Karnataka rains: ಮಲೆನಾಡು, ಕೊಡಗು, ಕರಾವಳಿ ಭಾರೀ ಮಳೆ; 9 ಜಿಲ್ಲೆಗೆ ಪ್ರವಾಹ ಭೀತಿ!
ರಾಜ್ಯದ ಮೂರನೇ ಒಂದು ಭಾಗದಲ್ಲಿ ಮುಂಗಾರು ಚುರುಕುಗೊಂಡಿದೆ. ಕಳೆದ ಒಂದೆರಡು ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ, ಭೀಮಾ ಸೇರಿ ಪ್ರಮುಖ ನದಿಗಳ ನೀರಿನಮಟ್ಟದಲ್ಲಿ ದಿಢೀರ್ ಏರಿಕೆಯಾಗಿ ಕರಾವಳಿ, ಮಲೆನಾಡು ಸೇರಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಕಾಣಿಸಿಕೊಂಡಿದೆ. ಮಳೆ ಸಂಬಂಧಿ ಅನಾಹುತಕ್ಕೆ ಕಲಬುರಗಿಯಲ್ಲಿ ಇಬ್ಬರು ಸೇರಿ ಮೂವರು ಸಾವಿಗೀಡಾಗಿದ್ದಾರೆ.
ಬೆಂಗಳೂರು (ಜು.24)) : ತಡವಾಗಿಯಾದರೂ ರಾಜ್ಯದ ಮೂರನೇ ಒಂದು ಭಾಗದಲ್ಲಿ ಮುಂಗಾರು ಚುರುಕುಗೊಂಡಿದೆ. ಕಳೆದ ಒಂದೆರಡು ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ, ಭೀಮಾ ಸೇರಿ ಪ್ರಮುಖ ನದಿಗಳ ನೀರಿನಮಟ್ಟದಲ್ಲಿ ದಿಢೀರ್ ಏರಿಕೆಯಾಗಿ ಕರಾವಳಿ, ಮಲೆನಾಡು ಸೇರಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಕಾಣಿಸಿಕೊಂಡಿದೆ. ಮಳೆ ಸಂಬಂಧಿ ಅನಾಹುತಕ್ಕೆ ಕಲಬುರಗಿಯಲ್ಲಿ ಇಬ್ಬರು ಸೇರಿ ಮೂವರು ಸಾವಿಗೀಡಾಗಿದ್ದಾರೆ.
ಕೃಷ್ಣೆ, ಭೀಮಾ, ವರದಾ, ದೂದ್‌ಗಂಗಾ, ಮಲಪ್ರಭಾ, ತುಂಗಾ, ಶರಾವತಿ, ನೇತ್ರಾವತಿ, ಕುಮಾರಧಾರಾ, ಕಾಳಿ, ಕಾವೇರಿ, ಲಕ್ಷ್ಮಣ ತೀರ್ಥ ಸೇರಿ ರಾಜ್ಯದಲ್ಲಿ ಹಲವು ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಕೊಡಗು, ಹಾವೇರಿ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಮತ್ತು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಶಾಲೆಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಸೋಮವಾರ ರಜೆ ಘೋಷಿಸಲಾಗಿದೆ. ಬೆಳಗಾವಿ ಜಿಲ್ಲೆಯ ಮೂರು ತಾಲೂಕು, ದಾವಣಗೆರೆ ಜಿಲ್ಲೆಯ ಮೂರು ತಾಲೂಕುಗಳಿಗೂ ರಜೆ ಘೋಷಿಸಲಾಗಿದೆ.
ಚಿಕ್ಕಮಗಳೂರಲ್ಲಿ ಮಳೆ ಆರ್ಭಟ: ರಸ್ತೆ ಸೇತುವೆಗಳ ಸಂಪರ್ಕ ಕಡಿತ, ಪ್ರವಾಹದ ಭೀತಿ
12ಕ್ಕೂ ಹೆಚ್ಚು ಜಿಲ್ಲೆಗಳು ತತ್ತರ: ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಗದಗ, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗಿದೆ. ಕೊಡಗಿನಲ್ಲಿ ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿ ನೀರಿನ ಮಟ್ಟಏರಿಕೆಯಾಗಿ ಹಾರಂಗಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ದಕ್ಷಿಣ ಕನ್ನಡದಲ್ಲಿ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟಮುಳುಗಡೆಯಾಗಿದ್ದು, ಭಕ್ತರಿಗೆ ನದಿಗಿಳಿಯದಂತೆ ನಿರ್ಬಂಧಿಸಲಾಗಿದೆ. ಧರ್ಮಸ್ಥಳದಲ್ಲೂ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿಗಿಳಿಯದಂತೆ ಭಕ್ತರಿಗೆ ಸೂಚನೆ ನೀಡಲಾಗಿದೆ.
