ರಾಜ್ಯ ಸರ್ಕಾರವು ಸಾಮಾಜಿಕ ಭದ್ರತಾ ಪಿಂಚಣಿಯ ವಾರ್ಷಿಕ ಕುಟುಂಬ ಆದಾಯ ಮಿತಿಯನ್ನು ₹32,000 ದಿಂದ ₹1,20,000 ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದ, ಆದಾಯದ ಕಾರಣಕ್ಕೆ ಪಿಂಚಣಿ ಕಳೆದುಕೊಂಡಿದ್ದ ಲಕ್ಷಾಂತರ ವೃದ್ಧರು, ವಿಧವೆಯರು ಹಾಗೂ ವಿಕಲಚೇತನರಿಗೆ ಮತ್ತೆ ಮಾಸಿಕ ಪಿಂಚಣಿ ಲಭಿಸಲಿದೆ.

ಬೆಂಗಳೂರು (ಆ.20): ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವ ಲಕ್ಷಾಂತರ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ. ಪಿಂಚಣಿ ಪಡೆಯಲು ನಿಗದಿಪಡಿಸಲಾಗಿದ್ದ ವಾರ್ಷಿಕ ಕುಟುಂಬದ ಆದಾಯ ಮಿತಿಯನ್ನು ₹32,000 ದಿಂದ ₹1,20,000 (ಒಂದು ಲಕ್ಷದ ಇಪ್ಪತ್ತು ಸಾವಿರ ರೂ.) ಕ್ಕೆ ಹೆಚ್ಚಿಸಿ ಕಂದಾಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ದಾಖಲೆಗಳ ಪರಿಶೀಲನೆ ವೇಳೆ ಪಿಂಚಣಿ ಕಳೆದುಕೊಂಡಿದ್ದ ಲಕ್ಷಾಂತರ ವೃದ್ಧರು, ವಿಧವೆಯರು ಹಾಗೂ ವಿಕಲಚೇತನರಿಗೆ ಮತ್ತೆ ಮಾಸಿಕ ಪಿಂಚಣಿ ಹಣ ಕೈಸೇರಲಿದೆ.

ಪಿಂಚಣಿ ಸ್ಥಗಿತಗೊಂಡಿದ್ದು ಏಕೆ?

ರಾಜ್ಯ ಸರ್ಕಾರದ 'ಕುಟುಂಬ' (Kutumba) ತಂತ್ರಾಂಶದಿಂದ ಪಡೆದ ದತ್ತಾಂಶಗಳ ಆಧಾರದ ಮೇಲೆ ಪಿಂಚಣಿ ಪಡೆಯುತ್ತಿದ್ದವರ ಮಾಹಿತಿಯನ್ನು ತಾಳೆ ಮಾಡಿದಾಗ, ರಾಜ್ಯಾದ್ಯಂತ ಸುಮಾರು 23,14,544 ಫಲಾನುಭವಿಗಳ ಪಿಂಚಣಿ ಸಂದೇಹಾಸ್ಪದ ಎಂದು ಕಂಡುಬಂದಿತ್ತು. ಬಳಿಕ ಇವರ ಭೌತಿಕ ಪರಿಶೀಲನೆಗಾಗಿ ಗ್ರಾಮ ಆಡಳಿತ ಅಧಿಕಾರಿಗಳು 'ಸಂಯೋಜನೆ ಮೊಬೈಲ್ ಆ್ಯಪ್' ಮೂಲಕ ಪರಿಶೀಲನೆ ನಡೆಸಿದ್ದರು. ಈ ವೇಳೆ ಸೂಕ್ತ ದಾಖಲೆ ಸಲ್ಲಿಸದ, ವಿಳಾಸದಲ್ಲಿ ವಾಸವಿಲ್ಲದ ಹಾಗೂ ನಿಗದಿತ ₹32,000 ಕ್ಕಿಂತ ಹೆಚ್ಚು ಆದಾಯ ಹೊಂದಿದ್ದ ಕಾರಣಕ್ಕೆ ಬರೋಬ್ಬರಿ 18,06,032 ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಆದಾಯ ಮಿತಿ ₹1.20 ಲಕ್ಷಕ್ಕೆ ಹೆಚ್ಚಿಸಿ ಸರ್ಕಾರದ ಮಹತ್ವದ ಆದೇಶ:

