ಕಾಂಗ್ರೆಸ್‌ಗೆ ಎಷ್ಟು ಮಂದಿ ಬರುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ, ಕಾಲ ಕೂಡಿ ಬಂದಾಗ ಎಲ್ಲವೂ ನಡೆಯುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 

ಮೈಸೂರು (ಆ.25): ತಮ್ಮ ಭವಿಷ್ಯ ಹಾಗೂ ಕಾಂಗ್ರೆಸ್‌ ಪಕ್ಷದ ವರ್ಚಸ್ಸನ್ನು ದೃಷ್ಟಿಯಲ್ಲಿಟ್ಟುಕೊಂಡು ಬೇರೆ ಪಕ್ಷದ ಶಾಸಕರು ಅವರಾಗಿಯೇ ಕಾಂಗ್ರೆಸ್‌ಗೆ ಬರುವ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಆದರೆ, ಕಾಂಗ್ರೆಸ್‌ಗೆ ಎಷ್ಟು ಮಂದಿ ಬರುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ, ಕಾಲ ಕೂಡಿ ಬಂದಾಗ ಎಲ್ಲವೂ ನಡೆಯುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ‘ಆಪರೇಷನ್‌ ಹಸ್ತ’ ಮಾಡುತ್ತಿಲ್ಲ. ನಾವಾಗಿಯೇ ಪಕ್ಷಕ್ಕೆ ಯಾರನ್ನೂ ಕರೆತರುವ ಪ್ರಯತ್ನ ಮಾಡುತ್ತಿಲ್ಲ. ತಮ್ಮ ಭವಿಷ್ಯ ಹಾಗೂ ಕಾಂಗ್ರೆಸ್‌ ಪಕ್ಷದ ವರ್ಚಸ್ಸನ್ನು ದೃಷ್ಟಿಯಲ್ಲಿಟ್ಟುಕೊಂಡು ಬೇರೆ ಪಕ್ಷದ ಶಾಸಕರು ಅವರಾಗಿಯೇ ಕಾಂಗ್ರೆಸ್‌ಗೆ ಬರುವ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಬರುವವರನ್ನು ಸ್ವಾಗತಿಸುತ್ತಿದ್ದೇವೆ ಅಷ್ಟೆ. 

ಕಾಂಗ್ರೆಸ್‌ನ 5 ಗ್ಯಾರಂಟಿಗಳು ಐದೂ ವರ್ಷ ಇರುತ್ತೆ: ಸಂಸದ ಡಿ.ಕೆ.ಸುರೇಶ್‌

ಆದರೆ, ಪಕ್ಷಕ್ಕೆ ಎಷ್ಟು ಮಂದಿ ಬರುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಸಮಯ ಕೂಡಿ ಬರಬೇಕು. ಆ ಗಳಿಗೆ ಬಂದಾಗ ಎಲ್ಲವೂ ನಡೆಯುತ್ತದೆ ಎಂದರು. ಜೆಡಿಎಸ್‌ ಶಾಸಕರನ್ನು ಕಾಂಗ್ರೆಸ್‌ನವರು ಸೆಳೆಯುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಆ ಬಗ್ಗೆ ಹೇಳುತ್ತಾ ಹೋದರೆ ಅದು ಬಹಳ ದೊಡ್ಡದಾಗುತ್ತ ಹೋಗುತ್ತದೆ. ಅದರ ಬಗ್ಗೆ ಈಗ ಚರ್ಚೆ ಬೇಡ ಎಂದರು.

ಕಾಂಗ್ರೆಸ್‌ ಸೇರಿದ ಆಯನೂರು, ನಾಗರಾಜ ಗೌಡ: ಶಿವಮೊಗ್ಗದ ಜೆಡಿಎಸ್‌ ನಾಯಕ ಆಯನೂರು ಮಂಜುನಾಥ್‌ ಹಾಗೂ ಶಿಕಾರಿಪುರದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ನಾಗರಾಜ್‌ ಗೌಡ ಗುರುವಾರ ಕಾಂಗ್ರೆಸ್‌ ಸೇರ್ಪಡೆಯಾದರು. ಇವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಇವರ ಜೊತೆಗೆ ಸ್ಥಳೀಯ ಇನ್ನಷ್ಟುಮುಖಂಡರೂ ಕಾಂಗ್ರೆಸ್‌ ಸೇರ್ಪಡೆಗೊಂಡರು.

ನಾಲೆಗೆ ನೀರು ಗ್ಯಾರಂಟಿ: ‘ಮುಂದಿನ 100 ದಿನಗಳ ಒಳಗಾಗಿ ಎತ್ತಿನಹೊಳೆ ಮೊದಲ ಹಂತದ ಯೋಜನೆಯಲ್ಲಿ ನೀರನ್ನು ಪಂಪ್‌ ಮಾಡಿ ನಾಲೆಗೆ ಹರಿಸಲಾಗುವುದು’ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಎತ್ತಿನಹೊಳೆ ಯೋಜನೆ ಸಂಬಂಧ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಪವರ್‌ ಸ್ಟೇಷನ್‌ ಹಾಗೂ ದೊಡ್ಡನಾಗರ ಪಂಪ್‌ಹೌಸ್‌ಗೆ ಮಂಗಳವಾರ ಭೇಟಿ ನೀಡಿ, ಕಾಮಗಾರಿಗಳ ಪರಿಶೀಲನೆ ನಡೆಸಿದರು. 

ವೇತನ ಕೊಡದ ಹಿನ್ನೆಲೆ ಡಿಕೆಶಿ ಸ್ವ-ಕ್ಷೇತ್ರದಲ್ಲಿ ಚರಂಡಿ ನೀರು ಸುರಿದುಕೊಂಡು ಕಾರ್ಮಿಕರ ಪ್ರತಿಭಟನೆ

ಬಳಿಕ, ಸುದ್ದಿಗಾರರ ಜೊತೆ ಮಾತನಾಡಿ, ಪಶ್ಚಿಮಘಟ್ಟದ ನದಿಗಳಲ್ಲಿ ಹರಿಯುವ ನೀರನ್ನು ಸಂಗ್ರಹಿಸಿ ಕೋಲಾರ-ಚಿಕ್ಕಬಳ್ಳಾಪುರದವರೆಗೆ 24 ಟಿಎಂಸಿ ನೀರನ್ನು ಹರಿಸುವುದು ಯೋಜನೆಯ ಉದ್ದೇಶ. ಈ ಹಿಂದೆ ಜಲಸಂಪನ್ಮೂಲ ಸಚಿವನಾಗಿದ್ದಾಗಲೂ ನಾನು ಇಲ್ಲಿಗೆ ಭೇಟಿ ನೀಡಿದ್ದೆ. ಈಗ ಎರಡನೇ ಬಾರಿಗೆ ಬರುತ್ತಿದ್ದೇನೆ. ಆಗ ಕಾಮಗಾರಿ ಎಲ್ಲಿತ್ತೋ ಈಗಲೂ ಅಲ್ಲಿಯೇ ಇದೆ. ಈ ಯೋಜನೆಗಾಗಿ ಈವರೆಗೆ 14 ಸಾವಿರ ಕೋಟಿ ರು. ವೆಚ್ಚ ಮಾಡಲಾಗಿದೆ. ಕಾಮಗಾರಿಯ ವೆಚ್ಚ ಹೆಚ್ಚಲು ಈ ಹಿಂದಿನ ಬಿಜೆಪಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.