ಬೇಲೆಕೇರಿ ಬಂದರು ಅಕ್ರಮ ಅದಿರು ಸಾಗಾಟ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ವಿಸ್ತರಿಸಿದೆ. ವೈದ್ಯಕೀಯ ಕಾರಣಗಳಿಗಾಗಿ ಈ ವಿಸ್ತರಣೆ ನೀಡಲಾಗಿದೆ.
ಕಾರವಾರ: ಬೇಲೆಕೇರಿ ಬಂದರು ಅಕ್ರಮ ಅದಿರು ಸಾಗಾಟ ಮತ್ತು ಇಡಿ ದಾಖಲಿಸಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಅವರಿಗೆ ಫೆ. 5ರ ವರೆಗೆ ಮಧ್ಯಂತರ ಜಾಮೀನು ವಿಸ್ತರಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ವೈದ್ಯಕೀಯ ತಪಾಸಣೆಯ ಕಾರಣ ನೀಡಿ ಸಲ್ಲಿಸಿದ ಮನವಿಯ ಮೇರೆಗೆ ಈ ಮಧ್ಯಂತರ ಜಾಮೀನು ವಿಸ್ತರಿಸಲಾಗಿದೆ.
ಜ. 21ರಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ಏಮ್ಸ್ ಆಸ್ಪತ್ರೆ ಸೂಚಿಸಿದೆ ಎಂದು ಸೈಲ್ ಪರ ವಕೀಲರು ತಿಳಿಸಿದರು. ಈ ಹಿನ್ನೆಲೆ ಸತೀಶ್ ಸೈಲ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿದೆಯೇ ಅಥವಾ ಕಸ್ಟಡಿಯಲ್ಲೇ ಚಿಕಿತ್ಸೆ ನೀಡಬಹುದೇ ಎನ್ನುವ ಬಗ್ಗೆ ವರದಿ ನೀಡುವಂತೆ ಏಮ್ಸ್ ವೈದ್ಯರಿಗೆ ಹೈಕೋರ್ಟ್ ಸೂಚಿಸಿದೆ.
ಸುಮಾರು 11,312 ಮೆಟ್ರಿಕ್ ಟನ್ ಕಬ್ಬಿಣದ ಅದಿರು
ಇಲ್ಲಿನ ಬೇಲೆಕೇರಿ ಬಂದರಿನಲ್ಲಿ ಅಧಿಕಾರಿಗಳು ಜಫ್ತು ಮಾಡಿದ್ದ ಸುಮಾರು 11,312 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅನುಮತಿ ಇಲ್ಲದೆ ವಿದೇಶಕ್ಕೆ ಸಾಗಿಸಿದ ಆರೋಪ ಇವರ ಮೇಲಿದೆ. ಈ ಸಂಬಂಧ ಒಟ್ಟು 6 ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಈ ಕಾರಣದಿಂದ ಶಾಸಕ ಸತೀಶ್ ಸೈಲ್ ವಿರುದ್ಧ ಜಾರಿ ನಿರ್ದೇಶನಾಲಯ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅದರಲ್ಲಿ ಹಲವು ಗಂಭೀರ ಅಂಶಗಳನ್ನು ಉಲ್ಲೇಖಿಸಿದೆ.
ಸತೀಶ್ ಸೈಲ್ ಹಾಂಕಾಂಗ್‌ನ ಸ್ಟ್ಯಾಂಡರ್ಡ್ ಚಾರ್ಟರ್ಡ್ ಮತ್ತು ಐಸಿಬಿಸಿ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದಾರೆ. ವಿದೇಶಿ ಕಂಪನಿಗಳ ಮೂಲಕ ಚೀನಾಕ್ಕೆ ಅದಿರು ರಫ್ತು ಮಾಡುವ ನೆಪದಲ್ಲಿ ಅಪರಾಧ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
₹1.68 ಕೋಟಿ ನಗದು, 6.75 ಕೆಜಿ ಚಿನ್ನ
ಇಡಿ ದಾಳಿ ವೇಳೆ ₹1.68 ಕೋಟಿ ನಗದು, 6.75 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿತ್ತು. ಜೊತೆಗೆ ₹21 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹14.13 ಕೋಟಿ ಬ್ಯಾಂಕ್ ಹಣವನ್ನು ಸ್ಥಗಿತಗೊಳಿಸಲಾಗಿದೆ. ಸತೀಶ್ ಸೈಲ್ ನಿರ್ದೇಶಕರಾಗಿರುವ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಈ ಅಕ್ರಮದಿಂದ ₹27 ಕೋಟಿ ಲಾಭ ಗಳಿಸಿದೆ ಎಂದು ಇಡಿ ತಿಳಿಸಿದೆ.


