Corona Cases 3ನೇ ಅಲೆಯಲ್ಲೇ ಗರಿಷ್ಠ: ಕರ್ನಾಟಕದಲ್ಲಿ 32 ಸಾವು, ಶೇ.33 ಪಾಸಿಟಿವಿಟಿ!
- ನಿನ್ನೆ 46426 ಜನರಲ್ಲಿ ಸೋಂಕು ಪತ್ತೆ, 42 ಸಾವಿರ ಜನ ಗುಣಮುಖ
- ಬೆಂಗಳೂರಿನಲ್ಲಿ ಸೋಂಕು ನಿಧಾನವಾಗಿ ಇಳಿಕೆ, ಇತೆರೆಡೆ ಏರಿಕೆ
- 3.16 ಲಕ್ಷ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ
ಬೆಂಗಳೂರು(ಜ.25); ರಾಜ್ಯದಲ್ಲಿ ಕೊರೋನಾ(Coronavirus) ಸೋಂಕು ತೀವ್ರಗೊಳ್ಳುತ್ತಿದ್ದು, 3ನೇ ಅಲೆಯಲ್ಲಿಯೇ ಅತಿ ಹೆಚ್ಚು 32 ಸಾವು, ಅತಿ ಹೆಚ್ಚು ಪಾಸಿಟಿವಿಟಿ ದರ ಶೇ.33 ಸೋಮವಾರ ದಾಖಲಾಗಿದೆ. ಅಲ್ಲದೆ, ಬರೋಬ್ಬರಿ 16 ಜಿಲ್ಲೆಗಳಲ್ಲಿ ಸೋಂಕಿತರ ಸಾವು ವರದಿಯಾಗಿದೆ.
ರಾಜ್ಯದಲ್ಲಿ(Karnataka) ಸೋಮವಾರ 46,426 ಮಂದಿ ಸೋಂಕಿತರಾಗಿದ್ದು, ಹಾವೇರಿಯಲ್ಲಿ(Haveri) 10 ವರ್ಷದ ಬಾಲಕಿ ಸೇರಿ 32 ಸೋಂಕಿತರು ಸಾವಿಗೀಡಾಗಿದ್ದಾರೆ. 41,703 ಮಂದಿ ಗುಣಮುಖರಾಗಿದ್ದಾರೆ. ಸದ್ಯ 3.16 ಲಕ್ಷ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಭಾನುವಾರ 2.2 ಲಕ್ಷ ಸೋಂಕು ಪರೀಕ್ಷೆಗಳು ನಡೆದಿದ್ದವು. ಆದರೆ, ಸೋಮವಾರ 1.4 ಲಕ್ಷಕ್ಕೆ ತಗ್ಗಿವೆ. ಸೋಂಕಿನ ಹೊಸ ಪ್ರಕರಣಗಳು ಬೆಂಗಳೂರಿನಲ್ಲಿ ತಗ್ಗುತ್ತಿದ್ದು, ಇತರೆ ಜಿಲ್ಲೆಗಳಲ್ಲಿ ಹೆಚ್ಚಳವಾಗುತ್ತಿವೆ. ಮೈಸೂರಿನಲ್ಲಿ ನಾಲ್ಕು ಸಾವಿರ, ತುಮಕೂರಿನಲ್ಲಿ ಮೂರು ಸಾವಿರ ಆಸುಪಾಸಿನಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.
ಮೂವರಲ್ಲಿ ಒಬ್ಬರಿಗೆ ಸೋಂಕು:
ಕೊರೋನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಬರೋಬ್ಬರಿ ಶೇ.33ಕ್ಕೆ ಹೆಚ್ಚಳವಾಗಿದೆ. 3ನೇ ಅಲೆಯಲ್ಲಿ ಅತಿ ಹೆಚ್ಚು ಪಾಸಿಟಿವಿಟಿ ದರ ಇದಾಗಿದೆ. ಇನ್ನು ಎರಡನೇ ಅಲೆಯಲ್ಲಿ ಅತಿ ಹೆಚ್ಚು ಶೇ.36ರಷ್ಟುವರದಿಯಾಗಿತ್ತು.
