Asianet Suvarna News Asianet Suvarna News

Chikkamagaluru floods: ವರುಣನ ಆರ್ಭಟ: ಕಾಫಿಯ ನಾಡು ತತ್ತರ; ಜಮೀನುಗಳೆಲ್ಲ ಜಲಾವೃತ!

ಕಳೆದ ಒಂದು ವಾರದಿಂದ ಮಲೆನಾಡಿನಲ್ಲಿ ಬಿಡುವಿಲ್ಲದೆ ಸುರಿಯುತ್ತಿರುವ ವರುಣನ ಆರ್ಭಟ ಭಾನುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಭಾರಿ ಮಳೆಯಿಂದಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯ ಮಟ್ಟಮೀರಿ ಹರಿಯುತ್ತಿರುವ ಪರಿಣಾಮ ಆಸುಪಾಸಿನ ತಗ್ಗಿನ ಪ್ರದೇಶಗಳು, ಹೊಲ, ಗದ್ದೆ, ತೋಟ, ರಸ್ತೆಗಳು ಜಲಾವೃತವಾಗಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

Karnataka monsoon heavy rain in chikkamagaluru floods rav
Author
First Published Jul 24, 2023, 7:58 AM IST

ಚಿಕ್ಕಮಗಳೂರು (ಜು.24) ಕಳೆದ ಒಂದು ವಾರದಿಂದ ಮಲೆನಾಡಿನಲ್ಲಿ ಬಿಡುವಿಲ್ಲದೆ ಸುರಿಯುತ್ತಿರುವ ವರುಣನ ಆರ್ಭಟ ಭಾನುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಭಾರಿ ಮಳೆಯಿಂದಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯ ಮಟ್ಟಮೀರಿ ಹರಿಯುತ್ತಿರುವ ಪರಿಣಾಮ ಆಸುಪಾಸಿನ ತಗ್ಗಿನ ಪ್ರದೇಶಗಳು, ಹೊಲ, ಗದ್ದೆ, ತೋಟ, ರಸ್ತೆಗಳು ಜಲಾವೃತವಾಗಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಕಳಸ- ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ್‌ ಸೇತುವೆ ಮುಳುಗಡೆಯಾಗಿದೆ. ಶೃಂಗೇರಿ ದೇಗುಲದ ಕಪ್ಪೆಶಂಕರ ದೇವಾಲಯ ಮುಳುಗಿದ್ದು, ಇಲ್ಲಿನ ಭೋಜನ ಶಾಲೆಗೆ ನೀರು ನುಗ್ಗಿದೆ. ಶೃಂಗೇರಿ- ಮಂಗಳೂರು ರಸ್ತೆಯಲ್ಲಿರುವ ನೆಮ್ಮಾರ್‌ ಬಳಿಯ ಕುರದಮನೆ ಬಳಿ ರಸ್ತೆ ಜಲಾವೃತವಾಗಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.

ಜಿಲ್ಲೆಯ ಮಲೆನಾಡಿನ 6 ತಾಲೂಕುಗಳಲ್ಲಿ ದಿನೇ ದಿನೇ ಮಳೆಯ ತೀವ್ರತೆ ಹೆಚ್ಚಾಗಿದೆ. ಅದೇ ಮಟ್ಟದಲ್ಲಿ ಬಲವಾಗಿ ಗಾಳಿ ಬೀಸುತ್ತಿದೆ. ಒಂದೆಡೆ ಮಳೆಯ, ಇನ್ನೊಂದೆಡೆ ಅಲ್ಲಲ್ಲಿ ಮರಗಳು ಬೀಳುತ್ತಿರುವುದರಿಂದ ಜನರು ಭಯಭೀತರಾಗಿ ಜೀವನ ನಡೆಸುತ್ತಿದ್ದಾರೆ.

Karnataka rains: ಮಲೆನಾಡು, ಕೊಡಗು, ಕರಾವಳಿ ಭಾರೀ ಮಳೆ; 9 ಜಿಲ್ಲೆಗೆ ಪ್ರವಾಹ ಭೀತಿ!

