ಬೆಂಗಳೂರು(ಜೂ.09): ರಾಜ್ಯಕ್ಕೆ ಅನ್ಯ ರಾಜ್ಯದಿಂದ ವಾಪಸಾಗುವವರ ಕ್ವಾರಂಟೈನ್‌ ನಿಯಮಾವಳಿಯನ್ನು ಮತ್ತಷ್ಟುಸಡಿಲಗೊಳಿಸಿರುವ ರಾಜ್ಯ ಸರ್ಕಾರ ಮಹಾರಾಷ್ಟ್ರದಿಂದ ಆಗಮಿಸುವವರೂ ಎರಡು ದಿನದೊಳಗಿನ ಕೊರೋನಾ ಪರೀಕ್ಷೆಯ ನೆಗೆಟಿವ್‌ ವರದಿ ತಂದರೆ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡುವ ಅಗತ್ಯವಿಲ್ಲ ಎಂದು ಹೇಳಿದೆ.

ಇನ್ನು ರಾಜ್ಯಕ್ಕೆ ಉದ್ಯಮ ಅಥವಾ ವೃತ್ತಿ ವ್ಯವಹಾರಗಳಿಗಾಗಿ ಬೇರೆ ರಾಜ್ಯದಿಂದ ಆಗಮಿಸುವ ವ್ಯಕ್ತಿಗಳು 48 ಗಂಟೆ ಒಳಗಾಗಿ ವಾಪಸು ಹೋಗುವಂತಿದ್ದರೆ ಅಂತಹವರಿಗೆ ಕೊರೋನಾ ಪರೀಕ್ಷೆ ಅಥವಾ ಕ್ವಾರಂಟೈನ್‌ ಮಾಡುವಂತಿಲ್ಲ. ಈ ಬಗ್ಗೆ 48 ದಿನಗಳ ಒಳಗಾಗಿ ವಾಪಸು ಹೋಗಲು ರೈಲು ಅಥವಾ ವಿಮಾನದ ರಿಟರ್ನ್‌ ಟಿಕೆಟ್‌ ಸಲ್ಲಿಸಬೇಕು. ಜತೆಗೆ ರಾಜ್ಯದಲ್ಲಿರುವ 48 ಗಂಟೆಗಳ ಕಾಲ ಮಾಸ್ಕ್‌ ಧರಿಸುವುದು ಹಾಗೂ ಸಾಮಾಜಿಕ ಅಂತರದಂತಹ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದೆ.

ಇನ್ನು ರಾಜ್ಯದಿಂದ ವ್ಯವಹಾರ, ವೃತ್ತಿಪರ ಕಾರಣಗಳಿಗಾಗಿ ಬೇರೆ ರಾಜ್ಯಗಳಿಗೆ ಭೇಟಿ ನೀಡುವ ವ್ಯಕ್ತಿಗಳು ನಾಲ್ಕು ದಿನದ ಒಳಗಾಗಿ ರಾಜ್ಯಕ್ಕೆ ವಾಪಸಾದರೆ ಅವರಿಗೆ ಕೊರೋನಾ ಪರೀಕ್ಷೆ ಅಥವಾ ಕ್ವಾರಂಟೈನ್‌ ಅಗತ್ಯವಿಲ್ಲ. ಬದಲಿಗೆ ಆಪ್ತಮಿತ್ರ ಸಹಾಯವಾಣಿ (14410) ಗೆ ವರದಿ ಮಾಡಿದರೆ ಸಾಕು. ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋದ 4 ದಿನಗಳ ಬಳಿಕ ಆಗಮಿಸಿದರೆ 14 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಅತ್ತ ಸೂದ್ ಟೀಕಿಸಿದ ರಾವತ್, ಹೂಗುಚ್ಛ ನೀಡಿ ಗೌರವಿಸಿದ ಠಾಕ್ರೆ!

ಹೋಂ ಕ್ವಾರಂಟೈನ್‌ ಅವಧಿಯೂ ಕಡಿತ:

ಮೇ 31ರಂದು ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಮಹಾರಾಷ್ಟ್ರದಿಂದ ಆಗಮಿಸುವವರಿಗೆ ಮಾತ್ರ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಹಾಗೂ 14 ದಿನ ಹೋಂ ಕ್ವಾರಂಟೈನ್‌ಗೆ ಒಳಪಡಿಸುವುದಾಗಿ ಹೇಳಿತ್ತು. ಆದರೆ, ಇದೀಗ ಹೋಂ ಕ್ವಾರಂಟೈನ್‌ ಅವಧಿಯನ್ನು ಮತ್ತೆ 7 ದಿನಗಳಿಗೆ ಇಳಿಸಲಾಗಿದೆ.

ಉಳಿದಂತೆ ಮಹಾರಾಷ್ಟ್ರದಿಂದ ಹಾಗೂ ಇತರೆ ರಾಜ್ಯದಿಂದ ಆಗಮಿಸುವ 5 ವರ್ಗ (ಮನೆಯಲ್ಲಿ ಸಾವು ಸಂಭವಿಸಿದ್ದರೆ, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, ಹಾಗೂ 60 ವರ್ಷ ಮೇಲ್ಪಟ್ಟವೃದ್ಧರು, ಗಂಭೀರ ಅನಾರೋಗ್ಯ ಸಮಸ್ಯೆ ಹೊಂದಿರುವವರಿಗೆ) ಸಾಂಸ್ಥಿಕ ಕ್ವಾರಂಟೈನ್‌ ವಿಧಿಸುವುದಿಲ್ಲ. ಬದಲಿಗೆ ಹೋಂ ಕ್ವಾರಂಟೈನ್‌ ವಿಧಿಸಿ ಮುದ್ರೆ ಒತ್ತಲಾಗುವುದು.

ಚೀನಾ ಹಿಂದಿಕ್ಕಿದ ಮಹಾರಾಷ್ಟ್ರ!

ಇನ್ನು ಮಹಾರಾಷ್ಟ್ರ ಅಥವಾ ಇತರೆ ರಾಜ್ಯದಿಂದ ಆಗಮಿಸುವ ಉದ್ಯಮಿಗಳು, ವೃತ್ತಿಪರರು 7 ದಿನಗಳವರೆಗೆ ರಾಜ್ಯದಲ್ಲಿ ಇರಬೇಕಾದರೆ ಐಸಿಎಂಆರ್‌ನಿಂದ ಅಂಗೀಕೃತವಾಗಿರುವ ಪ್ರಯೋಗಾಲಯಗಳಿಂದ ಕೊರೋನಾ ಪರೀಕ್ಷೆ ಮಾಡಿಸಿದ (2 ದಿನದ ಒಳಗಿನ ವರದಿ) ನೆಗೆಟಿವ್‌ ವರದಿಯನ್ನು ಸಲ್ಲಿಸಬೇಕು. ಈ ಮೂಲಕ ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್‌ನಿಂದ ವಿನಾಯಿತಿ ಪಡೆಯಬಹುದು.