ಮುಂಬೈ(ಜೂ.08): ದೇಶದಲ್ಲೇ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿರುವ ಮಹಾರಾಷ್ಟ್ರದಲ್ಲಿ ಭಾನುವಾರ ಮತ್ತೆ 3007 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 85,975ಕ್ಕೆ ಏರಿಕೆಯಾಗಿದೆ. ಈ ಮೂಲಕ ಇಡೀ ವಿಶ್ವಕ್ಕೇ ಈ ಮಾರಕ ವ್ಯಾಧಿಯನ್ನು ರಫ್ತು ಮಾಡಿದ ಕುಖ್ಯಾತಿ ಹೊಂದಿದ ಚೀನಾವನ್ನೂ ಸಹ ಮಹಾರಾಷ್ಟ್ರ ಮೀರಿಸಿದಂತಾಗಿದೆ.

ಇಡೀ ವಿಶ್ವಕ್ಕೆ ಕೊರೋನಾ ಹಂಚಿದ ಚೀನಾದಲ್ಲಿ 83,036 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಅದರಲ್ಲಿ 78 ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದು, 4600ಕ್ಕೂ ಹೆಚ್ಚು ಮಂದಿ ಈ ವ್ಯಾಧಿಗೆ ಬಲಿಯಾಗಿದ್ದರು. ಆದರೆ, ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಪೈಕಿ 39314 ಮಂದಿಯಷ್ಟೇ ಗುಣಮುಖರಾಗಿದ್ದು, 3060 ಮಂದಿ ಬಲಿಯಾಗಿದ್ದಾರೆ.

ಕೊರೋನಾ ಬ್ಲಂಡರ್‌: ತನಗೆ ತಾನೇ ಕ್ಲೀನ್‌ಚಿಟ್‌ ಕೊಟ್ಟುಕೊಂಡ ಚೀನಾ!

ದೇಶಾದ್ಯಂತ ನಿನ್ನೆ 8936 ಹೊಸ ಕೇಸು

ಭಾನುವಾರ ದೇಶಾದ್ಯಂತ ಹೊಸದಾಗಿ 8936 ಹೊಸ ಕೊರೋನಾ ಸೋಂಕು ದೃಢಪಟ್ಟಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,46,803ಕ್ಕೆ ತಲುಪಿದೆ. ಇನ್ನು ಭಾನುವಾರ 194 ಜನ ಸಾವನ್ನಪ್ಪುವುದರೊಂದಿಗೆ ಈವರೆಗೆ ವೈರಸ್‌ಗೆ ಬಲಿಯಾದವರ ಸಂಖ್ಯೆ 7052ಕ್ಕೆ ತಲುಪಿದೆ. ಈ ನಡುವೆ ಈವರೆಗೆ ಒಟ್ಟು 122826 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಉಳಿದಂತೆ ತಮಿಳುನಾಡಿನಲ್ಲಿ ಭಾನುವಾರ ಮತ್ತೆ 1515 ಹೊಸ ಕೊರೋನಾ ಪ್ರಕರಣಗಳು ದೃಢವಾಗಿದ್ದು, ಸೋಂಕಿತರ ಸಂಖ್ಯೆ 31,687ಕ್ಕೆ ಮುಟ್ಟಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1282, ಜಮ್ಮು-ಕಾಶ್ಮೀರದಲ್ಲಿ 620, ಹರಾರ‍ಯಣದಲ್ಲಿ 496, ಗುಜರಾತ್‌ನಲ್ಲಿ 480, ಪಶ್ಚಿಮ ಬಂಗಾಳದಲ್ಲಿ 449, ಉತ್ತರ ಪ್ರದೇಶದಲ್ಲಿ 433 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.