ಮೂಡಿಗೆರೆ ಪಟ್ಟಣ ಸೇರಿದಂತೆ ಕೊಟ್ಟಿಗೆಹಾರ, ಜಾವಳಿ, ಗೋಣಿಬೀಡು, ದಾರದಹಳ್ಳಿ ಸುತ್ತಮುತ್ತ ನಿರಂತರವಾಗಿ ಮಳೆ ಬೀಳುತ್ತಿದ್ದು, ಜನರು ಮನೆಯಿಂದ ಹೊರ ಹೋಗದಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಗಾಳಿ ಬೀಸುತ್ತಿರುವುದರಿಂದ ಕೆಲವೆಡೆ ಹಾನಿ ಸಂಭವಿಸಿದೆ. ಇಲ್ಲಿ ಹುಟ್ಟಿಹರಿಯುವ ಹೇಮಾವತಿ ನದಿ ಅಪಾಯಮಟ್ಟಮೀರಿ ಹರಿಯುತ್ತಿದ್ದು, ನದಿಯ ಆಸುಪಾಸಿನಲ್ಲಿರುವ ಗದ್ದೆಗಳು ಜಲಾವೃತವಾಗಿವೆ.

ಕಳಸ ತಾಲೂಕಿನಲ್ಲೂ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಈ ಪ್ರದೇಶದಲ್ಲಿ ಭಾರಿ ಮಳೆ ಬರುತ್ತಿರುವುದರಿಂದ ಭದ್ರಾ ನದಿ ತುಂಬಿ ಹರಿಯುತ್ತಿದೆ. ಕಳಸ- ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹಬ್ಬಾಳ್‌ ಸೇತುವೆ ಶನಿವಾರ ರಾತ್ರಿಯೇ ಮುಳುಗಡೆಯಾಗಿದೆ. ಅದ್ದರಿಂದ ಹೊರನಾಡಿಗೆ ಹೋಗುವ ವಾಹನಗಳು ಬಾಳೆಹೊನ್ನೂರು- ಹಳುವಳ್ಳಿ ಮಾರ್ಗವಾಗಿ ಸಂಚರಿಸುತ್ತಿವೆ.

ಹಳುವಳ್ಳಿಯಿಂದ ಹೊರನಾಡಿಗೆ ಸುಮಾರು 13 ಕಿ.ಮೀ. ದೂರವಿದ್ದು, ಈ ರಸ್ತೆ ಕಿರಿದಾಗಿದ್ದರಿಂದ ಭಾನುವಾರ ದಾರಿಯ ಉದ್ದಕ್ಕೂ ಗಂಟೆಗಟ್ಟಲೇ ವಾಹನಗಳು ಟ್ರಾಫಿಕ್‌ ಜಾಮ್‌ನಿಂದ ನಿಂತಿದ್ದವು. ಕಿರಿದಾದ ಈ ರಸ್ತೆಯಲ್ಲಿ ಲಾಂಗ್‌ ಬಸ್‌ಗಳು ಬಿಟ್ಟಿದ್ದರಿಂದ ತುಂಬಾ ತೊಂದರೆಯಾಗಿತ್ತು.

ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಶ್ರೀ ಕಳಸೇಶ್ವರ ದೇಗುಲದ ಮೇಲ್ಭಾಗದಲ್ಲಿ ಭಾರಿ ಮಳೆಯಿಂದಾಗಿ ದೇವಾಲಯದ ಒಳ ಭಾಗದಿಂದ ರಸ್ತೆಗೆ ಝರಿಯಂತೆ ನೀರು ಹರಿದು ಬರುತ್ತಿತ್ತು.

ಶೃಂಗೇರಿಯಲ್ಲಿ ಪ್ರವಾಹ:

ಜಿಲ್ಲೆಯಲ್ಲಿ ಭಾರಿ ಮಳೆಯಾಗಿ ತುಂಗಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದ್ದಂತೆ ಶೃಂಗೇರಿ ಪಟ್ಟಣ ಸೇರಿದಂತೆ ನದಿಯ ತೀರ ಪ್ರದೇಶಗಳು ಜಲಾವೃತವಾಗಲಿವೆ.