ಪರಿಶೀಲನೆ ವೇಳೆ ಬಹುತೇಕ ಅರ್ಹ ಫಲಾನುಭವಿಗಳ ವಾರ್ಷಿಕ ಆದಾಯವು ₹32,000ಕ್ಕಿಂತ ಹೆಚ್ಚು ಮತ್ತು ₹1,20,000ದ ಮಿತಿಯೊಳಗೆ ಇರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಆದಾಯ ಮಿತಿಯನ್ನು ಏರಿಕೆ ಮಾಡಲಾಗಿದೆ.

ಸರ್ಕಾರದ ಆದೇಶದಲ್ಲಿ ಏನಿದೆ?

ಸಂಯೋಜನೆ ಆ್ಯಪ್ ಮೂಲಕ ಪರಿಶೀಲನೆಯ ನಂತರ ₹32,000/- ದಿಂದ ₹1,20,000/- ಒಳಗಿನ ವಾರ್ಷಿಕ ಆದಾಯ ಮಿತಿ ಹೊಂದಿರುವ ಎಲ್ಲಾ ಅರ್ಹ ಫಲಾನುಭವಿಗಳ ಪಿಂಚಣಿಗಳನ್ನು ಮುಂದಿನ ಆದೇಶದವರೆಗೆ ಮುಂದುವರೆಸಲು ಸರ್ಕಾರವು ಆದೇಶಿಸಿದೆ.

ಯಾರಿಗೆಲ್ಲಾ ಸಿಗಲಿದೆ ಈ ಯೋಜನೆಯ ಲಾಭ?

  • ಹಿರಿಯ ನಾಗರಿಕರು (ವೃದ್ಧಾಪ್ಯ ವೇತನ)
  • ವಿಧವೆಯರು (ವಿಧವಾ ವೇತನ)
  • ವಿಕಲಚೇತನರು (ಅಂಗವಿಕಲ ವೇತನ)
  • ಮನಸ್ವಿನಿ ಹಾಗೂ ಸಂಧ್ಯಾ ಸುರಕ್ಷಾ ಫಲಾನುಭವಿಗಳು
  • ಈ ಪರಿಷ್ಕೃತ ಆದೇಶದಿಂದ ತಕ್ಷಣವೇ ಸುಮಾರು 52,000 ಫಲಾನುಭವಿಗಳಿಗೆ ಅನುಕೂಲವಾಗಲಿದ್ದು, ಹಂತ-ಹಂತವಾಗಿ ಪರಿಶೀಲನೆ ಪೂರ್ಣಗೊಂಡ ಬಳಿಕ ರಾಜ್ಯದ ಸುಮಾರು 12 ಲಕ್ಷಕ್ಕೂ ಅಧಿಕ ಮಂದಿಗೆ ನೇರ ಆರ್ಥಿಕ ನೆರವು ದೊರೆಯಲಿದೆ.

ತಹಶೀಲ್ದಾರ್‌ಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ:

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳಿಗೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಎನ್. ಸುಶೀಲ ಅವರು ನಿರ್ದೇಶನ ನೀಡಿದ್ದು, ₹1.20 ಲಕ್ಷ ಮಿತಿಯೊಳಗಿರುವ ಅರ್ಹ ಫಲಾನುಭವಿಗಳಿಗೆ ತಕ್ಷಣವೇ ಪಿಂಚಣಿ ಹಣ ಬಿಡುಗಡೆ ಮುಂದುವರಿಸಲು ಸೂಚಿಸಿದ್ದಾರೆ.