ರಾಜ್ಯದ ಹಲವು ಸರ್ಕಾರಿ ಶಾಲೆಗಳಲ್ಲಿ ಎಸ್‌ಡಿಎಂಸಿಗಳ ಏಕಪಕ್ಷೀಯ ನಿರ್ಧಾರದಿಂದ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ನೀಡುವ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಅಜೀಂ ಪ್ರೇಮ್‌ ಜೀ ಫೌಂಡೇಷನ್ ಆರೋಪಿಸಿದೆ.

ಬೆಂಗಳೂರು (ಜು.8): ರಾಜ್ಯದ ಹಲವು ಸರ್ಕಾರಿ ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು(ಎಸ್‌ಡಿಎಂಸಿ) ಕೈಗೊಂಡಿರುವ ಏಕಪಕ್ಷೀಯ ನಿರ್ಧಾರದಿಂದ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ನೀಡುವ ಯೋಜನೆ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ ಎಂದು ಅಜೀಂ ಪ್ರೇಮ್‌ ಜೀ ಫೌಂಡೇಷನ್ ಆರೋಪಿಸಿದೆ.

ಕೆಲ ಶಾಲೆಗಳಲ್ಲಿ ಆರು ದಿನದ ಬದಲು ಮೂರು ದಿನ, ಇನ್ನು ಕೆಲವೆಡೆ ಎರಡು ದಿನ ಮಾತ್ರ ಮೊಟ್ಟೆ ನೀಡಲಾಗುತ್ತಿದೆ. ಉಳಿದ ದಿನಗಳಲ್ಲಿ ಎಲ್ಲ ಮಕ್ಕಳಿಗೂ ಬಾಳೆಹಣ್ಣುಗಳನ್ನೇ ನೀಡಲಾಗುತ್ತಿದೆ. ಈ ಯೋಜನೆಗಾಗಿ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ ₹1500 ಕೋಟಿ ಅನುದಾನ ಒದಗಿಸಿರುವ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನವರೇ(ಎಜಿಎಫ್‌) ರಾಜ್ಯಾದ್ಯಂತ ವಿವಿಧ ಶಾಲೆಗಳಿಗೆ ಭೇಟಿ ನೀಡಿ ನಡೆಸಿದ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ ಎಂದು ಫೌಂಡೇಷನ್ ಪ್ರಕಟಣೆ ತಿಳಿಸಿದೆ.

ಫೌಂಡೇಷನ್‌ ಸಿಬ್ಬಂದಿ ರಾಜ್ಯದ 762 ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ 568 ಶಾಲೆಗಳಲ್ಲಿ ಎಸ್‌ಡಿಎಂಸಿಯವರ ಅಮಮರ್ಪಕ ತೀರ್ಮಾನದಿಂದ ಮಕ್ಕಳಿಗೆ ಆರು ದಿನಗಳ ಬದಲು ಮೂರು, ಎರಡು ದಿನ ಮಾತ್ರ ಮೊಟ್ಟೆ ಸಿಗುತ್ತಿರುವುದು ಕಂಡುಬಂದಿದೆ. ಕೆಲ ಶಾಲೆಗಳಲ್ಲಿ ಪೋಷಕರ ಒಪ್ಪಿಗೆ ಪಡೆದೇ ಎಸ್‌ಡಿಎಂಸಿಯವರು ಸೋಮವಾರ, ಶನಿವಾರ ಮೊಟ್ಟೆ ವಿತರಿಸದೆ ಬಾಳೆ ಹಣ್ಣು ನೀಡುತ್ತಿದ್ದಾರೆ. ಆದರೆ, ಮಕ್ಕಳು ಮೊಟ್ಟೆಯನ್ನು ಇಷ್ಟಪಡುತ್ತಿದ್ದಾರೆ. ಇನ್ನು ಕೆಲವೆಡೆ ಮೂರು ದಿನ ಮೊಟ್ಟೆ, ಮೂರು ದಿನ ಬಾಳೆ ಹಣ್ಣು ನೀಡಲಾಗುತ್ತಿದೆ.

ತಿಳುವಳಿಕೆ ಪತ್ರ-ಶಿಸ್ತುಕ್ರಮದ ಎಚ್ಚರಿಕೆ

ಈ ಸಂಬಂಧ ಫೌಂಡೇಷನ್‌ ಶಿಕ್ಷಣ ಇಲಾಖೆಗೆ ವರದಿ ನೀಡಿದ್ದು, ಈ ವರದಿ ಆಧಾರದ ಮೇಲೆ ಇಲಾಖೆಯು ಎಸ್‌ಡಿಎಂಸಿಗಳಿಗೆ ಈ ರೀತಿ ತೀರ್ಮಾನಗಳನ್ನು ಸರಿಪಡಿಸಿಕೊಳ್ಳುವಂತೆ ತಿಳುವಳಿಕೆ ಪತ್ರ ಹೊರಡಿಸಿದೆ. ಅಲ್ಲದೆ, ಎಸ್‌ಡಿಎಂಸಿಗಳು ಇಂತಹ ತೀರ್ಮಾನವನ್ನು ಸ್ವಯಂ ಪ್ರೇರಿತವಾಗಿ ಕೈಗೊಳ್ಳಲು ಸಾಧ್ಯವಿಲ್ಲ. ಈ ಕಾರ್ಯಕ್ರಮ ಅನುಷ್ಠಾನದಲ್ಲಿ ಶಾಲೆ ಮುಖ್ಯೋಪಾಧ್ಯಾಯರು, ಇಲಾಖೆಯ ಕ್ಲಸ್ಟರ್‌ ಹಂತದ, ತಾಲೂಕು ಮತ್ತು ಜಿಲ್ಲಾ ಹಂತದ ಎಲ್ಲಾ ಮೇಲ್ವಿಚಾರಕರು ಇಂತಹ ಲೋಪಗಳನ್ನು ತಮ್ಮ ವ್ಯಾಪ್ತಿಯಲ್ಲಿ ಗಮನಿಸಿ ಸರಿಪಡಿಸದೆ ಇರುವುದು ಕರ್ತವ್ಯಲೋಪವಾಗಿದ್ದು, ಕಾರ್ಯಕ್ರಮದ ಹಿನ್ನಡೆಗೆ ಕಾರಣವಾಗಿದೆ. ಇಂತಹ ಲೋಪಗಳು ಮುಂದುವರೆದರೆ ಸಂಬಂಧಿಸಿದ ಮೇಲ್ವಿಚಾರಕರನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸುವುದಾಗಿ ಪಿಎಂ ಪೋಷಣ್‌ ಶಕ್ತಿ ನಿರ್ಮಾಣ್‌ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.