ಭಾರೀ ಮಳೆಗೆ ತುಂಗಾ ನದಿ ಅಪಾಯ ಮಟ್ಟಮೀರಿ ಹರಿಯುತ್ತಿರುವುದರಿಂದ ನದಿ ಪಾತ್ರದಲ್ಲಿರುವ ಶೃಂಗೇರಿ- ಮಂಗಳೂರು ರಸ್ತೆಯಲ್ಲಿ ನೆಮ್ಮಾರ್‌ನ ಕುರದಮನೆ ಬಳಿ ರಸ್ತೆ ಜಲಾವ್ರತವಾಗಿದೆ. ನೆಮ್ಮಾರ್‌-ಹೊಳೆಗದ್ದೆ ಸಂಪರ್ಕದ ತೂಗು ಸೇತುವೆ ಅರ್ಧದಷ್ಟುಮುಳುಗಡೆಯಾಗಿದೆ. ಹಾಗಾಗಿ ಹೊಳೆಹದ್ದು, ಎಡದಳ್ಳಿ, ಹತೂರು, ಸುಂಕದಮಕ್ಕಿ ಗ್ರಾಮಗಳ ಜನರಿಗೆ ತೊಂದರೆಯಾಗಿದೆ.

ಶೃಂಗೇರಿ ಪೇಟೆಯ ವಿದ್ಯಾರಣ್ಯಪುರ- ದುರ್ಗ ದೇವಸ್ಥಾನದ ರಸ್ತೆಯ ಸಮೀಪಕ್ಕೆ ತುಂಗಾ ನದಿಯ ನೀರು ಬಂದಿದೆ. ಭಾರತೀ ಬೀದಿ- ಕೆವಿಆರ್‌ ವೃತ್ತದ ಬೈಪಾಸ್‌ ರಸ್ತೆ ಜಲಾವ್ರತ, ಕೆವಿಆರ್‌ ವೃತ್ತ- ಮೆಣಸೆ ವೃತ್ತದವರೆಗಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗಾಂಧಿ ಮೈದಾನದಲ್ಲಿ ನೀರು ನಿಂತಿದೆ. ಕುರುಬಗೇರಿಯ ಅಂಗಡಿಗಳಿಗೆ ನೀರು ನುಗ್ಗಿದೆ. ಶೃಂಗೇರಿ ದೇಗುಲದ ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದ್ದು, ನರಸಿಂಹವನಕ್ಕೆ ತೆರಳುವ ಮಾರ್ಗದಲ್ಲಿ ನೀರು ನಿಂತಿತ್ತು. ಇಲ್ಲಿನ ಭೋಜನ ಶಾಲೆಗೆ ನೀರು ನುಗ್ಗಿದೆ.

ಕೊಪ್ಪ ತಾಲೂಕಿನ ಕುಂಚೂರು ಗ್ರಾಮದ ನಾಗೇಶ್‌ ಎಂಬುವರಿಗೆ ಸೇರಿದ ಅಡಿಕೆ ತೋಟದಲ್ಲಿ ಭಾರಿ ಗಾತ್ರದ ಮರ ಬಿದ್ದ ಪರಿಣಾಮ ಸುಮಾರು 50ಕ್ಕೂ ಹೆಚ್ಚು ಅಡಿಕೆ ಗಿಡಗಳಿಗೆ ಹಾನಿ ಸಂಭವಿಸಿದೆ.

ಎನ್‌.ಆರ್‌. ಪುರ ತಾಲೂಕುಗಳಲ್ಲೂ ಮಳೆಯ ತೀವ್ರತೆ ಹೆಚ್ಚಾಗಿದೆ. ಬಿಡುವಿಲ್ಲದೆ ಮಳೆ ಸುರಿಯತ್ತಿರುವ ಪರಿಣಾಮ ತುಂಗಾ, ಭದ್ರಾ ನದಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗುತ್ತಿದೆ. ಹಲವೆಡೆ ಮರಗಳು ಮನೆ ಮತ್ತು ರಸ್ತೆಗಳ ಮೇಲೆ ಬಿದ್ದು ಹಾನಿ ಸಂಭವಿಸಿದೆ.

