ಹಿಂದಿ ಭಾಷೆಯ ಅಂಕಗಳ ವಿಚಾರದಲ್ಲಿ ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದ್ದ ಕಾರಣ ತಡೆಹಿಡಿಯಲಾಗಿದ್ದ SSLC ಪರೀಕ್ಷೆಯ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುವುದು. ಹೈಕೋರ್ಟ್ ತೀರ್ಪಿನ ನಂತರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುರುವಾರ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು (ಏ.22): ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬಹುದಿನಗಳ ಕಾಯುವಿಕೆಗೆ ಕೊನೆಗೂ ತೆರೆಬಿದ್ದಿದೆ. ತೃತೀಯ ಭಾಷೆ (ಹಿಂದಿ) ಅಂಕಗಳ ಹಂಚಿಕೆ ವಿಚಾರವಾಗಿ ಸೃಷ್ಟಿಯಾಗಿದ್ದ ಕಾನೂನು ಗೊಂದಲಗಳು ಪರಿಹಾರವಾಗಿದ್ದು, ನಾಳೆಯೇ (ಗುರುವಾರ) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಮಹತ್ವದ ಸಭೆಯ ಬಳಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೈಕೋರ್ಟ್ ಆದೇಶಕ್ಕೆ ಮನ್ನಣೆ

ತೃತೀಯ ಭಾಷೆಗೆ ಗ್ರೇಡ್‌ ಬದಲಾಗಿ ಅಂಕಗಳನ್ನೇ ನೀಡಬೇಕು ಎಂಬ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಆದರೆ, ಅಂತಿಮವಾಗಿ ಮಕ್ಕಳ ಹಿತದೃಷ್ಟಿಯಿಂದ ಮತ್ತು ಫಲಿತಾಂಶ ವಿಳಂಬವಾಗುವುದನ್ನು ತಪ್ಪಿಸಲು ಈ ವರ್ಷ ಕೋರ್ಟ್ ಆದೇಶವನ್ನೇ ಪಾಲಿಸಲು ಸರ್ಕಾರ ನಿರ್ಧರಿಸಿದೆ. ಅದರಂತೆ, ಈ ಬಾರಿ ತೃತೀಯ ಭಾಷೆಗೆ ಅಂಕಗಳನ್ನೇ ನೀಡಲಾಗುವುದು ಹಾಗೂ ಅಂಕದ ಜೊತೆಗೆ ಗ್ರೇಡ್ ಅನ್ನೂ ನಮೂದಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.

ನಿಗದಿತ ದಿನಕ್ಕಿಂತ ಮೊದಲೇ ಫಲಿತಾಂಶ

ಈ ಹಿಂದೆ ಏಪ್ರಿಲ್ 24ರಂದು ಫಲಿತಾಂಶ ಪ್ರಕಟಿಸಲು ಉದ್ದೇಶಿಸಲಾಗಿತ್ತು. ಆದರೆ, ಈಗ ಕಾನೂನು ತೊಡಕು ನಿವಾರಣೆಯಾಗಿರುವುದರಿಂದ ನಿಗದಿತ ದಿನಕ್ಕಿಂತ ಒಂದು ದಿನ ಮುಂಚಿತವಾಗಿಯೇ, ಅಂದರೆ ನಾಳೆ ಮಧ್ಯಾಹ್ನ 12 ಗಂಟೆಗೆ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಮಕ್ಕಳ ಹಿತವೇ ಮುಖ್ಯ

ಸಭೆಯ ಬಳಿಕ ಮಾತನಾಡಿದ ಸಚಿವ ಮಧು ಬಂಗಾರಪ್ಪ, "ಕೋರ್ಟ್ ಆದೇಶದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ವಿವರವಾಗಿ ಚರ್ಚಿಸಿದ್ದೇವೆ. ನಮಗೆ ಮಕ್ಕಳ ಭವಿಷ್ಯ ಮತ್ತು ಅವರ ಹಿತದೃಷ್ಟಿ ಅತ್ಯಂತ ಮುಖ್ಯ. ಹೀಗಾಗಿ ನ್ಯಾಯಾಲಯದ ನಿರ್ದೇಶನವನ್ನು ಗೌರವಿಸಿ ಈ ವರ್ಷ ಅಂಕಗಳನ್ನೇ ನೀಡಲು ತೀರ್ಮಾನಿಸಿದ್ದೇವೆ," ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಕುರಿತಿದ್ದ ಅನಿಶ್ಚಿತತೆ ದೂರವಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.