Asianet Suvarna News Asianet Suvarna News

Kannada Rajyotsava: ನ.1ಕ್ಕೆ ಪ್ರತಿ ಮನೆಯಲ್ಲೂ ಕನ್ನಡ ಧ್ವಜ ಹಾರಿಸಿ: ಕಸಾಪ

ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ಕನ್ನಡದ ಧ್ವಜವನ್ನು ರಾಜ್ಯೋತ್ಸವದ ದಿನದಂದು ಎಲ್ಲ ಕನ್ನಡಿಗರು ತಮ್ಮ ಮನೆಯ ಮೇಲೆ ಹಾರಿಸುವ ಮೂಲಕ, ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ ಅವರು ರಚಿಸಿದ ‘ಏರಿಸಿ ಹಾರಿಸಿ ಕನ್ನಡದ ಬಾವುಟ, ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ’ ಎನ್ನುವಂತೆ ಅರ್ಥಪೂರ್ಣವಾಗಿ ಕನ್ನಡ ಪ್ರೇಮವನ್ನು ಮೆರೆಯೋಣ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕರೆ ನೀಡಿದೆ.

kasapa president mahesh joshi calls kannadiga to hoist kannada flag in every house on november 1st gvd
Author
First Published Oct 18, 2022, 12:30 AM IST

ಬೆಂಗಳೂರು (ಅ.18): ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ಕನ್ನಡದ ಧ್ವಜವನ್ನು ರಾಜ್ಯೋತ್ಸವದ ದಿನದಂದು ಎಲ್ಲ ಕನ್ನಡಿಗರು ತಮ್ಮ ಮನೆಯ ಮೇಲೆ ಹಾರಿಸುವ ಮೂಲಕ, ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ ಅವರು ರಚಿಸಿದ ‘ಏರಿಸಿ ಹಾರಿಸಿ ಕನ್ನಡದ ಬಾವುಟ, ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ’ ಎನ್ನುವಂತೆ ಅರ್ಥಪೂರ್ಣವಾಗಿ ಕನ್ನಡ ಪ್ರೇಮವನ್ನು ಮೆರೆಯೋಣ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕರೆ ನೀಡಿದೆ.

ನವೆಂಬರ್‌ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿಯೊಬ್ಬ ಕನ್ನಡಿಗರು ಸಂಭ್ರಮದಿಂದ ಆಚರಿಸುತ್ತಾರೆ. ಅದರೊಂದಿಗೆ ಈ ಬಾರಿ ಪ್ರತಿಯೊಬ್ಬ ಕನ್ನಡಿಗನೂ ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಯ ದ್ಯೋತಕವಾದ ಕನ್ನಡದ ಧ್ವಜವನ್ನು ಸ್ವಇಚ್ಛೆಯಿಂದ, ಹೆಮ್ಮೆಯಿಂದ ಮನೆ, ಮನೆಯ ಮೇಲೆ ಹಾರಿಸುವ ಮೂಲಕ ಕನ್ನಡದ ಹಬ್ಬವನ್ನು ಸಂಭ್ರಮಿಸೋಣ. ನಾಡಿನಾದ್ಯಂತ ಹಳದಿ ಕೆಂಪು ಬಣ್ಣವು ರಾರಾಜಿಸಲಿ, ಸ್ಫೂರ್ತಿಯ ಸೆಲೆ ಎಲ್ಲೆಡೆಯೂ ಪಸರಿಸಲಿ. ಎಲ್ಲರ ಮನ-ಮನೆಯಲ್ಲೂ ಕನ್ನಡತನ ಮೆರೆಯಲಿ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಆಶಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ-ಕನ್ನಡಿಗ-ಕರ್ನಾಟಕ ಎನ್ನುವ ಧ್ಯೇಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯೋತ್ಸವದ ಈ ಸಂದರ್ಭದಲ್ಲಿ ಕನ್ನಡಿಗರೆಲ್ಲರೂ ಉತ್ಸಾಹದಿಂದ ಕನ್ನಡಹಬ್ಬದಲ್ಲಿ ಪಾಲ್ಗೊಳ್ಳೋಣ. ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯೋತ್ಸವವನ್ನು ವೈಭವಪೂರ್ಣವಾಗಿ ಆಚರಿಸಬೇಕಾಗಿದೆ ಎಂದು ಹೇಳಿದ್ದಾರೆ.