ಚಿಕ್ಕಮಗಳೂರಿನಲ್ಲೂ ಭಾನುವಾರ ಮಳೆಯ ಆರ್ಭಟ ಜೋರಾಗಿತ್ತು. ಬೆಳಿಗ್ಗೆ ಕೆಲ ಹೊತ್ತು ಬಿಡುವು ನೀಡಿತಾದರೂ ನಂತರದಲ್ಲಿ ಧಾರಾಕಾರವಾಗಿ ಸುರಿಯಿತು. ಜನರು ಮನೆಯಿಂದ ಹೊರಗೆ ಹೋಗಲಾರದಷ್ಟುಮಳೆ ತೀವ್ರವಾಗಿತ್ತು. ಬಯಲುಸೀಮೆಯ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ ಬಿಡುವಿಲ್ಲದೆ ಮಳೆ ಬೀಳುತ್ತಿರುವುದರಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಒಟ್ಟಾರೆ ವರುಣನ ಆರ್ಭಟಕ್ಕೆ ಮಳೆನಾಡು ತತ್ತರಿಸುತ್ತಿದೆ.

ಸಚಿವರ ಭೇಟಿ:

ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾಜ್‌ರ್‍ ಅವರು ಶೃಂಗೇರಿ ಕ್ಷೇತ್ರದಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆಗ್ಗಾರು ಕೂಡಿಗೆಯಲ್ಲಿ ಸಂಭವಿಸಿರುವ ಭೂ ಕುಸಿತ ಹಾಗೂ ಮಳೆ ಹಾನಿಯನ್ನು ವೀಕ್ಷಿಸಿದರು. ಬಳಿಕ ಕೊಗ್ರೆ ಸೇತುವೆ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ, ಗುಡ್ಡೆತೋಟದಲ್ಲಿ ಭಾರೀ ಮಳೆಗೆ 17 ಮನೆಗಳನ್ನು ಕುಸಿಯುವ ಸಾಧ್ಯತೆ ಇದ್ದು, ಇಲ್ಲಿಗೂ ಭೇಟಿ ನೀಡಿ ಪರಿಶೀಲಿಸಿದ ಸಚಿವರು ನಂತರ ಬಸರೀಕಟ್ಟೆ, ಹುತ್ತಿನಗದ್ದೆಗಳಿಗೆ ತೆರಳಿ ಮಳೆ ಹಾನಿಯ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್‌, ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಹಾಜರಿದ್ದರು.

ಜಿಲ್ಲೆಯ ವಿವಿಧೆಡೆ ಬಿದ್ದ ಮಳೆ

ಮಳೆ ಕೊರತೆ ನಡುವೆಯೂ ಜಲಾಶಯ ಭರ್ತಿ, ಈ ವರ್ಷ ತುಂಬಿದ ರಾಜ್ಯದ ಮೊಟ್ಟ ಮೊದಲ ಡ್ಯಾಂಗೆ ಬಾಗಿನ ಅರ್ಪಣೆ

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದಿರುವ ಮಳೆಯ ವಿವರ.

ಚಿಕ್ಕಮಗಳೂರು 34.8 ಮಿ.ಮೀ., ಅಂಬಳೆ 18.2, ಆಲ್ದೂರು 58.0, ಸಂಗಮೇಶ್ವರಪೇಟೆ 63.9, ಲಕ್ಯಾ 21.8, ಆವತಿ 75.3, ಜಾಗರ 41.4, ವಸ್ತಾರೆ 68.6, ಕಡೂರು 5.4, ಬೀರೂರು 8.2, ಕೊಪ್ಪ 76.6, ಹರಿಹರಪುರ 84.6, ಮೇಗುಂದ 89.2, ಮೂಡಿಗೆರೆ 70.8, ಬಣಕಲ್‌ 66.6, ಗೋಣಿಬೀಡು 65.7, ಕಳಸ 130.6, ಬಾಳೂರು 84.1, ನರಸಿಂಹರಾಜಪುರ 37.4, ಬಾಳೆಹೊನ್ನೂರು 72.0, ಶೃಂಗೇರಿ 87.8, ಕಿಗ್ಗಾ 159.2, ತರೀಕೆರೆ 23.9, ಅಮೃತಾಪುರ 26.1, ಲಕ್ಕವಳ್ಳಿ 22.7, ಅಜ್ಜಂಪುರ 13.5, ಶಿವನಿಯಲ್ಲಿ 15.6 ಮಿ.ಮೀ. ಮಳೆಯಾಗಿದೆ.

Follow Us:
Download App:
  • android
  • ios