14 ಬಾಂಗ್ಲಾದೇಶಿ ಪ್ರಜೆಗಳಿಗೆ ಅಕ್ರಮವಾಗಿ ಆಧಾರ್ ಹಾಗೂ ಪಾಸ್ಪೋರ್ಟ್ ಪಡೆಯಲು ನೆರವಾದ ಸರ್ಕಾರಿ ವೈದ್ಯರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಯಾವುದೇ ಸೂಕ್ತ ದಾಖಲೆಗಳಿಲ್ಲದೆ ವಿಳಾಸ ದೃಢೀಕರಣ ಪತ್ರಗಳಿಗೆ ಸಹಿ ಹಾಕಿದ್ದಕ್ಕಾಗಿ ನ್ಯಾಯಪೀಠ ಅಸಮಾಧಾನ.
ಬೆಂಗಳೂರು (ನ.26): ಯಾವುದೇ ಸೂಕ್ತ ದಾಖಲೆಗಳಿಲ್ಲದಿದ್ದರೂ 14 ಬಾಂಗ್ಲಾದೇಶಿ ಪ್ರಜೆಗಳು(14 Bangladeshi nationals) ಅಕ್ರಮವಾಗಿ ಆಧಾರ್ ಕಾರ್ಡ್(Adhar Card) ಹಾಗೂ ಪಾಸ್ಪೋರ್ಟ್(Passport) ಪಡೆಯಲು ವಿಳಾಸ ದೃಢೀಕರಣ ಪತ್ರ(Address Verification Letter)ಗಳಿಗೆ ಸಹಿ ಹಾಕಿದ್ದ ಸರ್ಕಾರಿ ವೈದ್ಯರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್(High court) ನಿರಾಕರಿಸಿದೆ.
ಪ್ರಕರಣ ರದ್ದು ಕೋರಿ ಡಾ.ಲೋಕೇಶ್ ಅರ್ಜಿ
ಪ್ರಕರಣ ರದ್ದು ಕೋರಿ ಡಾ.ಲೋಕೇಶ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅರ್ಜಿದಾರರು ಸರ್ಕಾರಿ ವೈದ್ಯರಾಗಿ ಸಾರ್ವಜನಿಕರ ಆರೋಗ್ಯ ಕಾಪಾಡುವುದು ಅವರ ಕರ್ತವ್ಯ. ಗೆಜೆಟೆಡ್ ಅಧಿಕಾರಿಯಾಗಿ ದಾಖಲೆಗಳನ್ನು ದೃಢೀಕರಿಸುವ ಅಧಿಕಾರ ಅವರಿಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ವಿಳಾಸಕ್ಕೆ ಸಂಬಂಧಿಸಿದಂತೆ ಯಾವುದೇ ಬಾಡಿಗೆ ಕರಾರು ಪತ್ರ ಅಥವಾ ಇತರೆ ಅಗತ್ಯ ದಾಖಲೆಗಳನ್ನು ಪರಿಶೀಲಿಸದೆ 14 ವಿದೇಶಿ ಪ್ರಜೆಗಳಿಗೆ ವಿಳಾಸ ದೃಢೀಕರಿಸಿದ್ದಾರೆ. ಒಂದಿಬ್ಬರಿಗೆ ಮಾಡಿದ್ದರೆ ಆಕಸ್ಮಿಕ ಎನ್ನಬಹುದಿತ್ತು. ಆದರೆ, ಅನೇಕರಿಗೆ ವಿಳಾಸ ದೃಢೀಕರಣ ಮಾಡಲಾಗಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಬಾಡಿಗೆ ನೀಡಿದವನಿಗೆ ರಿಲೀಫ್:
ಇದೇ ಪ್ರಕರಣದಲ್ಲಿ ಬಾಂಗ್ಲಾದೇಶದ ಇಬ್ಬರು ಪ್ರಜೆಗಳಿಗೆ ಶೆಡ್ ಬಾಡಿಗೆಗೆ ನೀಡಿದ್ದಲ್ಲದೆ, ಬಾಡಿಗೆ ಕರಾರು ಪತ್ರ ಮಾಡಿಸಿಕೊಟ್ಟು ಆಧಾರ್ ಕಾರ್ಡ್ ಪಡೆಯಲು ನೆರವಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಆರೋಪಿಯೊಬ್ಬರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ತನಿಖಾಧಿಕಾರಿಗಳು ಈ ಆರೋಪಿಯ ವಿರುದ್ಧ ಯಾವುದೇ ಪ್ರಾಥಮಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಬಾಂಗ್ಲಾದೇಶದ ಪ್ರಜೆಗಳಿಗೆ ಅಕ್ರಮವಾಗಿ ಭಾರತೀಯ ಗುರುತಿನ ಚೀಟಿಗಳನ್ನು ಪಡೆಯಲು ಸಹಾಯ ಮಾಡಿದ ಆರೋಪದ ಮೇಲೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಡಾ.ಲೋಕೇಶ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
















