ಕನ್ನಡ ಭಾಷಾ ಕಲಿಕೆ ಅಧಿನಿಯಮದಡಿ ಕನ್ನಡ ಕಲಿಸುತ್ತಿಲ್ಲ ಎಂಬ ದೂರು ಬಂದರೆ ಅಂತಹ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ವಿಧಾನ ಪರಿಷತ್ (ಡಿ.17): ಕನ್ನಡ ಭಾಷಾ ಕಲಿಕೆ ಅಧಿನಿಯಮದಡಿ ಕನ್ನಡ ಕಲಿಸುತ್ತಿಲ್ಲ ಎಂಬ ದೂರು ಬಂದರೆ ಅಂತಹ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಬಿಜೆಪಿಯ ಎನ್‌.ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನು ನೋಂದಣಿ ಮಾಡುವಾಗ ಕನ್ನಡ ಭಾಷಾ ಕಲಿಕೆ ಅಧಿನಿಯಮದಂತೆ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸಲು ಜಾರಿಗೆ ತಂದಿರುವ ನಿಯಮ ಪಾಲನೆ ಮಾಡದ ಬಗ್ಗೆ ದೂರುಗಳು ಬಂದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ಬೆಂಗಳೂರಿನ ಆನೇಕಲ್‌ನ ದೊಮ್ಮಸಂದ್ರದ ದಿ.ಬೆಂಗಳೂರು ಇಂಟರ್‌ ನ್ಯಾಷನಲ್‌ ಶಾಲೆ, ಗೇರ್‌ ಇನ್ನೋವೆಟಿವ್‌ ಶಾಲೆಗಳಿಗೆ ದಂಡ ವಿಧಿಸಲಾಗಿದೆ ಎಂದರು.

ಆರ್‌ಟಿಇ ಶುಲ್ಕ ಒಂದೂವರೆ ತಿಂಗಳಲ್ಲಿ ಪಾವತಿ: ಕಳೆದ ಎರಡೂವರೆ ವರ್ಷಗಳಲ್ಲಿ ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಅಡಿ 2024-25ನೇ ಸಾಲಿನಲ್ಲಿ 3,413 ಹಾಗೂ 2025-26ನೇ ಸಾಲಿನಲ್ಲಿ 2,509 ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ. ಪೋಷಕರು ವಾಸಿಸುವ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಇಲ್ಲದೇ ಇದ್ದಾಗ ಅಥವಾ ಸೀಟು ಸಿಗದೇ ಇದ್ದಾಗ ಆರ್‌ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಮಕ್ಕಳ ಸೇರ್ಪಡೆ ಸಂಖ್ಯೆ ಕಡಿಮೆಯಾಗಿದೆ ಎಂದರು. ಶಾಲೆಗಳು ಮಕ್ಕಳ ಪ್ರವೇಶಾತಿ ವಿವರಗಳನ್ನು ಸಲ್ಲಿಸಿದ ನಂತರ ಆರ್‌ಟಿಇ ಅಡಿ ಶುಲ್ಕ ಪಾವತಿ ಇರುವ 327 ಶಾಲೆಗಳಿಗೆ ಒಂದೂವರೆ ತಿಂಗಳಲ್ಲಿ ಶುಲ್ಕ ಪಾವತಿ ಮಾಡಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ?

‘ಯಾವ ದೇವರಿಗೆ ಪೂಜೆ ಮಾಡಿಸಿಕೊಂಡು ಬಂದಿದ್ದೀರಿ ನಮಗೂ ಸ್ವಲ್ಪ ಹೇಳಿ. ನಾವೂ ಅಲ್ಲೇ ಹೋಗಿ ಪೂಜೆ ಮಾಡಿಸಿಕೊಂಡು ಬರ್ತೇವೆ..!’ ಇದು ಅನುದಾನಿತ ಶಿಕ್ಷಕರ ಬಡ್ತಿ ಸೇರಿ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸುವ ವೇಳೆ ಸದಸ್ಯರೆಲ್ಲರೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಸದಸ್ಯ ಸಿ.ಟಿ.ರವಿ ಸಚಿವರನ್ನು ಕೇಳಿದ ಬಗೆ. ಅನುದಾನಿತ ಶಿಕ್ಷಕರ ಸಮಸ್ಯೆಗಳ ಕುರಿತು ಭೋಜೇಗೌಡ, ಪುಟ್ಟಣ್ಣ, ಸಂಕನೂರು ಸೇರಿ ಹಲವು ಸದಸ್ಯರು ಸದನದ ಗಮನಕ್ಕೆ ತಂದರು. ಜತೆಗೆ ಮಧು ಬಂಗಾರಪ್ಪ ತೆಗೆದುಕೊಂಡು ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆಗ ಮಧ್ಯಪ್ರವೇಶಿಸಿದ ಸಿ.ಟಿ.ರವಿ, ಇವತ್ತು ಯಾವ ದೇವರಿಗೆ ಪೂಜೆ ಮಾಡಿಸಿಕೊಂಡು ಬಂದಿದ್ದು, ನಿಮ್ಮನ್ನು ಇಷ್ಟೊಂದು ಹೊಗಳ್ತಾ ಇದ್ದಾರೆ. ಏನಾದರೂ ಮ್ಯಾಚ್‌ ಫಿಕ್ಸಿಂಗ್‌ ಆಗಿದೆಯಾ? ಎಂದರು. ಇನ್ನು ಸಭಾಪತಿ ಸ್ಥಾನದಲ್ಲಿದ್ದ ಕೆ.ಪ್ರಾಣೇಶ ಅವರು, ಮಧು ಬಂಗಾರಪ್ಪ ಅವರು ಕುಳಿತ ಆಸನದ ವಾಸ್ತು ಚೆನ್ನಾಗಿರಬಹುದು. ಅಲ್ಲೇ ಕುಳಿತಂದಿನಿಂದಲೂ ಅವರ ಮೇಲೆ ಆರೋಪಗಳು ಬರುತ್ತಿಲ್ಲ ಎಂದು ಕಿಚಾಯಿಸಿದರು. ಅದಕ್ಕೆ ಮಧು ಬಂಗಾರಪ್ಪ, ಇಲ್ಲಿಗೆ ಬರುವ ಮುನ್ನವೇ ಯಾರ್ಯಾರು ಪ್ರಶ್ನೆ ಕೇಳಿದ್ದರೋ ಆ ಸದಸ್ಯರೊಂದಿಗೆ ಸಭೆ ನಡೆಸಿ, ಇಲಾಖೆ ಕೈಗೊಂಡ ಕ್ರಮದ ಬಗ್ಗೆ ವಿವರಿಸಿದ್ದೆ ಅಷ್ಟೇ ಸಾರ್‌, ನಾನು ವಾಸ್ತು ನಂಬುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಜತೆಗೆ ನಾ ಯಾವ ದೇವರಿಗೂ ಪೂಜೆ ಮಾಡಿಲ್ಲ. ಆದರೆ ಈ ಇಲಾಖೆಗೆ ಬಂದ ಮೇಲೆ ಮಕ್ಕಳನ್ನೇ ದೇವರೆಂದು ಭಾವಿಸಿ ಕೆಲಸ ಮಾಡುತ್ತಿದ್ದೇನಷ್ಟೇ ಎಂದು ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದರು.