. ಅಪ್ಪೆಮಿಡಿ ಮೊದಲು ನದಿ ಹಾಗೂ ಹೊಳೆಯಂಚಿನಲ್ಲಿ ಬೆಳೆಯುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದರ ಮಹತ್ವ ಅರಿತು ಎಕ್ರೆಗಟ್ಟಲೆ ಪ್ಲಾಂಟೇಶನ್ ಮಾಡಿದವರೂ ಇದ್ದಾರೆ. ಒಂದು ಹಂತದಲ್ಲಿ ಕೈತುಂಬಾ ಕಾಸು ಗಳಿಸಿದರೂ ಈಗ ಮಾರಾಟಕ್ಕಲ್ಲ, ಮನೆ ಖರ್ಚಿಗೆ ಮಿಡಿ ಬೇಕೆಂದರೂ ಸಿಗುತ್ತಿಲ್ಲ.
ಯಾಕೆ ಹೀಗಾಯ್ತು?:
ಅಪ್ಪೆಮಿಡಿ ಬೆಳೆ ಬಾರದೇ ಇರಲು ಪ್ರಮುಖ ಕಾರಣ ಹವಾಮಾನ ವೈಪರಿತ್ಯ. ಪ್ರಕೃತಿಯಲ್ಲಿ ದಿನ ದಿನವೂ ಉಂಟಾಗುವ ಏರುಪೇರಿನಿಂದಾಗಿ ಹವಾಮಾನದಲ್ಲಿ ಸ್ಥಿರತೆಯೇ ಇಲ್ಲವಾಗಿದೆ. ಮಾವು ಹೂವು ಬಿಡುವ ಸಂದರ್ಭದಲ್ಲಿ ಒಂದು ದಿನ ಚಳಿ ಇದ್ದರೆ ಮರುದಿನವೇ ಮೋಡದ ವಾತಾವರಣ, ಮತ್ತೆ ಮರುದಿನ ಇಬ್ಬನಿ ಬೀಳುತ್ತದೆ. ಇದರಿಂದ ಮರದಲ್ಲಿ ಹೂವು ಬೀಡುವುದೇ ಕಷ್ಟವಾಗಿದೆ, ಹೂವು ಬಂದರೂ ನಿಲ್ಲದೇ ಉದುರಿ ಹೋಗುತ್ತಿದೆ ಅಥವಾ ಕೀಟಗಳ ದಾಳಿಗೆ ತುತ್ತಾಗಿ ಫಸಲು ನಿಲ್ಲುತ್ತಿಲ್ಲ ಎಂಬುದು ತಜ್ಞರ ಅಭಿಪ್ರಾಯ.
ಐದು ಎಕ್ರೆ ಪ್ರದೇಶದಲ್ಲಿ ಜಿಐ ಟ್ಯಾಗ್ ಇರುವ ಅಪ್ಪೆಮಿಡಿಗಳನ್ನೇ ಹತ್ತು ವರ್ಷಗಳ ಹಿಂದೆ ನೆಟ್ಟಿದ್ದು, ಕ್ರಮಬದ್ಧವಾಗಿ ಕಾಲ ಕಾಲಕ್ಕೆ ಗೊಬ್ಬರ, ನೀರು ನೀಡಿಯೇ ಬೆಳೆಯುತ್ತಿದ್ದೇನೆ. ಮೂರ್ನಾಲ್ಕು ವರ್ಷ ಚೆನ್ನಾಗಿ ಫಸಲು ಬಂತು. ಈಗ ಎರಡು ವರ್ಷದಿಂದ ಫಸಲು ಬರುತ್ತಿಲ್ಲ, ಈ ವರ್ಷವಂತೂ ಸಾವಿರ ಮಿಡಿಯೂ ಸಿಕ್ಕಿಲ್ಲ.
- ಬಾರ್ಗವ ಹೆಗಡೆ, ಅಪ್ಪೆಮಿಡಿ ಬೆಳೆಗಾರರು, ಶೀಗೇಹಳ್ಳಿ, ಶಿರಸಿ
ನಾಲ್ಕು ಎಕ್ರೆ ಪ್ರದೇಶದಲ್ಲಿ 400 ವಿವಿಧ ಬಗೆಯ ಅಪ್ಪೆಗಿಡಗಳನ್ನು 10 ವರ್ಷಗಳ ಹಿಂದೆಯೇ ನೆಟ್ಟು, ನಾನೇ ಬೆಳೆದು ನಾನೇ ಕಾಕಲ್ ಪಿಕಲ್ ಬ್ರ್ಯಾಂಡ್‌ನಲ್ಲಿ ಉಪ್ಪಿನಕಾಯಿ ಉದ್ಯಮ ಆರಂಭಿಸಿದ್ದೆ. ಆದರೆ ಈ ವರ್ಷ ನನಗೇ ಮಿಡಿ ತತ್ವಾರವಾಗಿದೆ.
- ಕಾಕಲ್ ಗಣೇಶ್, ಅಪ್ಪೆಮಿಡಿ ಬೆಳೆಗಾರರು, ಉಪ್ಪಿನಕಾಯಿ ಉದ್ಯಮಿ, ಸಾಗರ
ಕಳೆದ ಕೆಲವು ವರ್ಷಗಳಿಂದ ಹವಾಮಾನ ಸ್ಥಿರತೆಯಿಲ್ಲ. ಮಾವಿಗೆ ಹೂವು ಬರುವ ಹೊತ್ತಿನಲ್ಲಿ 15 ರಿಂದ 16 ಡಿಗ್ರಿಯಷ್ಟು ಚಳಿ ಬೀಳಬೇಕು. ಕನಿಷ್ಠ 15 ದಿನ ಪ್ರಖರವಾಗಿ ಚಳಿ ಬಿದ್ದರೆ ಉತ್ತಮ ಫಸಲು ಸಾಧ್ಯ. ಅಪ್ಪೆಮಿಡಿ ಮಾರ್ಕೇಟ್ ಈಗ ಬೆಳೆದಿದೆ, ಆದರೆ ಬೆಳೆ ಇಲ್ಲವಾಗಿದೆ.
-ಶಿವಾನಂದ ಕಳವೆ, ಪರಿಸರ ತಜ್ಞ, ಅಪ್ಪೆಮಿಡಿ ಅಭಿಯಾನದ ರೂವಾರಿ.