ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದರೂ, ಮುಂಗಡ ಹಣ ಪಾವತಿಸಿದ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಪೂರ್ಣ ಪ್ರಮಾಣದ ಪಠ್ಯಪುಸ್ತಕಗಳು ಪೂರೈಕೆಯಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಜೆರಾಕ್ಸ್ ಪ್ರತಿಗಳನ್ನು ಅವಲಂಬಿಸಿದೆ.

ಬೆಂಗಳೂರು (ಆ.22): ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದರೂ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ಪಠ್ಯಪುಸ್ತಕಗಳು ಪೂರ್ಣಪ್ರಮಾಣದಲ್ಲಿ ತಲುಪಿಲ್ಲ. ಇದರಿಂದಾಗಿ ತರಗತಿಗಳನ್ನು ನಡೆಸಲು ಶಾಲಾ ಆಡಳಿತ ಮಂಡಳಿಗಳು ಮತ್ತು ವಿದ್ಯಾರ್ಥಿಗಳು ತೀವ್ರ ಪರದಾಡುವಂತಾಗಿದೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ. ಶೇಕಡಾ 100 ರಷ್ಟು ಮುಂಗಡ ಹಣ (Indent Amount) ಪಾವತಿಸಿದ್ದರೂ ಹಲವು ವಿಷಯಗಳ ಪಠ್ಯಪುಸ್ತಕಗಳನ್ನು ಇದುವರೆಗೂ ಸರಬರಾಜು ಮಾಡಲಾಗಿಲ್ಲ. ಜೊತೆಗೆ, ಜೂನ್ ತಿಂಗಳಲ್ಲಿ ಕರೆಯಬೇಕಿದ್ದ ಎರಡನೇ ಹಂತದ ಪಠ್ಯಪುಸ್ತಕಗಳ ಬೇಡಿಕೆ (Second Indent) ಪ್ರಕ್ರಿಯೆಯನ್ನೂ ಸರ್ಕಾರ ಇದುವರೆಗೆ ಆರಂಭಿಸಿಲ್ಲ ಎಂದು ಖಾಸಗಿ ಶಾಲೆಗಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಜೆರಾಕ್ಸ್ ಪ್ರತಿಯೇ ಗತಿ!

ಪಠ್ಯಪುಸ್ತಕಗಳ ಕೊರತೆಯಿಂದಾಗಿ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಲಭ್ಯವಿರುವ ಪುಸ್ತಕಗಳ 'ಫೋಟೋಕಾಪಿ' (ಜೆರಾಕ್ಸ್) ಮಾಡಿಸಿಕೊಂಡು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಈ ಕುರಿತು ಮಾತನಾಡಿದ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ (KAMS) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ 'ಜನವರಿ ತಿಂಗಳಿನಲ್ಲಿ ಮೊದಲ ಹಂತದ ಇಂಡೆಂಟ್ ಕರೆಯಲಾಗಿತ್ತು. ಹಿಂದಿನ ವರ್ಷದ ದಾಖಲಾತಿ ಆಧಾರದ ಮೇಲೆ ನಾವು ವಿವರಗಳನ್ನು ಸಲ್ಲಿಸಿ, ಪೂರ್ಣ ಹಣ ಪಾವತಿಸಿದ್ದೆವು. ಆದರೆ, ಶೈಕ್ಷಣಿಕ ವರ್ಷ ಆರಂಭವಾದ ನಂತರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುವುದು ಸಹಜ. ಹೀಗಾಗಿಯೇ ಎರಡನೇ ಹಂತದ ಇಂಡೆಂಟ್ ಕರೆಯಲಾಗುತ್ತದೆ. ಆದರೆ ಈ ವರ್ಷ ಇದುವರೆಗೆ ಎರಡನೇ ಇಂಡೆಂಟ್ ಕರೆಯದಿರುವುದು ಪ್ರತಿದಿನ ತರಗತಿಗಳನ್ನು ನಡೆಸಲು ದೊಡ್ಡ ಅಡಚಣೆಯಾಗಿದೆ..' ಎಂದು ಆರೋಪಿಸಿದ್ದಾರೆ.

ಶಿಕ್ಷಣ ಇಲಾಖೆಗೆ ಮನವಿ

ಪಠ್ಯಪುಸ್ತಕ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ ಹಾಗೂ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಸ್ಥೆ (Organisation for Unaided Recognised Schools) ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದೆ. 'ಇದು ನಿರ್ಲಕ್ಷಿಸುವ ವಿಷಯವಲ್ಲ. ಜನವರಿಯಲ್ಲೇ ಪೂರ್ಣ ಹಣ ಪಾವತಿಸಿ ಆರ್ಡರ್ ಮಾಡಿದ್ದರೂ ಅನೇಕ ಶಾಲೆಗಳಿಗೆ ಇನ್ನೂ ಪುಸ್ತಕಗಳು ಸಿಕ್ಕಿಲ್ಲ. ಹೆಚ್ಚುವರಿ ಪುಸ್ತಕಗಳಿಗಾಗಿ 'ಸೆಕೆಂಡ್ ಇಂಡೆಂಟ್' ಸಲ್ಲಿಸಲು ಶಾಲೆಗಳಿಗೆ ಸಾಧ್ಯವಾಗುತ್ತಿಲ್ಲ..' ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಜಿಲ್ಲಾ ಮಟ್ಟದಲ್ಲೇ ಪಠ್ಯಪುಸ್ತಕ ವರ್ಗಾವಣೆಗೆ ಸಲಹೆ

ಕೆಲವು ಶಾಲೆಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ದಾಖಲಾತಿ ಹೆಚ್ಚಿದ್ದರೆ, ಇನ್ನು ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಎಲ್ಲಾ ವಿದ್ಯಾರ್ಥಿಗಳ ವಿವರಗಳು ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ಸಿಸ್ಟಮ್ (SATS) ನಲ್ಲೇ ಇರುವುದರಿಂದ, ಕಡಿಮೆ ದಾಖಲಾತಿಯಿರುವ ಶಾಲೆಗಳಿಂದ ಹೆಚ್ಚುವರಿ ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಜಿಲ್ಲಾ ಉಪನಿರ್ದೇಶಕರ (DDPI) ಮಟ್ಟದಲ್ಲೇ ಪುಸ್ತಕಗಳನ್ನು ವರ್ಗಾಯಿಸಿ ಸಮಸ್ಯೆ ಬಗೆಹರಿಸಬಹುದು. ಹೊಸ ಪುಸ್ತಕಗಳಿಗಾಗಿ ಕಾಯಿಸುವ ಬದಲು ಈ ವ್ಯವಸ್ಥೆ ಮಾಡಬೇಕು ಎಂದು ಶಶಿಕುಮಾರ್ ಸಲಹೆ ನೀಡಿದ್ದಾರೆ.

ಪುಸ್ತಕಗಳಿಗಾಗಿ ಈಗಾಗಲೇ ಹಣ ಪಾವತಿಸಿರುವ ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸುತ್ತಿದ್ದಾರೆ. "ಪೋಷಕರು ಹಣ ನೀಡಿರುವುದರಿಂದ ಅವರಿಗೆ ಯಾವುದೇ ಕಾರಣ ಕೊಟ್ಟರೂ ಒಪ್ಪಿಕೊಳ್ಳುವುದಿಲ್ಲ" ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಇದೇ ವೇಳೆ, ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ (KTBS) ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕಗಳನ್ನು ಪೂರೈಸಲು ಸಾಧ್ಯವಾಗದಿದ್ದರೆ, ಖಾಸಗಿ ಮಾರುಕಟ್ಟೆಯಲ್ಲಿ (Open Market) ಪುಸ್ತಕಗಳು ಮುಕ್ತವಾಗಿ ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಸ್ಥೆ ಮನವಿ ಮಾಡಿದೆ.