ದಾಖಲೆಯ ಗುಣಮುಖ:
ಒಂದೇ ದಿನಕ್ಕೆ ಗುಣಮುಖರ ಸಂಖ್ಯೆ ದುಪ್ಪಟ್ಟಾಗಿದೆ. 3ನೇ ಅಲೆಯಲ್ಲಿಯೇ ಅತಿ ಹೆಚ್ಚು 41 ಸಾವಿರ ಮಂದಿ ಒಂದೇ ದಿನ ಗುಣಮುಖರಾಗಿದ್ದಾರೆ.
ಈವರೆಗೂ ಹೊಸ ಪ್ರಕರಣಗಳು ಹೆಚ್ಚಳವಾಗುತ್ತಿದ್ದವು. ಕಳೆದ ಒಂದು ವಾರದಿಂದ ಸೋಂಕಿತರ ಸಾವು ನಿಧಾನವಾಗಿ ಹೆಚ್ಚಳವಾಗುತ್ತಿದೆ. ಈ ಹಿಂದೆ ಜ.20ರಂದು 29 ಸೋಂಕಿತರು ಮೃತಪಟ್ಟಿದ್ದರು. ಆ ಬಳಿಕ ಮತ್ತೆ ಏರಿಕೆಯಾಗುತ್ತಾ ಸಾಗಿ 30ರ ಗಡಿದಾಟಿದೆ. ಇನ್ನು ಬೆಂಗಳೂರು ಮೈಸೂರಿಗೆ ಸೀಮಿತವಾಗಿದ್ದ, ಸಾವಿನ ಪ್ರಕರಣಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ವರದಿಯಾಗುತ್ತಿದೆ. ಸೋಮವಾರ ಬೆಂಗಳೂರಿನಲ್ಲಿ 9, ದಕ್ಷಿಣ ಕನ್ನಡ, ಮೈಸೂರು, ಉಡುಪಿಯಲ್ಲಿ ತಲಾ ಮೂರು, ಹಾವೇರಿ ಮತ್ತು ಕಲಬುರಗಿಯಲ್ಲಿ ತಲಾ ಇಬ್ಬರು, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಗದಗ, ಹಾಸನ, ಮಂಡ್ಯ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ಉತ್ತರ ಕನ್ನಡಲ್ಲಿ ತಲಾ ಒಬ್ಬ ಸೋಂಕಿತರು ಮೃತಪಟ್ಟಿದ್ದಾರೆ. ಹಾವೇರಿಯಲ್ಲಿ 10 ವರ್ಷದ ಬಾಲಕಿ, ಬೆಂಗಳೂರಿನಲ್ಲಿ 19 ವರ್ಷದ ಯುವತಿ, ಬೆಂಗಳೂರಿನಲ್ಲಿ ಇಬ್ಬರು 30 ವರ್ಷದವರನ್ನು ಹೊರತು ಪಡಿಸಿ ಉಳಿದವರು 50 ವರ್ಷ ಮೇಲ್ಪಟ್ಟವರಾಗಿದ್ದಾರೆ.
Wearable Air Sampler: ಕೋವಿಡ್ 19 ಪತ್ತೆಮಾಡಬಲ್ಲ ಕ್ಲಿಪ್-ಆನ್ ಅಭಿವೃದ್ಧಿಪಡಿಸಿದ ಯೇಲ್ ವಿಶ್ವವಿದ್ಯಾಲಯ !
ಮೂರು ಅಲೆಗಳನ್ನು ಸೇರಿ ಈವರೆಗಿನ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 35.64 ಲಕ್ಷಕ್ಕೆ, ಗುಣಮುಖರ ಸಂಖ್ಯೆ 31.62 ಲಕ್ಷಕ್ಕೆ, ಸೋಂಕಿತರ ಸಾವಿನ ಸಂಖ್ಯೆ 38,614ಕ್ಕೆ ಏರಿಕೆಯಾಗಿದೆ.
