ದೆಹಲಿಯಲ್ಲಿ ಮಹತ್ವದ ಕಾವೇರಿ ಜಲ ನಿರ್ವಹಣಾ ಮಂಡಳಿಯ ಸಭೆ, ತೀರ್ಮಾನದ ಬಗ್ಗೆ ಹೆಚ್ಚಿದ ಕುತೂಹಲ
ಮಹತ್ವದ ಕಾವೇರಿ ಜಲ ನಿರ್ವಹಣಾ ಮಂಡಳಿಯ ಸಭೆ ಸೋಮವಾರ ದೆಹಲಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ನೀರು ಬಿಡುಗಡೆ ವಿಚಾರವಾಗಿ ಯಾವ ತೀರ್ಮಾನ ಹೊರಬೀಳಲಿದೆ ಎಂಬುದು ಕುತೂಹಲ ಕೆರಳಿಸಿದೆ.
ನವದೆಹಲಿ (ಆ.28): ಕಾವೇರಿ ನೀರಿಗಾಗಿ ತಗಾದೆ ತೆಗೆದು ತಮಿಳುನಾಡು ಸುಪ್ರೀಂ ಕೋರ್ಚ್ ಸಲ್ಲಿಸಿರುವ ಅರ್ಜಿ ಶುಕ್ರವಾರ ವಿಚಾರಣೆಗೆ ಬರಲಿದ್ದು, ಇದಕ್ಕೂ ಮುನ್ನ ಸೋಮವಾರ ಕಾವೇರಿ ನೀರು ನಿಯಂತ್ರಣ ಸಮಿತಿಯ ಮಹತ್ವದ ಸಭೆ ನಡೆಯಲಿದೆ.
ದೆಹಲಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಕರ್ನಾಟಕದಿಂದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿದ್ದಾರೆ. ಈಗಾಗಲೇ ನೀರು ನಿಯಂತ್ರಣ ಸಮಿತಿಯ ಆದೇಶದಂತೆ ಕರ್ನಾಟಕವು ತಮಿಳುನಾಡಿಗೆ 11 ದಿನಗಳಲ್ಲಿ ನಿತ್ಯ 10 ಸಾವಿರ ಕ್ಯುಸೆಕ್‌ನಂತೆ ಒಟ್ಟಾರೆ 10 ಟಿಎಂಸಿ ನೀರು ಹರಿಸಿದೆ. ಆದರೆ ತಮಿಳುನಾಡು ಮಾತ್ರ 24 ಸಾವಿರ ಕ್ಯುಸೆಕ್‌ಗಾಗಿ ಬೇಡಿಕೆ ಇಟ್ಟಿದ್ದು, ಈ ಸಂಬಂಧ ಸುಪ್ರೀಂ ಕೋರ್ಚ್‌ಗೂ ಅರ್ಜಿ ಸಲ್ಲಿಸಿದೆ.
ತಮಿಳುನಾಡಿಗೆ 24000 ಕ್ಯುಸೆಕ್ ಕಾವೇರಿ ನೀರು ಬಿಡೋದು ಅಸಾಧ್ಯ: ಸುಪ್ರೀಂ
ಇನ್ನಷ್ಟುನೀರು ಸಾಧ್ಯವಿಲ್ಲ: ಸಭೆಯಲ್ಲಿ ರಾಜ್ಯದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿರುವ ನೀರಿನ ಲಭ್ಯತೆ ಕುರಿತು ಕರ್ನಾಟಕದ ಅಧಿಕಾರಿಗಳು ವಾಸ್ತವ ಸ್ಥಿತಿ ವಿವರಿಸಲಿದ್ದಾರೆ. ರಾಜ್ಯವು ಮಳೆ ಕೊರತೆ ಎದುರಿಸುತ್ತಿದ್ದು, ಇಂಥ ಸಂಕಷ್ಟದ ಸಮಯದಲ್ಲೂ ನಾವು ತಮಿಳುನಾಡಿಗೆ ಸಾಕಷ್ಟುನೀರು ಹರಿಸಿದ್ದೇವೆ. ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಈಗಾಗಲೇ ಸ್ಪಷ್ಟಪಡಿಸಿದೆ. ಅಲ್ಲದೆ, 15 ದಿನಗಳ ಹಿಂದೆ ಸಮಿತಿಯು ನೀಡಿದ್ದ ಆದೇಶ ಪಾಲಿಸಿರುವ ಕುರಿತು ಅಂಕಿ-ಅಂಶಗಳ ಸಮೇತ ಮಾಹಿತಿಯನ್ನೂ ನೀಡಲಿದೆ. ಈ ವೇಳೆ 15 ದಿನಗಳ ಹಿಂದೆ ನೀಡಿದ್ದ ಆದೇಶವನ್ನು ಕರ್ನಾಟಕ ಪಾಲಿಸಿದೆಯೇ, ಇಲ್ಲವೇ ಎಂಬ ಕುರಿತೂ ಪರಿಶೀಲನೆ ನಡೆಸಲಿದ್ದಾರೆ. ಸೋಮವಾರದ ಸಭೆ ಬಳಿಕ ಮಂಗಳವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ.
ತಮಿಳುನಾಡಿಗೆ ಕೇವಲ 24 ಟಿಎಂಸಿ ಕಾವೇರಿ ನೀರು ಬಿಟ್ಟಿದ್ದೇವೆ: ಸಿಎಂ ಸಿದ್ದರಾಮಯ್ಯ ಮಾಹಿತಿ
ಸೆ.1ರಂದು ಸುಪ್ರೀಂ ವಿಚಾರಣೆ: ಕಾವೇರಿಯಿಂದ ನಿತ್ಯ 24 ಸಾವಿರ ಕ್ಯುಸೆಕ್ ನೀರು ಬಿಡುಗಡೆಗೆ ನಿರ್ದೇಶನ ನೀಡಬೇಕೆಂದು ಕೋರಿ ಈಗಾಗಲೇ ತಮಿಳುನಾಡು ಸಲ್ಲಿಸಿರುವ ಅರ್ಜಿ ಸೆ.1ರಂದು ಸುಪ್ರೀಂ ಕೋರ್ಟಲ್ಲಿ ವಿಚಾರಣೆಗೆ ಬರಲಿದೆ. ಕಳೆದ ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಚ್ ತಕ್ಷಣಕ್ಕೆ ತಮಿಳುನಾಡಿನ ಆಗ್ರಹವನ್ನು ಪರಿಗಣಿಸಲು ನಿರಾಕರಿಸಿತ್ತು. ಜತೆಗೆ, ಮುಂದಿನ ವಿಚಾರಣೆಯೊಳಗೆ ನ್ಯಾಯಾಲಯಕ್ಕೆ ತಜ್ಞರಿಗೆ ಈ ಸಂಬಂಧ ವರದಿ ಸಲ್ಲಿಸುವಂತೆಯೂ ಸೂಚಿಸಿದೆ.