*  ರಾಜ್ಯ ಸರ್ಕಾರದ ಕಾಶಿಯಾತ್ರೆ ಯೋಜನೆ ಅನುಷ್ಠಾನಕ್ಕೆ ಭಾರತ್‌ ಗೌರವ್‌ ರೈಲು ಬಳಕೆ*  ಸಹಾಯಧನದಲ್ಲಿ ಕಾಶಿಯಾತ್ರೆ ಕನಸು ಸಾಕಾರ*  ಕಾಶಿ, ಅಯೋಧ್ಯೆ, ಪ್ರಯಾಗ ಒಳಗೊಂಡ 7 ದಿನದ ಧಾರ್ಮಿಕ ಯಾತ್ರೆ 

ಜಯಪ್ರಕಾಶ್‌ ಬಿರಾದರ್‌

ಬೆಂಗಳೂರು(ಜೂ.03): ಧಾರ್ಮಿಕ ದತ್ತಿ ಇಲಾಖೆ ಮಾಲಿಕತ್ವದಲ್ಲಿ ರಾಜ್ಯದ ಮೊದಲ ‘ಭಾರತ್‌ ಗೌರವ್‌ ರೈಲು’ ಆಗಸ್ಟ್‌ ಮೊದಲ ವಾರದಲ್ಲಿ ಬೆಂಗಳೂರು-ಕಾಶಿ ನಡುವೆ ಸಂಚಾರ ಆರಂಭಿಸಲಿದೆ. ಕಡಿಮೆ ಖರ್ಚಿನಲ್ಲಿ ಮತ್ತು ರಾಜ್ಯ ಸರ್ಕಾರದ ಸಹಾಯಧನದಲ್ಲಿ ಕಾಶಿಯಾತ್ರೆ ಕೈಗೊಳ್ಳಬೇಕೆಂಬ ಯಾತ್ರಾರ್ಥಿಗಳ ಕನಸನ್ನು ಈ ರೈಲು ಸಾಕಾರಗೊಳಿಸಲಿದೆ.

ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಕಾಶಿಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ತಲಾ .5 ಸಾವಿರ ಸಹಾಯಧನ ನೀಡುವ ಯೋಜನೆಯನ್ನು ಘೋಷಿಸಿದೆ. ಧಾರ್ಮಿಕ ದತ್ತಿ ಇಲಾಖೆ ಕೇಂದ್ರ ಸರ್ಕಾರದ ‘ಭಾರತ್‌ ಗೌರವ್‌ ರೈಲು’ ಯೋಜನೆಯನ್ನು ಬಳಸಿಕೊಂಡು ಕಾಶಿಯಾತ್ರೆ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಿದೆ. ಇದಕ್ಕಾಗಿ ಕಳೆದ ವಾರ ನೈಋುತ್ಯ ರೈಲ್ವೆಯಲ್ಲಿ ನೋಂದಣಿ ಮಾಡಿಕೊಂಡಿತ್ತು. ಸದ್ಯ ಎರಡೂ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿ ರೈಲು ಬೋಗಿಗಳು, ಆಂತರಿಕ ಸೌಲಭ್ಯಗಳು, ವೇಳಾಪಟ್ಟಿ, ಮಾರ್ಗ, ಓಡಾಟ ವೆಚ್ಚದ ಕುರಿತು ಚರ್ಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಯೋಜನೆ ಮೊದಲ ಪ್ರವಾಸವನ್ನು ಆಗಸ್ಟ್‌ ಮೊದಲ ವಾರ ಕೈಗೊಳ್ಳಲು ನಿರ್ಧರಿಸಲಾಗಿದೆ.

ಬೇಗ ಬಂದ ರೈಲು: ಪ್ಲಾಟ್‌ಫಾರ್ಮ್‌ನಲ್ಲೇ ಪ್ರಯಾಣಿಕರ ಡಾನ್ಸ್‌ ವಿಡಿಯೋ ವೈರಲ್

ಏಳು ದಿನಗಳ ಪ್ರವಾಸ ಇದಾಗಿದ್ದು, ಕಾಶಿ, ಅಯೋಧ್ಯೆ ಹಾಗೂ ಪ್ರಯಾಗ ಧಾರ್ಮಿಕ ಸ್ಥಳಗಳ ದರ್ಶನ ಒಳಗೊಂಡಿದೆ. ರೈಲ್ವೆ ನಿಲ್ದಾಣ ಬಳಿಕ ಯಾತ್ರಿ ಸ್ಥಳಗಳಲ್ಲಿ ಆಹಾರ, ವಸತಿ ಮತ್ತು ಸ್ಥಳೀಯ ಸಾರಿಗೆ ಅಗತ್ಯಗಳನ್ನು ಐಆರ್‌ಸಿಟಿಸಿ ನೋಡಿಕೊಳ್ಳಲಿದೆ. ಕಾಶಿಯಾತ್ರೆ ಯೋಜನೆ ಅರ್ಹ ಫಲಾನುಭವಿಗಳು ಮತ್ತು ಇತರೆ ಯಾತ್ರಿಗಳ ನೋಂದಣಿ ಪ್ರಕ್ರಿಯೆ ಧಾರ್ಮಿಕ ದತ್ತಿ ಇಲಾಖೆ ಶೀಘ್ರದಲ್ಲಿಯೇ ಆರಂಭಿಸುವ ಸಾಧ್ಯತೆಗಳಿವೆ.

ಎರಡು ವರ್ಷದ ಮಾಲೀಕತ್ವ:

‘ಭಾರತ್‌ ಗೌರವ್‌’ ಯೋಜನೆಯಡಿ ಧಾರ್ಮಿಕ ದತ್ತಿ ಇಲಾಖೆಯ ಅಗತ್ಯತೆಗೆ ಅನುಗುಣವಾಗಿ ಹೊಸದಾಗಿ ರೈಲು ಬೋಗಿಗಳನ್ನು ಸಿದ್ಧಪಡಿಸಿ, ಮುಂದಿನ ಎರಡು ವರ್ಷಗಳ ಮಟ್ಟಿಗೆ ರೈಲಿನ ಮಾಲಿಕತ್ವವನ್ನು ಆ ಇಲಾಖೆಗೆ ನೀಡಲಾಗುತ್ತದೆ. ಪ್ರಯಾಣ ವೆಚ್ಚವನ್ನು ಮಾತ್ರ ರೈಲ್ವೆ ಇಲಾಖೆಗೆ ಭರಿಸಬೇಕಾಗುತ್ತದೆ. ರೈಲ್ವೆ ಇಲಾಖೆಯ ಅಧಿಕಾರಿಗಳು ರೈಲಿನ ಕಾರ್ಯಾಚರಣೆಯನ್ನು ಮಾತ್ರ ನಿರ್ವಹಿಸಲಿದ್ದು, ಪ್ರಯಾಣ ದರ, ಪ್ರವಾಸ ದಿನಾಂಕ, ಪ್ರವಾಸಿಗರ ನೋಂದಣಿ, ನಿಲುಗಡೆ ನಿಲ್ದಾಣ ಸೇರಿದಂತೆ ಸಂಪೂರ್ಣ ಪ್ರವಾಸ ಯೋಜನೆಯನ್ನು ಧಾರ್ಮಿಕ ದತ್ತಿ ಇಲಾಖೆ ನೋಡಿಕೊಳ್ಳಲಿದೆ. ಸದ್ಯ ಬೆಂಗಳೂರು-ಕಾಶಿ ನಡುವೆ ಓಡಾಟಕ್ಕೆ ರೈಲು ಸಿದ್ಧಪಡಿಸಲಾಗುತ್ತಿದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂ.21ರಿಂದ ರಾಮಾಯಣ ಯಾತ್ರಾ ರೈಲು ಆರಂಭ!

ಹೀಗಿರಲಿದೆ ಭಾರತ್‌ ಗೌರವ್‌ ರೈಲು

ಈ ರೈಲು 14 ಬೋಗಿಗಳನ್ನು ಒಳಗೊಂಡಿರಲಿದೆ. ಈ ಪೈಕಿ 11 ಎಸಿ, ಎರಡು ಸ್ಲೀಪರ್‌, ಒಂದು ಆಹಾರ ಸಿದ್ಧಪಡಿಸುವ ಪ್ಯಾಂಟರಿ ಬೋಗಿ ಇರಲಿದೆ. 700 ಪ್ರಯಾಣಿಕರ ಸಾಮರ್ಥ್ಯ ಹೊಂದಿರುತ್ತದೆ. ಕಾಶಿಯಾತ್ರೆ ಹಿನ್ನೆಲೆಯಲ್ಲಿ ಕಾಶಿ, ಅಯೋಧ್ಯೆ ವೈಭವಗಳ ಚಿತ್ರಗಳನ್ನು ಒಳಗೊಂಡ ಹೊರ ಮತ್ತು ಒಳ ವಿನ್ಯಾಸದೊಂದಿಗೆ ಬೋಗಿಗಳನ್ನು ಸಿದ್ಧಪಡಿಸಲಾಗುವುದು. ಈ ರೈಲಿನಲ್ಲಿ ವಾರ್ಷಿಕ 36 ಬಾರಿ ಕಾಶಿಯಾತ್ರೆಗಳನ್ನು ಆಯೋಜಿಸಲು ಧಾರ್ಮಿಕ ದತ್ತಿ ಇಲಾಖೆ ನಿರ್ಧರಿಸಿದೆ.

ಕೇಂದ್ರ ರೈಲ್ವೆ ಇಲಾಖೆಯ ಭಾರತ್‌ ಗೌರವ್‌ ಯೋಜನೆಯೊಂದಿಗೆ ರಾಜ್ಯ ಸರ್ಕಾರದ ಕಾಶಿಯಾತ್ರೆ ಯೋಜನೆ ಹೊಂದಾಣಿಕೆ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು ಕಾಶಿ ನಡುವೆ ಯಾತ್ರಿ ರೈಲು ಆರಂಭಿಸಲು ನೋಂದಣಿ ಮಾಡಿಕೊಂಡಿದೆ. ಎರಡೂ ಇಲಾಖೆಗಳ ಅಧಿಕಾರಿಗಳು ಸಭೆ ನಡೆಸಿದ್ದು, ಆಗಸ್ಟ್‌ ಮೊದಲ ವಾರ ರೈಲು ಓಡಾಟ ಆರಂಭಿಸಲಿದೆ. ರಾಜ್ಯದ ಮೊದಲ ಭಾರತ್‌ ಗೌರವ್‌ ರೈಲು ಇದಾಗಲಿದೆ ಅಂತ ನೈರುತ್ಯ ರೈಲ್ವೆ ಮುಖ್ಯಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್‌ ಹೆಗ್ಡೆ ತಿಳಿಸಿದ್ದಾರೆ.