ಸಚಿವ ಸಂಪುಟ ಸಭೆಯಲ್ಲಿ ಕೆ.ಜೆ. ಜಾರ್ಜ್ ಜೊತೆಗಿನ ಗಲಾಟೆ ವರದಿಗಳನ್ನು ಸಚಿವ ಎಚ್.ಸಿ. ಮಹದೇವಪ್ಪ ನಿರಾಕರಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆ ಬಗ್ಗೆ ಚರ್ಚೆಯಾಗಿದೆ ಎಂದ ಅವರು, ದಲಿತ ಸಿಎಂ ಹೋರಾಟ ನಿರಂತರವಾಗಿದ್ದು, ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧರಿಸಲಿದೆ.
ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಅವರ ಎದುರುಗಡೆಯೇ ಸಚಿವ ಎಚ್ ಸಿ ಮಹದೇವಪ್ಪ ಹಾಗೂ ಸಚಿವ ಕೆ ಜೆ ಜಾರ್ಜ್ ಗಲಾಟೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಾತನಾಡಿರುವ ಸಚಿವ ಎಚ್ ಸಿ ಮಹದೇವಪ್ಪ ಸಚಿವ ಸಂಪುಟ ಸಭೆಯಲ್ಲಿ ಯಾರು ಯಾರಿಗೆ ಗಲಾಟೆ ಆಗಲ್ಲ. ಆಗೋಕೆ ಸಾಧ್ಯವಿಲ್ಲ. ವಿಷಯ ಬಂದಾಗ ಚರ್ಚೆಗಳು ಆಗುತ್ತವೆ. ಚರ್ಚೆಗಳು ವಿಷಯಕ್ಕೆ ಸಂಬಂಧಿಸಿದಂತೆ ಆಗುತ್ತವೆ. ಜಟಾಪಟಿ, ಸಂಘರ್ಷ ಎನೂ ಆಗಿಲ್ಲ. ಗಂಗಾ ಕಲ್ಯಾಣ ಯೋಜನೆಗೆ ಟೆಂಡರ್ ಮುಂದುವರಿಸುವ ಬಗ್ಗೆ ಚರ್ಚೆ ಆಯ್ತು. ವಿದ್ಯುತ್ ಸಂಪರ್ಕ ನೀಡಲು ಹಣ ಜಾಸ್ತಿ ಆಗುತ್ತೆ ಅನ್ನೋ ಬಗ್ಗೆ ಚರ್ಚೆ ಆಯ್ತು. ಒಂದು ಯೂನಿಟ್ ಗೆ ಮೊದಲು 50 ಸಾವಿರ ರೂಪಾಯಿ ಇತ್ತು. ನಂತರ ನಾನೇ ಅದನ್ನ 75 ಸಾವಿರ ರೂಪಾಯಿಗೆ ಹೆಚ್ಚಳ ಮಾಡಿದ್ದೇನೆ. ಈ ಯೋಜನೆ ಹಿಂದುಳಿದ ಮುಸ್ಲಿಂ ಪರಿಶಿಷ್ಟ ಜಾತಿಗಳಿಗೆ ಮೀಸಲಾದ ಯೋಜನೆ. ಟೆಂಡರ್ ಮುಂದುವರಿಸುವ ಬಗ್ಗೆ ಚರ್ಚೆ ನಡೆದಿದೆ ಎಂದರು.
ಡಿಸಿಎಂ ಡೆಡ್ ಲೈನ್ ಕೊಟ್ಟಿರುವ ವಿಚಾರ
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಡೆಡ್ ಲೈನ್ ಕೊಟ್ಟಿರುವ ವಿಚಾರವಾಗಿ ಮಾತನಾಡಿದ ಸಚಿವ ಎಚ್‌ಸಿ ಮಹದೇವಪ್ಪ ಅವರು ದೊಡ್ಡ ದೊಡ್ಡವರ ವಿಷಯ ನನಗೇನು ಗೊತ್ತಾಗುತ್ತೆ ಸರ್? ಡೆಡ್ ಲೈನ್ ಕೊಟ್ಟಿದ್ದು ನನಗೆ ಹೆಂಗೆ ಗೊತ್ತಾಗುತ್ತೆ? ಚೀಫ್ ಮಿನಿಸ್ಟರ್, ಅಧ್ಯಕ್ಷರು ಹೈಕಮಾಂಡ್‌ಗೆ ಗೊತ್ತಿರುವ ವಿಷಯ ಅದು ಎಂದರು.
ದಲಿತ ಸಿಎಂ ಹೋರಾಟ ನಿರಂತರವಾಗಿರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಹದೇವಪ್ಪ, ಅಂಬೇಡ್ಕರ್ ಅವರ ಹೋರಾಟ ನೋಡಿದ ಮೇಲೆ ಅದು ನಿರಂತರವಾಗಿ ಇದ್ದೇ ಇದೆ ಅಲ್ವಾ? ಶೋಷಿತ ವರ್ಗಗಳಿಗೆ ಶಕ್ತಿ ತುಂಬಬೇಕು ಎಂಬುದೇ ಅಂಬೇಡ್ಕರ್ ಅವರ ಹೋರಾಟ, ಸಿದ್ದಾಂತ. ನೂರು ವರ್ಷಗಳ ಹಿಂದಿನಿಂದ ಈ ಹೋರಾಟ ಇದೆ. ಶೈಕ್ಷಣಿಕ ಔದ್ಯೋಗಿಕ ಆರ್ಥಿಕ ರಾಜಕೀಯ ಅವಕಾಶಗಳಿಗಾಗಿ ಹೋರಾಟ ಅದು ಇದ್ದೇ ಇದೆ. ಈ ಹೋರಾಟ ಇದ್ದೇ ಇರುತ್ತದೆ. ಹೋರಾಟ ಮುಂದುವರಿಯುತ್ತದೆ. ಯಾವಾಗ ತೀರ್ಮಾನ ಆಗುತ್ತೋ ಹೈಕಮಾಂಡ್‌ಗೆ ಬಿಟ್ಟಿದ್ದು, ರಾಜಕೀಯ ಪಕ್ಷದ ಒಳಗೆ ಹೋರಾಟವನ್ನು ಇದ್ದೇ ಇರುತ್ತದೆ. ಹೈಕಮಾಂಡ್ ಹಂತದಲ್ಲಿ ತೀರ್ಮಾನ ಆಗಬೇಕು.
