ಅಕ್ರಮ ಕಬ್ಬಿಣದ ಅದಿರು ರಫ್ತು ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಸತೀಶ್ ಸೈಲ್ ಅವರಿಗೆ 7 ದಿನಗಳ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು. ಲಿವರ್ ಸೈರೋಸಿಸ್ ಮತ್ತು ಸ್ಲೀಪ್ ಆಪ್ನಿಯಾ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆ ನ್ಯಾಯಾಲಯ ಜಾಮೀನು ನೀಡಿದೆ.  

ಕಾರವಾರ: ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಕಾರವಾರ–ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಳು ದಿನಗಳ ಕಾಲ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಸತೀಶ್ ಸೈಲ್ ಅವರು ದೀರ್ಘಕಾಲದಿಂದ ಲಿವರ್ ಸೈರೋಸಿಸ್ ಮತ್ತು ಸ್ಲೀಪ್ ಆಪ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರ ಪರ ವಕೀಲರು ವೈದ್ಯಕೀಯ ಮಧ್ಯಂತರ ಜಾಮೀನು ಕೋರಿದರು. ಕೋರ್ಟ್ ವಿಚಾರಣೆ ನಡೆಸಿ, ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಏಳು ದಿನಗಳ ಕಾಲ ಜಾಮೀನು ನೀಡಲು ಒಪ್ಪಿಗೆ ನೀಡಿತು.

ಇಡಿ ಬಂಧನ ಮತ್ತು ತನಿಖೆ

ಇದಕ್ಕೂ ಮುನ್ನ, ಜಾರಿ ನಿರ್ದೇಶನಾಲಯ (ಇಡಿ) ಸತೀಶ್ ಸೈಲ್ ಅವರನ್ನು ಬಂಧಿಸಿತ್ತು. ಬೇಲೆಕೇರಿ ಬಂದರಿನಲ್ಲಿ ವಶಕ್ಕೆ ಪಡೆದು ಸಂಗ್ರಹಿಸಿದ್ದ ಸಾವಿರಾರು ಟನ್‌ಗಳಷ್ಟು ಕಬ್ಬಿಣದ ಅದಿರನ್ನು ಕದ್ದು, ಅಕ್ರಮವಾಗಿ ಸಾಗಣೆ ಮಾಡಿದ ಪ್ರಕರಣದಲ್ಲಿ ಅವರಿಗೆ ಮೊದಲು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಇಸಿಐಆರ್ ದಾಖಲಿಸಿಕೊಂಡ ಇಡಿ, ತಮ್ಮ ತನಿಖೆಯ ಭಾಗವಾಗಿ ಆಗಸ್ಟ್ 13 ಮತ್ತು 14ರಂದು ಸತೀಶ್ ಸೈಲ್ ಅವರ ಕಾರವಾರ ಮತ್ತು ಬೆಂಗಳೂರಿನ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯ ವೇಳೆ, ಅಧಿಕಾರಿಗಳು ₹13 ಕೋಟಿಗೂ ಹೆಚ್ಚು ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದರು.

ಕೋರ್ಟ್ ಸೂಚನೆಗಳು

  • ಸೈಲ್ ಅವರ ಆರೋಗ್ಯದ ಹಿನ್ನೆಲೆ, ಕೋರ್ಟ್ ಕೆಲವು ವಿಶೇಷ ಸೌಲಭ್ಯಗಳನ್ನು ಒದಗಿಸಲು ಸೂಚನೆ ನೀಡಿದೆ:
  • ಅವರಿಗೆ ಅಗತ್ಯವಿರುವ ಸ್ಲೀಪ್ ಆಪ್ನಿಯಾ ಮಷಿನ್ ಬಳಕೆಗೆ ಅವಕಾಶ
  • ಮನೆಯಿಂದ ಆಹಾರ ತಲುಪುವಂತೆ ಅನುಮತಿ
  • ಮಲಗಲು ಪ್ರತ್ಯೇಕ ಕಾಟ್ ವ್ಯವಸ್ಥೆ
  • ತಡರಾತ್ರಿಯ ವಿಚಾರಣೆ ನಡೆಸದಂತೆ ಇಡಿ ಅಧಿಕಾರಿಗಳಿಗೆ ಸೂಚನೆ

ಸತೀಶ್ ಸೈಲ್ ಅವರಿಗೆ ನೀಡಲಾದ ಈ ಮಧ್ಯಂತರ ಜಾಮೀನು ಕೇವಲ ಏಳು ದಿನಗಳ ಕಾಲ ಮಾತ್ರ ಮಾನ್ಯವಾಗಿದ್ದು, ನಂತರದ ವಿಚಾರಣೆ ಹಾಗೂ ಇಡಿ ತನಿಖೆಯ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.