ನ.11ಕ್ಕೆ ಹಾವೇರಿ ಸಾಹಿತ್ಯ ಸಮ್ಮೇಳನ ಅಸಾಧ್ಯ: ಮಹೇಶ್‌ ಜೋಶಿ

ಪ್ರತಿಷ್ಠೆಗೆ ಬಲಿಯಾಗದಿರಲಿ ಸಾಹಿತ್ಯ ಸಮ್ಮೇಳನ: ನಿಗದಿತ ದಿನಾಂಕಕ್ಕೆ ಹಾವೇರಿಯಲ್ಲಿ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಸಾಧ್ಯವೇ ಇಲ್ಲ ಎಂಬ ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿಕೆ ಸರ್ಕಾರ ಮತ್ತು ಕಸಾಪ ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದ್ದು, ಎರಡನೇ ಬಾರಿಗೆ ಜಿಲ್ಲೆಗೆ ಸಿಕ್ಕ ಆತಿಥ್ಯ ಪ್ರತಿಷ್ಠೆಗೆ ಬಲಿಯಾಗದಿರಲಿ ಎಂಬ ಮಾತು ಜಿಲ್ಲೆಯ ಸಾಹಿತ್ಯಾಸಕ್ತರಿಂದ ಕೇಳಿಬರುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ಎರಡೂವರೆ ವರ್ಷಗಳಿಂದ ಮುಂದೂಡುತ್ತಲೇ ಬಂದಿದ್ದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ಬರುವ ನವೆಂಬರ್‌ 11ರಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತು. 

ತವರು ಜಿಲ್ಲೆಯಲ್ಲಿ ನಡೆಯಲಿರುವ ಸಮ್ಮೇಳನವನ್ನು ಭರ್ಜರಿಯಾಗಿಯೇ ಮಾಡಬೇಕು ಎಂಬ ಕಾರಣಕ್ಕೆ ಕಳೆದ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ 20 ಕೋಟಿ ಅನುದಾನ ಘೋಷಣೆ ಮಾಡಿದ್ದರು. ಮೂರು ಸಲ ನುಡಿ ಜಾತ್ರೆಗೆ ಮುಹೂರ್ತ ನಿಗದಿ ಮಾಡಿದರೂ ಗ್ರಹಣವೇ ಬಿಡುತ್ತಿಲ್ಲ. ಹಿಂದೆ 2014ರಲ್ಲಿ ಸಾಹಿತ್ಯ ಸಮ್ಮೇಳನದ ಆತಿಥ್ಯ ಜಿಲ್ಲೆಗೆ ಒದಗಿಬಂದಿದ್ದರೂ ಜಿಲ್ಲೆಯ ಜನರ ಕಚ್ಚಾಟದಿಂದ ಅದು ಕೈತಪ್ಪಿತ್ತು. ಕಲಬುರಗಿಯಲ್ಲಿ ನಡೆದ 85ನೇ ಸಮೇಳನದಲ್ಲಿ 86ನೇ ಅಕ್ಷರ ಜಾತ್ರೆಯ ಆತಿಥ್ಯ ನೀಡಲಾಗಿತ್ತು. ಆದರೆ, ಕೊರೋನಾ ಕಾರಣದಿಂದ ಎರಡೂವರೆ ವರ್ಷಗಳಿಂದ ಸಮ್ಮೇಳನ ನಡೆಸಲು ಸಾಧ್ಯವಾಗಿರಲಿಲ್ಲ.

