ಬೆಂಗಳೂರು[ಜ.15]: ಕಾಂಗ್ರೆಸ್ ಪಾಲಿಗೆ ಸದಾ ‘ಟ್ರಬಲ್ ಶೂಟರ್’ ಎನಿಸಿರುವ ಡಿ.ಕೆ.ಶಿವಕುಮಾರ್ ಅವರು ಆಪರೇಷನ್ ಕಮಲ ಪ್ರಯತ್ನ ನಡೆದಿದ್ದರೂ ಸಮ್ಮಿಶ್ರ ಸರ್ಕಾರದ ಮೂವರು ದಿಗ್ಗಜರೆನಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರೊಂದಿಗೆ ಸಮಾನ ಅಂತರ ಕಾಯ್ದುಕೊಂಡಿದ್ದಾರೆ.

ಆಪರೇಷನ್ ಕಮಲದಂತಹ ಪ್ರಯತ್ನ ನಡೆದಾಗ ಸದಾ ಮುಂಚೂಣಿಯಲ್ಲಿ ನಿಂತು ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದ್ದ ಅವರು ಈ ಬಾರಿ ಹೇಳಿಕೆಗೆ ಸೀಮಿತವಾಗಿದ್ದಾರೆ. ಇಷ್ಟಾದರೂ ಮಂಗಳವಾರ ಅವರು ಕಾರ್ಯಕ್ರಮವೊಂದರ ನಿಮಿತ್ತ ಮುಂಬೈಗೆ ತೆರಳಲಿದ್ದು, ಆ ವೇಳೆ ಮುಂಬೈನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಅತೃಪ್ತರನ್ನು ಸಮಾಧಾನಪಡಿಸಿ ಕರೆತರುವ ಪ್ರಯತ್ನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ಇದನ್ನು ನಿರಾಕರಿಸುವ ಶಿವಕುಮಾರ್ ಅವರ ಆಪ್ತ ಮೂಲಗಳು, ಕೇಂದ್ರ ಸರ್ಕಾ ರವು ಔರಾಂಗಾಬಾದ್‌ನಲ್ಲಿ ಆಯೋಜಿಸಿರುವ ದೇಶದ ಎಲ್ಲಾ ಜಲಸಂಪನ್ಮೂಲ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದು, ಈ ವೇಳೆ ಮುಂಬೈ ನಲ್ಲಿ ಒಂದು ದಿನ ಉಳಿದುಕೊಳ್ಳಲಿದ್ದಾರೆ. ಶಿವಕುಮಾರ್ ಅವರ ಮುಂಬೈ ಪ್ರವಾಸಕ್ಕೂ ಆಪರೇಷನ್ ಕಮಲಕ್ಕೂ ಯಾವ ಸಂಬಂಧವಿಲ್ಲ ಎನ್ನುತ್ತಾರೆ.