Asianet Suvarna News Asianet Suvarna News

Karnataka Rains: ವಿಶೇಷ ನೆರೆ ಪರಿಹಾರಕ್ಕೆ ಕೇಂದ್ರಕ್ಕೆ ರಾಜ್ಯ ಮನವಿ: ಸಿಎಂ ಬೊಮ್ಮಾಯಿ

ವಿಶೇಷ ಪ್ರಕರಣ ಎಂದು ಪರಿಗಣಿಸಿ ವಿಶೇಷ ಅನುದಾನ ನೀಡಿ, ಕೇಂದ್ರ ತಂಡದ ಜತೆಗಿನ ಸಭೆಯಲ್ಲಿ ಸಿಎಂ ಬೊಮ್ಮಾಯಿ ಆಗ್ರಹ

Karnataka Request to Central Government for Special Flood Compensation Says CM Bommai grg
Author
First Published Sep 8, 2022, 12:30 AM IST

ಬೆಂಗಳೂರು(ಸೆ.08):  ರಾಜ್ಯದಲ್ಲಿ ಸುರಿದ ಮಳೆಯಿಂದಾಗಿ ಸಂಭವಿಸಿದ ಅನಾಹುತ ಕುರಿತು ಅಧ್ಯಯನ ನಡೆಸಲು ರಾಜ್ಯಕ್ಕೆ ಆಗಮಿಸಿರುವ ಕೇಂದ್ರದ ತಂಡದ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿ ಮಳೆಯ ಅನಾಹುತ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಕೇಂದ್ರದ ಮಾರ್ಗಸೂಚಿಯಂತೆ ನ್ಯಾಯಯುತ ಪರಿಹಾರ ಒದಗಿಸಲು ಶಿಫಾರಸು ಮಾಡುವಂತೆ ಮುಖ್ಯಮಂತ್ರಿಗಳು ಕೇಂದ್ರ ತಂಡಕ್ಕೆ ಮನವಿ ಮಾಡಿದರು. ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ‘ಕೇಂದ್ರ ತಂಡಕ್ಕೆ ರಾಜ್ಯದ ಪರಿಸ್ಥಿತಿ ವಿವರಿಸಲಾಗಿದೆ. ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿದ್ದು, ಇದು ವಿಶೇಷ ಸಂದರ್ಭ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ವಿಶೇಷ ಅನುದಾನ ನೀಡುವಂತೆ ಒತ್ತಾಯಿಸಲಾಗಿದೆ’ ಎಂದರು.

‘ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ಮೊದಲ ವಾರದಲ್ಲಿ ಬಂದಿರುವ ಮಳೆಯ ಬಗ್ಗೆ ವಿವರಗಳನ್ನು ನೀಡಲಾಗಿದೆ. ಬೆಳೆ ಮತ್ತು ಮನೆಗಳಿಗಾಗಿರುವ ಹಾನಿ, ಮೂಲಸೌಕರ್ಯದ ಹಾನಿ, ಜನ-ಜಾನುವಾರುಗಳಿಗೆ ಆಗಿರುವ ಪ್ರಾಣಿಹಾನಿ ಕುರಿತ ವಿವರಗಳನ್ನು ನೀಡಲಾಗಿದೆ. ನಾಲ್ಕು ತಂಡಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ಭೇಟಿ ಬಳಿಕ ಮತ್ತೊಂದು ಸಭೆ ನಡೆಸಿ ಅಂತಿಮವಾದ ಮನವಿಯನ್ನು ನೀಡಲಾಗುವುದು’ ಎಂದರು.

Bengaluru rain : ಬೊಮ್ಮನಹಳ್ಳಿಯಲ್ಲಿ 2000 ಜನ ಸಂಕಷ್ಟದಲ್ಲಿ!

‘ಬೆಂಗಳೂರಿನ ಜನರಿಗೆ ಆಗಿರುವ ಸಮಸ್ಯೆ, ಕೆರೆಗಳು ತುಂಬಿರುವುದು ಸೇರಿದಂತೆ ನಷ್ಟದ ಪ್ರಾಥಮಿಕ ಅಂದಾಜು ಮಾಡಿರುವುದು ತಿಳಿಸಲಾಗಿದೆ. ನಗರ ಪ್ರದೇಶದಲ್ಲಿ ಅಂಗಡಿಗಳಿಗೆ, ವಾಣಿಜ್ಯ ಸಂಕೀರ್ಣಗಳಲ್ಲಿ ನೀರು ನುಗ್ಗಿದ್ದು, ಸಮಸ್ಯೆಯಾಗಿದೆ. ಅವರಿಗೆ ಎನ್‌ಡಿಆರ್‌ಎಫ್‌ ನಿಯಮಗಳಲ್ಲಿ ಪರಿಹಾರ ಒದಗಿಸಲು ಅವಕಾಶ ಇಲ್ಲ. ಅದನ್ನು ಅಳವಡಿಸಿಕೊಳ್ಳಬೇಕು ಮತ್ತು ಮೀನುಗಾರರಿಗೆ ಪರಿಹಾರ ನೀಡುವುದನ್ನು ಅಳವಡಿಸಿಕೊಳ್ಳಬೇಕು. ಭೂ ಕುಸಿತಕ್ಕೆ ವಿಶೇಷ ಪರಿಹಾರ ನೀಡುವಂತೆ ತಿಳಿಸಲಾಗಿದೆ’ ಎಂದು ತಿಳಿಸಿದರು.