ಸಂಪರ್ಕ ಕಡಿತ: ಪ್ರವಾಹದಿಂದಾಗಿ ದಕ್ಷಿಣ ಕನ್ನಡದಲ್ಲಿ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ, ಕೊಡಗಿನಲ್ಲಿ ಭಾಗಮಂಡಲ-ನಾಪೋಕ್ಲು, ಚಿಕ್ಕಮಗಳೂರಿನಲ್ಲಿ ಹೆಬ್ಬಾಳ್ ಸೇತುವೆ ಮುಳುಗಡೆಯಾಗಿ ಕಳಸ-ಹೊರನಾಡು, ಶೃಂಗೇರಿ-ಮಂಗಳೂರು ರಸ್ತೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಕ್ಯಾಸಲ್‌ರಾಕ್ ಹಾಗೂ ಅನಮೋಡ ನಡುವೆ ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸವಾರರು ಪರದಾಡುವಂತಾಯಿತು.
ಅದೇ ರೀತಿ, ಮಹಾರಾಷ್ಟ್ರ ಹಾಗೂ ಬೆಳಗಾವಿಯ ಪಶ್ಚಿಮಘಟ್ಟಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ದೂದ್‌ಗಂಗಾ, ಮಲಪ್ರಭಾ, ಘಟಪ್ರಭಾ, ಕೃಷ್ಣೆ ಸೇರಿದಂತೆ ಹಲವು ನದಿಗಳ ನೀರಿನಮಟ್ಟಏರಿಕೆಯಾಗಿದ್ದು, ಖಾನಾಪುರ ತಾಲೂಕಿನ ಬೈಲೂರು ಗ್ರಾಮದ ರಸ್ತೆಯೊಂದು ಕೊಚ್ಚಿ ಹೋಗಿದೆ. ಜತೆಗೆ ಮಲಪ್ರಭಾ ನದಿ ಪ್ರವಾಹದಿಂದಾಗಿ ಹೆಮ್ಮಡಗಾ-ಖಾನಾಪುರ ಸೇತುವೆ ಮುಳುಗಿ ಪಾಸ್ಟೋಲಿ, ಗಸ್ತೋಲಿ, ಜಾಮಗಾಂವ್ ಸೇರಿ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ವಾರದ ಹಿಂದೆ ಮುಳುಗಡೆಯಾಗಿದ್ದ ಜಿಲ್ಲೆಯ 14 ಸೇತುವೆಗಳು ಇನ್ನೂ ಜಲಾವೃತ ಸ್ಥಿತಿಯಲ್ಲೇ ಇದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹಾವೇರಿಯಲ್ಲೂ ವರದಾ ನದಿ ಪ್ರವಾಹದಿಂದಾಗಿ ಕೂಡಲ, ನಾಗನೂರು ಬ್ರಿಜ್ ಕಂ ಬ್ಯಾರೇಜ್ ಮುಳುಗಡೆಯಾಗಿ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಭಾರೀ ಹಾನಿ: ಭಾರೀ ಗಾಳಿ ಸಹಿತ ಮಳೆಗೆ ಉತ್ತರ ಕನ್ನಡದಲ್ಲಿ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದು, 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದರೆ, ಉಡುಪಿಯಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಇನ್ನು ಹಾವೇರಿಯಲ್ಲಿ 24ಕ್ಕೂ ಹೆಚ್ಚು ಹಾಗೂ ದಕ್ಷಿಣ ಕನ್ನಡದಲ್ಲೂ 21ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿದೆ. ಬೆಳಗಾವಿ, ಗದಗ, ಧಾರವಾಡದಲ್ಲೂ ಅನೇಕ ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರುಪಾಯಿ ನಷ್ಟಸಂಭವಿಸಿದೆ.
