ಹತ್ತು ಸಚಿವರ ವಿರುದ್ಧ ನಡೆದಿರುವ ಸ್ಟಿಂಗ್ ಆಪರೇಷನ್ ಬಗ್ಗೆ ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಕೂಡಲೇ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಈ ವಿಚಾರದಿಂದ ಇಡೀ ಸಚಿವ ಸಂಪುಟದ ಮೇಲೆ ಅನುಮಾನ ಮೂಡಿದ್ದು, ಡಿ.ಕೆ. ಶಿವಕುಮಾರ್ ಮೌನ ಮುರಿದು ಜನರ ಗೊಂದಲ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು (ಅ.11): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸ್ಟಿಂಗ್‌ ಆಪರೇಶನ್‌ ಬಗ್ಗೆ ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಎಫ್‌ಐಆರ್‌ ದಾಖಲಿಸಿ ತನಿಖೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹತ್ತು ಸಚಿವರ ವಿರುದ್ಧ ಸ್ಟಿಂಗ್‌ ಆಪರೇಶನ್‌ ಆಗಿದೆ, ಸಿ.ಡಿ. ಇದೆ, ಭ್ರಷ್ಟಾಚಾರದ ಬಗ್ಗೆ ಮಾಹಿತಿ ಇದೆ ಎಂದೆಲ್ಲ ಹೇಳಿದ್ದಾರೆ. ಇಡೀ ಸಚಿವ ಸಂಪುಟ ಈಗ ಮಲಿನವಾಗಿದೆ. ಸಚಿವರು ಭ್ರಷ್ಟಾಚಾರಿಗಳಾಗಿದ್ದು, ಯಾರೋ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಜನರು ಮಾತಾಡುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿ ತಮ್ಮದೇ ಸಚಿವ ಸಂಪುಟದವರ ಮೇಲೆ ಸ್ಟಿಂಗ್‌ ಆಪರೇಶನ್‌ ಆಗಿದೆ ಎಂದರೆ, ಸಚಿವರ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತದೆ. ಈಗ ಸಚಿವರು ಸಂಕೋಚದಲ್ಲೇ ಇರಬೇಕಾ, ರಾಜೀನಾಮೆ ನೀಡಬೇಕಾ ಎಂದು ಗೊತ್ತಿಲ್ಲ. ಏಕೆಂದರೆ ಎಲ್ಲ ಸಚಿವರ ಮೇಲೂ ಈಗ ಅನುಮಾನ ಇದೆ ಎಂದರು.

ಸ್ಟಿಂಗ್‌ ಆಪರೇಶನ್‌ ಮಾಡಿದವರ ವಿರುದ್ಧ ಎಫ್‌ಐಆರ್‌

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಲ್ಲೇ ಹೋದರೂ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ತಾಕತ್ತಿದ್ದರೆ ಸ್ಟಿಂಗ್‌ ಆಪರೇಶನ್‌ ಮಾಡಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು. ಹೀಗೆ ಮಾಡಿದವರು ಇದೇ ರಾಜ್ಯದವರಾ? ಹೊರ ರಾಜ್ಯದವರಾ? ಇದಕ್ಕೆ ಎಷ್ಟು ಹಣ ಖರ್ಚಾಗಿದೆ ಹೀಗೆ ಎಲ್ಲ ವಿಷಯಗಳು ತನಿಖೆಯಿಂದ ಹೊರಗೆ ಬರಬೇಕಿದೆ. ಇದು ಕೇವಲ ವ್ಯಕ್ತಿಗಳ ಪ್ರಶ್ನೆಯಲ್ಲ. ಇದು ಸರ್ಕಾರದ ಸಚಿವ ಸಂಪುಟದ ಗೌರವದ ಪ್ರಶ್ನೆ. ಎಫ್‌ಐಆರ್‌ ದಾಖಲಿಸುವುದಿಲ್ಲ ಎಂದರೆ, ಮುಖ್ಯಮಂತ್ರಿ ಕೇವಲ ಗಾಳಿಯಲ್ಲಿ ಗುಂಡು ಹೊಡೆಯುವವರು ಎಂದು ಸಾಬೀತಾಗುತ್ತದೆ. ಬಿಜೆಪಿ, ಜೆಡಿಎಸ್‌ ವಿರುದ್ಧ ಸುಮ್ಮನೆ ಆರೋಪ ಮಾಡುವುದನ್ನು ನಿಲ್ಲಿಸಿ, ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ ನಂತರ ಮೌನಕ್ಕೆ ಜಾರಿದ್ದಾರೆ. ಕಳೆದ ಅಧಿವೇಶನದಲ್ಲೂ ಮೌನ ವ್ರತ ಮಾಡಿದ್ದರು. ಅವರಿಗೆ ಈಗ ಗರ ಬಡಿದಂತೆ ಆಗಿದೆ. ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದು, ಜನರಿಗೆ ಅವರ ಮೇಲೆ ಅಪಾರ ಗೌರವ ಇದೆ. ಈ ಸಂದರ್ಭದಲ್ಲಾದರೂ ಅವರು ಮಾತಾಡಿ ಜನರ ಮನಸ್ಸಿನ ಗೊಂದಲವನ್ನು ಬಗೆಹರಿಸಬೇಕು ಎಂದರು.