ಸಭೆಯಲ್ಲಿ ಕೇಂದ್ರ ತಂಡಕ್ಕೆ ಮಾಹಿತಿ:

ಇದಕ್ಕೂ ಮುನ್ನ ಗೃಹ ಕಚೇರಿ ಕೃಷ್ಣಾದಲ್ಲಿ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶಿಶ್‌ ಕುಮಾರ್‌ ನೇತೃತ್ವದ ಕೇಂದ್ರ ಅಧ್ಯಯನ ತಂಡದೊಂದಿಗೆ ರಾಜ್ಯದಲ್ಲಿ ಪ್ರವಾಹದಿಂದ ಜುಲೈ, ಆಗಸ್ಟ್‌ ಮತ್ತು ಈವರೆಗೆ ಸಂಭವಿಸಿದ ಹಾನಿಯ ಕುರಿತು ಸಭೆ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರವು ಅತ್ಯಂತ ನಿಖರ ಹಾನಿಯ ಅಂದಾಜುಪಟ್ಟಿಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿತು.

ಕೇಂದ್ರದ ತಂಡವು ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಹಾವೇರಿ, ಧಾರವಾಡ, ಗದಗ, ಬೀದರ್‌, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡುವುದರ ಜತೆಗೆ ಅತಿ ಹೆಚ್ಚು ಭೂಕುಸಿತ, ಸಮುದ್ರ ಕೊರೆತ ಸಂಭವಿಸಿರುವ ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೂ ಭೇಟಿ ನೀಡಬೇಕು ಮತ್ತು ಬೆಂಗಳೂರು ನಗರ, ಮಂಡ್ಯ, ರಾಮನಗರ ಜಿಲ್ಲೆಗಳ ಪ್ರವಾಹ ಪರಿಸ್ಥಿತಿಯನ್ನು ಸಹ ಅವಲೋಕಿಸುವಂತೆ ತಂಡಕ್ಕೆ ಬೊಮ್ಮಾಯಿ ಸಲಹೆ ನೀಡಿದರು.

Bengaluru Floods: ಕೆರೆಗಳ ಕೋಡಿ; ಐಟಿ ಸಿಟಿಗೆ ಕಣ್ಣೀರ ಕೋಡಿ!

ಈ ಬಾರಿ ಭಾರೀ ಸಂಖ್ಯೆಯಲ್ಲಿ ಮೀನುಗಾರಿಕಾ ದೋಣಿಗಳಿಗೆ, ಅಂಗಡಿ ಮುಂಗಟ್ಟುಗಳಿಗೆ ಸಂಭವಿಸಿದ ಹಾನಿ ಮತ್ತು ರಾಮನಗರದ ರೇಷ್ಮೆ ರೀಲಿಂಗ್‌ ಘಟಕ, ಟ್ವಿಸ್ಟಿಂಗ್‌ ಘಟಕಗಳಿಗೆ ಸಂಭವಿಸಿದ ಹಾನಿಯ ಕುರಿತು ಸಹ ಕೇಂದ್ರ ತಂಡದ ಗಮನಕ್ಕೆ ತರಲಾಯಿತು. ಮೊದಲ ಬಾರಿಗೆ ಇಂತಹ ಹಾನಿ ಸಂಭವಿಸಿದ್ದು, ಜೀವನೋಪಾಯಕ್ಕೆ ಸಮಸ್ಯೆಯಾಗಿದೆ. ಹೀಗಾಗಿ ಮಾನವೀಯ ದೃಷ್ಟಿಯಿಂದ ಅವರಿಗೆ ನೆರವು ನೀಡಲು ಪರಿಶೀಲಿಸಬೇಕು ಎಂದರು.

ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌, ಗೃಹ ಸಚಿವ ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಕೇಂದ್ರ ತಂಡದ ಅಧಿಕಾರಿಗಳು ಭಾಗವಹಿಸಿದ್ದರು.
 

Follow Us:
Download App:
  • android
  • ios