ವಿಜಯಪುರದಲ್ಲಿ ನಡೆದ ಸಭೆಯಲ್ಲಿ, ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರು ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕೆಂದು ಬಲವಾಗಿ ಪ್ರತಿಪಾದಿಸಿದ್ದಾರೆ. ದಲಿತರು ಕೇವಲ ಕಸ ಗುಡಿಸಲು ಸೀಮಿತವೇ ಎಂದು ಪ್ರಶ್ನಿಸಿರುವ ಅವರು, ಪಕ್ಷಾತೀತವಾಗಿ ದಲಿತರೊಬ್ಬರು ಸಿಎಂ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯಪುರ (ನ.4): ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಯ ಮಧ್ಯೆ ದಲಿತ ಮುಖ್ಯಮಂತ್ರಿ ವಿಷಯವು ಮುನ್ನೆಲೆಗೆ ಬಂದಿದ್ದು, ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಇಂದು ವಿಜಯಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತೀಕ್ಷ್ಣ ಹೇಳಿಕೆ ನೀಡಿದ್ದಾರೆ.

ರಾಜ್ಯಕ್ಕೆ ದಲಿತ ಸಿಎಂ ಬೇಕು:

ದಲಿತರೊಬ್ಬರು ಮುಖ್ಯಮಂತ್ರಿಯಾದರೆ ನನಗಂತೂ ಬಹಳ ಸಂತೋಷ ಆಗುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75ವರ್ಷಗಳು ಕಳೆದಿವೆ, ನಮ್ಮ ಸುತ್ತಮುತ್ತಲಿನ ರಾಜ್ಯಗಳಲ್ಲಿ ದಲಿತ ಮುಖ್ಯಮಂತ್ರಿಗಳು ಇದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾಗಲು ಏನು ಧಾಡಿಯಾಗಿದೆ ಎಂದು ಪ್ರಶ್ನಿಸಿದರು.

ದಲಿತರು ಮುನ್ಸಿಪಾಲಿಟಿ ಕಸ ಹೊಡೆಯೋಕೆ ಮಾತ್ರವೇನು?

ಮುನ್ಸಿಪಾಲಿಟಿಯಲ್ಲಿ ದಲಿತರು ಕಸ ಹೊಡೆಯೋಕೆ ಮಾತ್ರ ಇರೋದಾ? ದಲಿತರೇನು ಅಯೋಗ್ಯರಿದ್ದೀವಾ? ರಾಜ್ಯದ ಸಿಎಂ ಆಗಲು ಧಾಡೆ ಆಗೈತಿ? ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯರಿದ್ದಾರೆ. ಅವರನ್ನ ಸಿಎಂ ಮಾಡಲಿಕ್ಕೇನು ಧಾಡೆ ಆಗೈತಿ ನಮ್ಮ ರಾಜ್ಯದಲ್ಲಿ ಖಂಡಿತವಾಗಿಯೂ ದಲಿತ ಸಿಎಂ ಆಗುತ್ತಾರೆ ಎಂದರು.

ಪಕ್ಷ ಯಾವುದೇ ಇರಲಿ ದಲಿತ ಸಿಎಂ ಬೇಕು:

ಯಾವ ಪಕ್ಷದಿಂದಾಗಲಿ ದಲಿತ ಸಿಎಂ ಆಗಲೇಬೇಕು. ದಲಿತ ಸಿಎಂ ಮಾಡಿದರೆ ಮಾತ್ರ ಮಾಡದಿದ್ದರೆ ಜನತೆ ಬೈಯ್ಕೊಂಡು ಹೋಗುತ್ತಾರೆ. ಬಿಜೆಪಿಯಿಂದ ದಲಿತ ಸಿಎಂ ಆಗುತ್ತಾರೆ ಎಂಬುದನ್ನು ಕೇಳೋಕೆ ಹೋಗಬೇಡಿ. ಬಿಜೆಪಿಯಿಂದಾಗಲಿ, ಯಾವ ಪಕ್ಷದಿಂದಾಗಲಿ ಆದರೆ ಖಂಡಿತ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.