ಕಳೆದ ವಾರ ಹೊಸ ಪ್ರಕರಣಗಳು 40 ಸಾವಿರಕ್ಕೆ ಹೆಚ್ಚಿದ್ದು, ಆ ಸಂದರ್ಭದಲ್ಲಿ ಸೋಂಕಿಗೊಳಗಾಗಿದ್ದ ಶೇ.99 ರಷ್ಟುಮಂದಿ ಚೇತರಿಸಿಕೊಂಡಿದ್ದು, ಹೀಗಾಗಿಯೇ ಗುಣಮುಖ 41 ಸಾವಿರಕ್ಕೆ ಹೆಚ್ಚಿದೆ ಎನ್ನಲಾಗಿದೆ. ಇನ್ನು ಸಾವು ಮತ್ತು ಪಾಸಿಟಿವಿಟಿ ದರ ಹೆಚ್ಚಳದ ನಡುವೆ ಅತಿ ಹೆಚ್ಚು ಸೋಂಕಿತರು ಗುಣಮುಖರಾಗಿರುವುದು ಸಮಾಧಾನಕರ ಸಂಗತಿ.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೋನಾ ಮೂರನೇ ಅಲೆ ತೀವ್ರಗೊಳ್ಳುತ್ತಿದ್ದಂತೆ ಒಟ್ಟು ಸೋಂಕಿತರ ಸಂಖ್ಯೆ 50 ಸಾವಿರ ಗಡಿ ದಾಟಿದ್ದು ಸೋಮವಾರ ಒಂದೇ ದಿನ ಬರೋಬರಿ 905 ಸೋಂಕಿತರು ಪತ್ತೆಯಾಗುವ ಮೂಲಕ ಸೋಂಕಿತರು 50,571ಕ್ಕೆ ಏರಿಕೆ ಕಂಡಿದೆ. 450 ಮಹಿಳೆಯರು, 322 ಪುರುಷರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಆ ಪೈಕಿ ಚಿಕ್ಕಬಳ್ಳಾಪುರ 182, ಬಾಗೇಪಲ್ಲಿ 94, ಚಿಂತಾಮಣಿ 261, ಗೌರಿಬಿದನೂರು 156, ಗುಡಿಬಂಡೆ 61 ಹಾಗೂ ಶಿಡ್ಲಘಟ್ಟದಲ್ಲಿ 151 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ನಿತ್ಯ ಮೂರಂಕಿಯಲ್ಲಿ ಕೊರೋನಾ ಸೋಂಕಿತರು ಕಾಣಿಸಿಕೊಳ್ಳುತ್ತಿರುವುದರಿಂದ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಈಗ ನಾಲ್ಕಂಕಿ ದಾಟಿದೆ. ಜಿಲ್ಲೆಯಲ್ಲಿ ಒಟ್ಟು 4,475 ಸಕ್ರಿಯ ಪ್ರಕರಣಗಳು ಇದ್ದು ಆ ಪೈಕಿ ಚಿಕ್ಕಬಳ್ಳಾಪುರದಲ್ಲಿ 1,215, ಬಾಗೇಪಲ್ಲಿ 459, ಚಿಂತಾಮಣಿ 542, ಗೌರಿಬಿದನೂರು 1,018, ಗುಡಿಬಂಡೆ 464 ಹಾಗೂ ಶಿಡ್ಲಘಟ್ಟದಲ್ಲಿ 777 ಕೊರೊನಾ ಸಕ್ರಿಯ ಪ್ರಕರಣಗಳು ಇವೆ. ನಿನ್ನೆ ಒಟ್ಟು 682 ಮಂದಿ ಗುಣಮುಖರಾಗಿದ್ದಾರೆ.