ಮುಂದೂಡಿಕೆ ಇದೇ ಮೊದಲಲ್ಲ: ಹಾವೇರಿಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಕಳೆದ ಮೇ 20ರಿಂದ ಮೂರು ದಿನಗಳ ಕಾಲ ನಡೆಸಲು ಒಮ್ಮೆ ತೀರ್ಮಾನಿಸಲಾಗಿತ್ತು. ಆ ಬಳಿಕ ಕೊರೋನಾ ಎರಡನೇ ಅಲೆ ಕಾರಣಕ್ಕೆ ಸಮ್ಮೇಳನ ನಡೆಸಲು ಆಗಿರಲಿಲ್ಲ. ಆ ಬಳಿಕ ಮಳೆಗಾಲವೂ ಆರಂಭವಾಯಿತು. ಬಳಿಕ ಸೆ.23ರಿಂದ ಮೂರು ದಿನ ಸಮ್ಮೇಳನಕ್ಕೆ ಮುಹೂರ್ತ ನಿಗದಿ ಮಾಡಲಾಗಿತ್ತು. ಅದನ್ನೂ ಬದಲಿಸಿ ನ. 11ರಿಂದ 13ರವರೆಗೆ ನುಡಿ ಜಾತ್ರೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ನಿಗದಿಯಾಗಿದ್ದ ದಿನಾಂಕ ಸಮೀಪಿಸಿದರೂ ಪೂರ್ವ ತಯಾರಿ ಆಗಿರಲಿಲ್ಲ. ನಿಗದಿತ ದಿನಾಂಕಕ್ಕೆ ಸಮ್ಮೇಳನ ಆಗುತ್ತದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿರುವ ಮಧ್ಯೆಯೇ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ನೀಡಿದ ಹೇಳಿಕೆ ಜಿಲ್ಲೆಯ ಜನರ ಆತಂಕ ಹೆಚ್ಚಿಸಿದೆ.

ಸರಕಾರ ನಯಾಪೈಸೆ ಕೊಟ್ಟಿಲ್ಲ, ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲ್ಲ: ಕಸಾಪ ಅಧ್ಯಕ್ಷರ ಆಕ್ರೋಶ

ಸಿಎಂ ತೀರ್ಮಾನವೇ ಅಂತಿಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾಗಿರುವುದರಿಂದ ಇಲ್ಲಿ ನಡೆಯುವ ಸಮ್ಮೇಳನಕ್ಕೆ ಅವರ ನಿರ್ಧಾರವೇ ಅಂತಿಮವಾಗಲಿದೆ. ವಾರದ ಹಿಂದಷ್ಟೇ ಜಿಲ್ಲೆಗೆ ಆಗಮಿಸಿದ್ದ ಸಿಎಂ, ನವೆಂಬರ್‌ನಲ್ಲೇ ಸಮ್ಮೇಳನ ನಡೆಯಲಿದೆ ಎಂದು ಹೇಳಿದ್ದರು. ಆದರೆ, ಸಮ್ಮೇಳನಕ್ಕೆ ನಿಗದಿಯಾಗಿದ್ದ ದಿನಾಂಕಕ್ಕೆ ಇನ್ನು ಒಂದು ತಿಂಗಳಷ್ಟೇ ಬಾಕಿ ಇದ್ದರೂ ಪೂರ್ವ ಸಿದ್ಧತೆ ಆಗದಿರುವುದು ಸಿಎಂ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಸಿಎಂ ನಿರ್ದೇಶನ ಬಾರದ್ದರಿಂದ ಜಿಲ್ಲಾಡಳಿತವೂ ಈ ವಿಷಯದಲ್ಲಿ ತಟಸ್ಥವಾಗಿತ್ತು. ಇದರಿಂದ ಬೇಸತ್ತಿದ್ದ ಮಹೇಶ ಜೋಶಿ ಬಹಿರಂಗವಾಗಿಯೇ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿರುವುದು ಸರ್ಕಾರ ಮತ್ತು ಕಸಾಪ ನಡುವೆ ಕಂದಕ ಸೃಷ್ಟಿಸಿದಂತಿದೆ. ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಬಿದ್ದು ಸಮ್ಮೇಳನ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಮತ್ತು ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.

Follow Us:
Download App:
  • android
  • ios