ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾರವಾರ ಶಾಸಕ ಸತೀಶ್ ಸೈಲ್ ಅವರಿಗೆ ಕರ್ನಾಟಕ ಹೈಕೋರ್ಟ್ ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ. ತೀವ್ರ ಲಿವರ್ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ, ಲಿವರ್ ಕಸಿ ಚಿಕಿತ್ಸೆಗಾಗಿ ಕಠಿಣ ಷರತ್ತುಗಳೊಂದಿಗೆ ಈ ರಿಲೀಫ್ ನೀಡಲಾಗಿದೆ.
ಬೆಂಗಳೂರು/ ಉತ್ತರ ಕನ್ನಡ (ಫೆ.05): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಕಷ್ಟಕ್ಕೀಡಾಗಿದ್ದ ಕಾರವಾರದ ಶಾಸಕ ಸತೀಶ್ ಕೃಷ್ಣ ಸೈಲ್ ಅವರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಮಹತ್ವದ ರಿಲೀಫ್ ನೀಡಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಶಾಸಕರಿಗೆ ಲಿವರ್ ಕಸಿ (Liver Transplant) ಚಿಕಿತ್ಸೆಗಾಗಿ ವೈದ್ಯಕೀಯ ಜಾಮೀನು ಮಂಜೂರು ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಅನಾರೋಗ್ಯ ಮತ್ತು ಜಾಮೀನು ಮಂಜೂರು:
ಕಾರವಾರ ಶಾಸಕ ಸತೀಶ್ ಸೈಲ್ ಅವರು ಕಳೆದ ಕೆಲ ಸಮಯದಿಂದ ಲಿವರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಹಿಂದೆ ಅವರು ದೆಹಲಿಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಇದೀಗ ವೈದ್ಯರು ಅವರಿಗೆ ಲಿವರ್ ಕಸಿ ಅನಿವಾರ್ಯ ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ, ಶಾಸಕರು ಹೈಕೋರ್ಟ್‌ಗೆ ವೈದ್ಯಕೀಯ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಮಾನವೀಯ ಆಧಾರದ ಮೇಲೆ ಲಿವರ್ ಕಸಿ ಪ್ರಕ್ರಿಯೆ ಮುಗಿಯುವವರೆಗೆ ಜಾಮೀನು ಮಂಜೂರು ಮಾಡಿದೆ.
ಕೋರ್ಟ್ ವಿಧಿಸಿದ ಷರತ್ತುಗಳೇನು?:
- ಜಾಮೀನು ಮಂಜೂರು ಮಾಡುವ ವೇಳೆ ಹೈಕೋರ್ಟ್ ಕಠಿಣ ಷರತ್ತುಗಳನ್ನು ವಿಧಿಸಿದೆ.
- 5 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಒಂದು ಭದ್ರತಾ ಖಾತರಿಯನ್ನು ಒದಗಿಸಬೇಕು.
- ಲಿವರ್ ಕಸಿ ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರತಿ 2 ವಾರಕ್ಕೊಮ್ಮೆ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
- ಸಾಮಾನ್ಯ ಆರೋಗ್ಯ ಸ್ಥಿತಿಗತಿಯ ಬಗ್ಗೆ ಪ್ರತಿ 8 ವಾರಗಳಿಗೊಮ್ಮೆ ವರದಿ ನೀಡಬೇಕು.
- ಪ್ರಾಸಿಕ್ಯೂಷನ್ ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಬಾರದು ಹಾಗೂ ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು.
- ನ್ಯಾಯಾಲಯದ ವಿಚಾರಣೆಗೆ ಯಾವುದೇ ತೊಂದರೆ ಉಂಟುಮಾಡಬಾರದು ಎಂದು ತಾಕೀತು ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ:
ಅಕ್ರಮ ಕಬ್ಬಿಣದ ಅದಿರು ರಫ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) 2025ರ ಆಗಸ್ಟ್ 13 ಮತ್ತು 14ರಂದು ಸತೀಶ್ ಸೈಲ್ ಅವರ ಕಾರವಾರ, ಗೋವಾ, ಮುಂಬೈ ಹಾಗೂ ದೆಹಲಿ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ದಾಳಿಯ ವೇಳೆ ಅಕ್ರಮ ಆಸ್ತಿ ದಾಖಲೆಗಳು, ನಗದು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿತ್ತು. ತದನಂತರ, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ (PMLA) 2025ರ ಸೆಪ್ಟೆಂಬರ್ 9 ರಂದು ಇಡಿ ಅಧಿಕಾರಿಗಳು ಸತೀಶ್ ಸೈಲ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು.
ಹಳೆಯ ಪ್ರಕರಣಗಳ ವಿವರ:
ಇದಕ್ಕೂ ಮುನ್ನ, ಬಹುಕೋಟಿ ಬೇಲೆಕೇರಿ ಅದಿರು ನಾಪತ್ತೆ ಮತ್ತು ಅಕ್ರಮ ರಫ್ತು ಪ್ರಕರಣದಲ್ಲಿ (2010ರ ಪ್ರಕರಣ) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2024ರ ಅಕ್ಟೋಬರ್ 26ರಂದು ಸತೀಶ್ ಸೈಲ್ ಅವರಿಗೆ ಬರೋಬ್ಬರಿ 7 ವರ್ಷಗಳ ಜೈಲು ಶಿಕ್ಷೆ ಹಾಗೂ 44 ಕೋಟಿ ರೂ. ದಂಡ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸೈಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. 2024ರ ಡಿಸೆಂಬರ್ 21ರಂದು ಕರ್ನಾಟಕ ಹೈಕೋರ್ಟ್, ವಿಶೇಷ ನ್ಯಾಯಾಲಯ ನೀಡಿದ್ದ ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು. ಸಿಬಿಐ ತನಿಖೆ ನಡೆಸಿದ್ದ ಆ ಪ್ರಕರಣದಲ್ಲಿ ರಿಲೀಫ್ ಸಿಕ್ಕರೂ, ಇಡಿ ದಾಖಲಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅವರು ಜೈಲು ಪಾಲಾಗಿದ್ದರು. ಇದೀಗ ಅನಾರೋಗ್ಯದ ಕಾರಣದಿಂದ ಅವರಿಗೆ ಮತ್ತೆ ಬಿಡುಗಡೆಯ ಭಾಗ್ಯ ಸಿಕ್ಕಂತಾಗಿದೆ.


