ಇಂದು ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ವಿಚಾರಣೆ: ನೀರು ಕೇಳಿ ಅರ್ಜಿ ಸಲ್ಲಿಸಿದ ತಮಿಳುನಾಡು
ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿದ್ದರೂ ಕಾವೇರಿ ನೀರಿಗಾಗಿ ತಗಾದೆ ತೆಗೆದು ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟಿನಲ್ಲಿ ಶುಕ್ರವಾರ ವಿಚಾರಣೆಗೆ ಬರಲಿದೆ.

ನವದೆಹಲಿ (ಆ.25): ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿದ್ದರೂ ಕಾವೇರಿ ನೀರಿಗಾಗಿ ತಗಾದೆ ತೆಗೆದು ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟಿನಲ್ಲಿ ಶುಕ್ರವಾರ ವಿಚಾರಣೆಗೆ ಬರಲಿದೆ. ಇದೇ ವೇಳೆ, ತಮಿಳುನಾಡಿನ ಅರ್ಜಿ ಪ್ರಶ್ನಿಸಿ ಕರ್ನಾಟಕ ಕೂಡ ಸುಪ್ರೀಂಕೋರ್ಟ್‌ಗೆ ಗುರುವಾರ 26 ಪುಟಗಳ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ ನೆರೆರಾಜ್ಯದ ಆರೋಪದಲ್ಲಿ ಸತ್ಯಾಂಶ ಇಲ್ಲ. ಹೀಗಾಗಿ ಆ ಅರ್ಜಿ ವಜಾ ಮಾಡುವಂತೆ ಮನವಿ ಮಾಡಿದೆ.
ಕಾವೇರಿ ನದಿಯಿಂದ ನಿತ್ಯ 24 ಸಾವಿರ ಕ್ಯುಸೆಕ್ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಇತ್ತೀಚೆಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ನ್ಯಾ.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಅರ್ಜಿ ವಿರುದ್ಧ ಕರ್ನಾಟಕದ ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ ತಮಿಳುನಾಡು ರಾಜ್ಯ ಕಾವೇರಿ ನೀರು ವಿಚಾರದಲ್ಲಿ ಈವರೆಗೆ ನಡೆದುಕೊಂಡಿರುವ ವಿಧಾನಗಳು ಮತ್ತು ತೆಗೆದುಕೊಂಡಿರುವ ಕ್ರಮಗಳು ಹಾಗೂ ಉಲ್ಲಂಘಿಸಿರುವ ನಿಯಮಗಳನ್ನು ಪಟ್ಟಿಮಾಡಿದ್ದಾರೆ. ಅಲ್ಲದೆ ತಮಿಳುನಾಡು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಬಹಿಷ್ಕರಿಸಿ ಹೋಗಿದ್ದು, ಪ್ರಾಧಿಕಾರದ ಸೂಚನೆಯಂತೆ ಈವರೆಗೆ ಕರ್ನಾಟಕ ನೀರು ಬಿಟ್ಟಿರುವ ಅಂಕಿ-ಸಂಖ್ಯೆ ಮತ್ತು ವಾಸ್ತವ ಪರಿಸ್ಥಿತಿ ವಿವರಿಸಿದ್ದಾರೆ.
ಕಾಂಗ್ರೆಸ್‌ಗೆ ಎಷ್ಟು ಜನರ ಬರ್ತಾರೆಂದು ಕಾಲವೇ ಹೇಳುತ್ತದೆ: ಡಿಕೆಶಿ
ನಮಗೇ ನೀರಿಲ್ಲ: ಕರ್ನಾಟಕದ ಕಾವೇರಿ ಕೊಳ್ಳದಲ್ಲಿ ಶೇ.42ರಷ್ಟುಮಳೆ ಕೊರತೆ ಆಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲೂ ಈ ಬಗ್ಗೆ ಚರ್ಚಿಸಲಾಗಿದೆ. ಆದರೂ ಸಾಮಾನ್ಯ ವರ್ಷದಂತೆ ಈ ಜಲವರ್ಷದಲ್ಲೂ 36.76 ಟಿಎಂಸಿ ನೀರು ಹರಿಸುವಂತೆ ತಮಿಳುನಾಡು ಕೇಳುತ್ತಿದೆ. ನೀರಿನ ವಿಚಾರದಲ್ಲಿ ಪ್ರಸ್ತುತ ಸಮಸ್ಯೆ ಸೃಷ್ಟಿಮಾಡಿರುವುದೇ ತಮಿಳುನಾಡು. ಅಲ್ಲದೆ, ಮೇಕೆದಾಟು ಕುಡಿಯುವ ನೀರಿನ ಯೋಜನೆಗೂ ಅಡ್ಡಗಾಲು ಹಾಕುತ್ತಿದೆ. ಆ ಯೋಜನೆಯಿಂದ ತಮಿಳುನಾಡು ರಾಜ್ಯಕ್ಕೆ ಹೆಚ್ಚು ಉಪಯೋಗವಾಗಲಿದ್ದು, ಮಳೆ ಕೊರತೆಯ ವರ್ಷಗಳಲ್ಲಿ ತಮಿಳುನಾಡಿಗೂ ನೀರು ಹರಿಸಬಹುದಾಗಿದೆ. ಸುಮಾರು 13 ಟಿಎಂಸಿ ನೀರು ಆ ಯೋಜನೆಯಿಂದ ಬಳಕೆಗೆ ಸಿಗಲಿದೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.