ಜಲಾವೃತ: ಉತ್ತರ ಕನ್ನಡ ಜಿಲ್ಲೆ ಕಾರವಾರದ ಹೊರವಲಯದ ಅಸ್ನೋಟಿಯ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಈ ಭಾಗದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಈ ಭಾಗದಲ್ಲಿ ಹಳ್ಳಗಳು ತುಂಬಿ ಇಲ್ಲಿ ನೂರಾರು ಎಕರೆ ಕೃಷಿಭೂಮಿ ಜಲಾವೃತವಾಗಿದ್ದರೆ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ವರದಾ ನದಿ ಪ್ರವಾಹದಿಂದಾಗಿ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ನೀರು ನಿಂತಿದೆ. ಹಾವೇರಿಯಲ್ಲೂ ವರದಾ ನದಿ ಅಬ್ಬರಕ್ಕೆ ನದಿ ತೀರದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮೂವರು ಬಲಿ: ಮಳೆ ಸಂಬಂಧಿ ಅನಾಹುತಕ್ಕೆ ರಾಜ್ಯದಲ್ಲಿ ಮೂವರು ಬಲಿಯಾಗಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸುತ್ತ ತೋಡಲಾಗಿದ್ದ ಗುಂಡಿಯಲ್ಲಿ ನಿಂತಿದ್ದ ಮಳೆ ನೀರಲ್ಲಿ ಮುಳುಗಿ ಕಲಬುರಗಿಯ ದುಬೈ ಕಾಲೊನಿಯಲ್ಲಿ ಅಭಿ (11) ಮತ್ತು ಅಜಯ್ (12), ಹಾವೇರಿಯ ಧರ್ಮಾನದಿಯಲ್ಲಿ ಕಾಲು ಜಾರಿ ನದಿಗೆ ಬಿದ್ದು ಯಮನಪ್ಪ ಬಂಡಿವಡ್ಡರ(24) ನೀರುಪಾಲಾಗಿದ್ದಾರೆ.
3 ಬಲಿ, ಅಪಾರ ನಷ್ಟ
- ಕಲಬುರಗಿ ಜಿಲ್ಲೆಯಲ್ಲಿ ಇಬ್ಬರು, ಹಾವೇರಿಯಲ್ಲಿ ಒಬ್ಬರು ಮಳೆ ಸಂಬಂಧಿ ಅನಾಹುತದಿಂದ ಸಾವು
- ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾವೇರಿ, ಬೆಳಗಾವಿ, ಗದಗದಲ್ಲಿ ನೂರಾರು ಮನೆಗೆ ಹಾನಿ
- ಕಾವೇರಿ, ಕೃಷ್ಣೆ, ಭೀಮಾ, ವರದಾ, ದೂದ್‌ಗಂಗಾ, ಮಲಪ್ರಭಾ, ತುಂಗಾ, ಶರಾವತಿ, ನೇತ್ರಾವತಿ, ಕುಮಾರಧಾರಾ, ಕಾಳಿ, ಲಕ್ಷ್ಮಣ ತೀರ್ಥ ನದಿಗಳ ಮಟ್ಟದಿಢೀರ್ ಏರಿಕೆ
- ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಗದಗ, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಭಾರಿ ಮಳೆ
- ಕೊಡಗಿನ ಭಾಗಮಂಡಲ, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟಮುಳುಗಡೆ, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟಮುಳುಗಡೆ ಭೀತಿ
ಭಾರೀ ಮಳೆಯಿಂದಾಗಿ ಬೆಳಗಾವಿ ಸಮೀಪದ ಹಲಗಾ ಗ್ರಾಮದ ಬಳಿ ಬಳ್ಳಾರಿ ನಾಲಾ ತುಂಬಿ ಹರಿದು ಊರು, ಗದ್ದೆಗಳಿಗೆ ನೀರು ನುಗ್ಗಿದೆ
ಮಳೆ ಕೊರತೆ ನಡುವೆಯೂ ಜಲಾಶಯ ಭರ್ತಿ, ಈ ವರ್ಷ ತುಂಬಿದ ರಾಜ್ಯದ ಮೊಟ್ಟ ಮೊದಲ ಡ್ಯಾಂಗೆ ಬಾಗಿನ ಅರ್ಪಣೆ
ಉತ್ತರ ಭಾರತದಲ್ಲೂ ಭಾರಿ ಮಳೆ: ದಿಲ್ಲೀಲಿ ಮತ್ತೆ ನೆರೆ ಆತಂಕ
ನವದೆಹಲಿ: ಕಳೆದ ಕೆಲ ದಿನಗಳಿಂದ ದೇಶದ ಉತ್ತರ, ಪೂರ್ವದ ರಾಜ್ಯಗಳಲ್ಲಿ ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಭಾನುವಾರವೂ ಮುಂದುವರೆದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗುಜರಾತ್, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆಯಾಗಿದ್ದು, ಮಹಾರಾಷ್ಟ್ರದಲ್ಲಿ ಮಳೆಗೆ ಮೂವರು ಹಾಗೂ ರಾಜಸ್ಥಾನದಲ್ಲಿ ಸಿಡಿಲಿನ ಬಡಿತಕ್ಕೆ ಇಬ್ಬರು ಸಾವಿಗೀಡಾಗಿದ್ದಾರೆ. ದೆಹಲಿಯಲ್ಲಿ ಯಮುನಾ ನದಿ ಮಟ್ಟಮತ್ತೆ ಏರಿಕೆಯಾಗಿದ್ದು, ನಗರಕ್ಕೆ ಪ್ರವಾಹದ ಆತಂಕ ಎದುರಾಗಿದೆ. ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣ ಜಲಾವೃತವಾಗಿದೆ.