ವಾಲ್ಮೀಕಿ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿದ ರವಿ ಚನ್ನಣ್ಣನವರ್, ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಲು ಸೂಚಿಸಿದ್ದಾರೆ.

ದಾವಣಗೆರೆ (ಫೆ.8): ಓದುವ ಮಕ್ಕಳಿದ್ದರೆ ನನ್ನ ಗಮನಕ್ಕೆ ತನ್ನಿ, ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಜವಾಬ್ಜಾರಿ ನನ್ನದು ಎಂದು ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಡಿಐಜಿಪಿ ಆಗಿರುವ ರವಿ ಡಿ ರವಿ ಚನ್ನಣ್ಣವರ್ ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠ ದಲ್ಲಿ ವಾಲ್ಮೀಕಿ ಜಾತ್ರೆಯ ನೌಕರಗೋಷ್ಠಿಯಲ್ಲಿ ಮಾತಾಡಿದ ಅವರು, ಕೆಲ ಪ್ರಮುಖ ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಇದೇ ವೇಳೆ ಕಳೆದ ನಾಲ್ಕು ವರ್ಷಗಳಿಂದ ಖಾಲಿ ಇದ್ದೇನೆ ಎಂದು ಮಾರ್ಮಿಕವಾಗಿ ಹೇಳಿದ ರವಿ ಚಣ್ಣನವರ್, ಮಕ್ಕಳ ವಿದ್ಯಾಭ್ಯಾಸದ ಕುರಿತು ಅತೀವ ಕಾಳಜಿ ವ್ಯಕ್ತಪಡಿಸಿದರು. 

ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಡಿಐಜಿಪಿ ಆಗಿರುವ ರವಿ ಡಿ ರವಿ ಚನ್ನಣ್ಣವರ್, ಸುಶಿಕ್ಷಿತ ಸಮಾಜ ನಿರ್ಮಾಣವಾಗಲು ಸಮುದಾಯದ ಯುವ ಸಮೂಹ, ಮಕ್ಕಳು ಶಿಕ್ಷಿತರಾಗಬೇಕು. ಸಮುದಾಯದ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದಿದ್ದಾರೆ. ರವಿ ಚನ್ನಣ್ಣನವರ್ ತಮ್ಮ ಮಾತುಗಳಲ್ಲಿ ಪರೋಕ್ಷವವಾಗಿ ಕೆಲ ವಿಚಾರಗಳ ಕುರಿತು ಅಸಮಾಧಾನ ಹೊರಹಾಕಿದ್ದರು. 

ರವಿ ಚನ್ನಣ್ಣವರ್‌ಗೆ ಕೇಂದ್ರ ಸಚಿವ ಸಮಾಧಾನ:

ರವಿ ಚನ್ನಣ್ಣವರ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಮಾತನಾಡಿದ ಕೇಂದ್ರ ಸಚಿವ ವಿ ಸೋಮಣ್ಣ, ದಕ್ಷ ಅಧಿಕಾರಿಯ ಸಾಧನೆ ಕೊಂಡಾಡಿದ್ದಾರೆ. ನಮ್ಮ ಸರ್ಕಾರ ಇದ್ದಾಗ ರವಿ ಚೆನ್ನಣ್ಣನವರಿಗೆ ಉತ್ತಮ ಸ್ಥಾನ ನೀಡಲಾಗಿತ್ತು. ಯಾವುದೇ ಅಡೆ ತಡೆ ಇಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಸುವ ಅವಕಾಶವಿತ್ತು. ಆದ್ರೆ ಈಗ ತೊಂದರೆ ಆಗಿರಬೇಕು ಹೀಗಾಗಿ ಮಾತುಗಳಲ್ಲಿ ಅಸಮಾಧಾನ ಕಾಣುತ್ತಿದೆ ಎಂದು ವಿ ಸೋಮಣ್ಣ ಹೇಳಿದ್ದಾರೆ. ರವಿ ಚನ್ನಣ್ಣವರು ಯೆಸ್ ಎಂದ್ರೆ ಸಾಕು ನಾನು ಕೇಂದ್ರ ಸರ್ಕಾರದ ಸೇವೆಗೆ ತೆಗೆದುಕೊಳ್ಳುತ್ತೇನೆ ಎಂದು ಕೇಂದ್ರ ಸಚಿವ ಸೋಮಣ್ಣ ಭರವಸೆ ನೀಡಿದರು, ತಾಳ್ಮೆ ಇರಲಿ ಪ್ರತಿಭೆಯೇ ಮಾನ ದಂಡ ಅವಕಾಶ ನಿಮ್ಮನ್ನೆ ಹುಡುಕಿಕೊಂಡು ಬರುತ್ತದೆ ಎಂದು ಸಮಾಧಾನ ಮಾಡಿದರು.

ವಾಲ್ಮೀಕಿ ಸಮಾಜ ಬದಲಾಗಬೇಕು:

ವಾಲ್ಮೀಕಿ ಸಮಾಜದಲ್ಲಿ ಬದಲಾವಣೆಯಾಗಬೇಕಿದೆ. ಸಮುದಾಯದಲ್ಲಿ ಎಲ್ಲರೂ ವಿದ್ಯಾವಂತರಾಗಬೇಕು. ಶಿಕ್ಷಣದಲ್ಲಿ ಯಾರೂ ಹಿಂದೂಳಿಯಬಾರದು. ಓದುವ ಮಕ್ಕಳಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಸಮುದಾಯವನ್ನುದ್ದೇಶಿಸಿ ರವಿ ಚನ್ನಣ್ಣವರು ತಿಳಿಸಿದರು.