ಪ್ರಕರಣದ ಹಿನ್ನೆಲೆ

ಬೇಲೇಕೇರಿ ಬಂದರಿನ ಅಕ್ರಮ ಕಬ್ಬಿಣದ ಅದಿರು ಸಾಗಣೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಆಗಸ್ಟ್ 13 ಮತ್ತು 14ರಂದು ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಮನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದರು. ಕಾರವಾರ, ಗೋವಾ, ಮುಂಬೈ ಮತ್ತು ದೆಹಲಿಯಲ್ಲಿರುವ ಮನೆಗಳು, ಕಚೇರಿಗಳು ಮತ್ತು ಕಂಪನಿಗಳ ಮೇಲೆ ನಡೆದ ಶೋಧದ ವೇಳೆ ₹1.68 ಕೋಟಿ ನಗದು, 6.75 ಕಿಲೋ ಚಿನ್ನಾಭರಣ ಹಾಗೂ ಹಲವಾರು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು. ಜೊತೆಗೆ, ಸೈಲ್ ಹಾಗೂ ಅವರ ಕಂಪನಿಗಳ ₹14.13 ಕೋಟಿ ಮೌಲ್ಯದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಯಿತು.

ಈ ದಾಳಿ ಆಶಾಪುರ ಮಿನೆಕೆಮ್ ಲಿಮಿಟೆಡ್, ಶ್ರೀ ಲಾಲ್ ಮಹಲ್ ಲಿಮಿಟೆಡ್, ಸ್ವಸ್ತಿಕ್ ಸ್ಟೀಲ್ಸ್ (ಹೊಸಪೇಟೆ) ಪ್ರೈವೇಟ್ ಲಿಮಿಟೆಡ್, ಐಎಲ್‌ಸಿ ಇಂಡಸ್ಟ್ರೀಸ್ ಲಿಮಿಟೆಡ್, ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್ ಲಿಮಿಟೆಡ್ ಸೇರಿದಂತೆ ಸೈಲ್ ಅವರಿಗೆ ಸೇರಿದ ಕಂಪನಿಗಳ ಮೇಲೂ ನಡೆದಿತ್ತು.

ಇಡಿ ತನಿಖೆಯ ಪ್ರಕಾರ, ಸತೀಶ್ ಸೈಲ್ ಅವರು ಬೇಲೇಕೇರಿ ಬಂದರು ಅಧಿಕಾರಿಗಳ ಸಹಕಾರದಿಂದ 2010ರ ಏಪ್ರಿಲ್ 19ರಿಂದ ಜೂನ್ 10ರ ಅವಧಿಯಲ್ಲಿ ₹86.78 ಕೋಟಿ ಮೌಲ್ಯದ 1.25 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದಾರೆಂಬುದು ಬಹಿರಂಗವಾಗಿದೆ.

ಈ ಹಿನ್ನೆಲೆಯಲ್ಲಿ, ಇತ್ತೀಚೆಗೆ ನಡೆದ ದಾಳಿಯ ವೇಳೆ ಪತ್ತೆಯಾದ ₹1.68 ಕೋಟಿ ನಗದು, 6.75 ಕೆ.ಜಿ. ಚಿನ್ನ, ಮತ್ತು ₹14 ಕೋಟಿ ಮೌಲ್ಯದ ಬ್ಯಾಂಕ್ ಖಾತೆಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ವಿಚಾರಣೆಗೆ ಹಾಜರಾದ ಸೈಲ್ ಅವರನ್ನು ವಿಚಾರಣೆ ಬಳಿಕ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.