ಅಳುವ ಪರಿಸ್ಥಿತಿಯಂತೂ ಇಲ್ಲ
ಕರ್ನಾಟಕದಲ್ಲಿ ದಲಿತ ಸಿಎಂ ಸಾಧ್ಯವಾಗುವುದಿಲ್ಲ ಎಂದು ಯಾರು ಹೇಳಿದ್ದಾರೆ? ಸೂಕ್ತ ಸಮಯ ಸೂಕ್ತ ಸಂದರ್ಭದಲ್ಲಿ ಕಾಯುತ್ತಿರಬಹುದು. ಮಗುವಿಗೆ ಹಸಿವಾಗಿದೆ ಹಾಲು ಬೇಕು ಅಳುತ್ತಿದೆ ಎಂಬುದು ತಾಯಿಗೆ ಗೊತ್ತಾಗಬೇಕಲ್ವಾ? ತಾಯಿ ಕರುಣೆ ಇರುವುದರಿಂದ ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗುತ್ತಿರುವುದು. ಇಲ್ಲದಿದ್ದರೆ ಇಷ್ಟೊತ್ತಿಗೆ ಮಗು ಅಪೌಷ್ಟಿಕತೆಯಿಂದ ಸಿಂಡ್ರೋಮ್ ಗೆ ತುತ್ತಾಗುತ್ತಿತ್ತು. ಆರೋಗ್ಯವಂತ ಮಗುವಂತು ಇದೆ, ಅಳುವ ಪರಿಸ್ಥಿತಿಯಂತೂ ಇಲ್ಲ. ಅಂಬೇಡ್ಕರ್ ಅಳದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ದಲಿತರ ನೋವು ದಲಿತರಿಗೆ ಅರ್ಥವಾಗುವುದು. ಅಸ್ಪೃಶ್ಯರ ನೋವು ಅಸ್ಪೃಶ್ಯರಿಗೆ ಮಾತ್ರ ಅರ್ಥವಾಗುತ್ತದೆ. ಅವರ ನೋವು ಸಂಕಟ ಅವರಿಗೆ ಮಾತ್ರ ಅರ್ಥವಾಗುತ್ತದೆ ಬೇರೆಯವರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಹೋರಾಟ ನಿರಂತರ. ಇದು ನನ್ನ ಅನುಭವ. ದಲಿತರ ಪರವಾಗಿ ಮಾಡಬಾರದು ಅಂತ ಯಾರು ಹೇಳುವುದೇ ಇಲ್ಲ.
ಯಾವ ಧರ್ಮ ಯಾವ ಜಾತಿ ನಿಮ್ಮನ್ನು ಉದ್ಧಾರ ಮಾಡಲ್ಲ
ಯಾವ ಧರ್ಮ ಯಾವ ಜಾತಿ ನಿಮ್ಮನ್ನು ಉದ್ಧಾರ ಮಾಡಲ್ಲ ನಿಮ್ಮ ಉದ್ಧಾರ ನಿಮ್ಮ ಕೈಯಲ್ಲೇ ಇದೆ ಎಂದಿದ್ದಾರೆ ಅಂಬೇಡ್ಕರ್ ಮತ್ತು ಮಹಾತ್ಮರು. ಯಾರು ದಲಿತರ ನೋವಿಗೆ ಸ್ಪಂದಿಸುವುದಿಲ್ಲ. ದಲಿತರ ಸಂಕಟ ಅಸ್ಪೃಶ್ಯರ ಸಂಕಟ ಅವರಿಗೆ ಮಾತ್ರ ಅರ್ಥವಾಗುವುದು. ನನ್ನ ಗಂಭೀರ ಅನುಭವ ಗಂಭೀರ ಕಾಳಜಿ ಮತ್ತು ಇದು ನನ್ನ ನೋವು. ನಮ್ಮ ಹೈಕಮಾಂಡ್ ದಲಿತರ ಪರವಾಗಿಯೇ ಇದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಬಗ್ಗೆ ವಿಪರೀತ ಹೆಮ್ಮೆ ಇದೆ. ಜೈ ಭೀಮ್ , ಜೈ ಬಾಪು, ಜೈ ಸಂವಿಧಾನ ಪ್ರತಿಪಾದನೆ ಮಾಡುತ್ತಿದ್ದಾರೆ ರಾಹುಲ್ ಹಾಗೂ ಮಲ್ಲಿಕಾರ್ಜುನ ಖರ್ಗೆ. ರಾಜ್ಯದಲ್ಲಿ ಆ ಕೆಲಸವನ್ನು ನಾನು ಮಾಡಿದ್ದೇನೆ ಎಂದರು.