ತ.ನಾಡಲ್ಲಿ 96 ಟಿಎಂಸಿ ನೀರಿದೆ: ಈ ಬಾರಿ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಸದ್ಯ ಕರ್ನಾಟಕದ ಕಾವೇರಿ ಕೊಳ್ಳದಲ್ಲಿರುವ ನೀರು ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿಗೂ ಸಾಲಲ್ಲ. ಆದಾಗ್ಯೂ ಪ್ರಾಧಿಕಾರದ ಸೂಚನೆಯಂತೆ ತಮಿಳುನಾಡಿಗೆ ನೀರು ಹರಿಸಲಾಗಿದೆ. ಈ ಜಲವರ್ಷದಲ್ಲಿ ತಮಿಳುನಾಡು ಜಲಾಶಯಗಳಲ್ಲೇ 69 ಟಿಎಂಸಿ ನೀರಿತ್ತು. ಹೀಗಿದ್ದರೂ ಕರ್ನಾಟಕ ಆ.22ರ ತನಕ 26 ಟಿಎಂಸಿ ನೀರು ಹರಿಸಿದೆ. ಹಾಗಾಗಿ ತಮಿಳುನಾಡು ಬಳಿ ಪ್ರಸ್ತುತ 96 ಟಿಎಂಸಿ ನೀರಿದೆ. ಇಷ್ಟೇ ಅಲ್ಲದೆ, ನ್ಯಾಯಾಧಿಕರಣದ ತೀರ್ಪು ಉಲ್ಲಂಘಿಸಿ ಹೆಚ್ಚುವರಿ ಪ್ರದೇಶದಲ್ಲಿ ಕುರುವೈ ಬೆಳೆ ಬೆಳೆದು ಅಗತ್ಯಕ್ಕಿಂತ ಹೆಚ್ಚು ನೀರು ಕೇಳುತ್ತಿದೆ. 1.85 ಲಕ್ಷ ಎಕರೆ ಮೀರಿ ಕುರುವೈ ಬೆಳೆಗೆ ತಮಿಳುನಾಡು ಅವಕಾಶ ಮಾಡಿಕೊಟ್ಟು, ಕಾವೇರಿ ನೀರು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಫಿಡವಿಟ್‌ನಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ಆರೋಪಿಸಿದೆ.
ಚಂದ್ರನ ಮೇಲೆ ಭಾರತದ ನಡಿಗೆ ಆರಂಭ: ರೋವರ್ ಅಧ್ಯಯನ ಶುರು
ಅಫಿಡವಿಟ್‌ನಲ್ಲೇನಿದೆ?
- ಕರ್ನಾಟಕದಿಂದ ಸುಪ್ರೀಂಕೋರ್ಟ್‌ಗೆ 26 ಪುಟಗಳ ಅಫಿಡವಿಟ್ ಸಲ್ಲಿಕೆ
- 42% ಮಳೆ ಕೊರತೆ: ಕಾವೇರಿ ಪಾತ್ರದ ಡ್ಯಾಮ್‌ಗಳಲ್ಲಿ ಹೆಚ್ಚು ನೀರಿಲ್ಲ
- ಆದರೂ ಸಾಮಾನ್ಯ ವರ್ಷದಂತೆ ತ.ನಾಡು 36.76 ಟಿಎಂಸಿ ಕೇಳುತ್ತಿದೆ
- ತಮಿಳುನಾಡಿನ ಡ್ಯಾಮ್‌ಗಳಲ್ಲೇ ಸಾಕಷ್ಟುಹೆಚ್ಚು (96 ಟಿಎಂಸಿ) ನೀರಿದೆ
- ಹೆಚ್ಚು ಪ್ರದೇಶದಲ್ಲಿ ಕುರುವೈ ಬೆಳೆ ಬೆಳೆದು ಈಗ ಹೆಚ್ಚು ನೀರು ಕೇಳ್ತಿದ್ದಾರೆ
- ತ.ನಾಡಿನ ಆರೋಪದಲ್ಲಿ ಹುರುಳಿಲ್ಲ, ಅರ್ಜಿ ವಜಾ ಮಾಡಿ: ಕರ್ನಾಟಕ