ಲಿಂಗರಾಜು ಕೋರಾ

ಬೆಂಗಳೂರು(ಜೂ.03): ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಅಗತ್ಯ ಮೆಡಿಕಲ್‌ ಆಕ್ಸಿಜನ್‌ ಉತ್ಪಾದಿಸಿ ಪೂರೈಸುತ್ತಿರುವ ಕೆಲ ಕಂಪನಿಗಳು ಕಳೆದ ಮೂರು ದಿನಗಳಿಂದ ದಿಢೀರ್‌ ಉತ್ಪಾದನೆ ಕಡಿಮೆ ಮಾಡಿದ್ದು, ಮತ್ತೆ ರಾಜ್ಯದಲ್ಲಿ ಆಕ್ಸಿಜನ್‌ ಕೊರತೆಯ ಆತಂಕ ಹುಟ್ಟುಹಾಕಿದೆ.

ರಾಜ್ಯದಲ್ಲಿ ಕೊರೋನಾ ಪ್ರಕರಣದಲ್ಲಿ ಕುಸಿತವಾಗಿದ್ದರೂ ಐಸಿಯು ಹಾಗೂ ಆಕ್ಸಿಜನ್‌ ಅವಲಂಬಿತ ಸೋಂಕಿತರ ಪ್ರಮಾಣ ಕಡಿಮೆಯಾಗಿಲ್ಲ. ಹೀಗಾಗಿ ಆಕ್ಸಿಜನ್‌ನ ಬೇಡಿಕೆ ಎಂದಿನಂತೆ ಇದೆ. ಆದರೆ, ಪೂರೈಕೆ ಕಡಿಮೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕೆಲ ದಿನಗಳಲ್ಲೇ ರಾಜ್ಯ, ಮತ್ತೆ ಆಕ್ಸಿಜನ್‌ ಕೊರತೆ ಸುಳಿಗೆ ಸಿಲುಕಲಿದೆ ಎಂದು ಎಚ್ಚರಿಸಿದ್ದಾರೆ ತಜ್ಞರು.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಜಿಂದಾಲ್‌ ಸೇರಿದಂತೆ ರಾಜ್ಯದ ಎಂಟು ಆಕ್ಸಿಜನ್‌ ಉತ್ಪಾದನಾ ಕಂಪನಿಗಳಿಂದ ಮೇ 29ರವರೆಗೂ 700 ಮೆಟ್ರಿಕ್‌ ಟನ್‌ಗೂ ಹೆಚ್ಚು ಆಕ್ಸಿಜನ್‌ ಪೂರೈಕೆಯಾಗುತ್ತಿತ್ತು. ಆದರೆ, ಈಗ ಅದು ಮೇ 30 ಹಾಗೂ 31ರಂದು 550 ಮೆಟ್ರಿಕ್‌ ಟನ್‌ಗಿಂತ ಕಡಿಮೆಯಾಗಿದೆ. ಜೂ.1ರಂದು 386 ಮೆಟ್ರಿಕ್‌ ಟನ್‌ಗೆ ಕುಸಿದಿದೆ. ಈ ಕಂಪನಿಗಳಿಂದ ನಿತ್ಯ 830 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಅನ್ನು ರಾಜ್ಯದ ಕೋವಿಡ್‌ ಆಸ್ಪತ್ರೆಗಳಿಗೆ ಪೂರೈಸಲು ಉತ್ಪಾದಿಸಿಕೊಡಬೇಕೆಂದು ಸರ್ಕಾರ ಹಂಚಿಕೆ ಮಾಡಿದ್ದರೂ ಕಳೆದ ಮೂರು ದಿನಗಳಿಂದ ಕೆಲ ಕಂಪನಿಗಳು ಉತ್ಪಾದನೆ ತೀವ್ರ ಕಡಿಮೆ ಮಾಡಿವೆ. ಇದರಿಂದ ನಿತ್ಯ 300ರಿಂದ 400 ಮೆಟ್ರಿಕ್‌ ಟನ್‌ನಷ್ಟುಕಡಿಮೆಯಾಗಿದೆ. ರಾಜ್ಯಕ್ಕೆ ಆಕ್ಸಿಜನ್‌ ಪೂರೈಸುವ ಎಂಟು ಕಂಪನಿಗಳ ಪೈಕಿ ಜೆಎಸ್‌ಡಬ್ಲ್ಯು ಇಂಡಸ್ಟ್ರೀಸ್‌ ಗ್ಯಾಸಸ್‌ ಸೇರಿ ಐದು ಕಂಪನಿಗಳೂ ಹಂಚಿಕೆಗಿಂತ ಕಡಿಮೆ ಪ್ರಮಾಣದಲ್ಲಿ ನೀಡುತ್ತಿವೆ.

ಅರ್ಧದಷ್ಟೂ ಪೂರೈಕೆಯಾಗ್ತಿಲ್ಲ:

ರಾಜ್ಯಕ್ಕೆ ಕೇಂದ್ರ ಸರ್ಕಾರ ನಿತ್ಯ ಹಂಚಿಕೆ ಮಾಡಿರುವ 1200 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಪೈಕಿ ರಾಜ್ಯದ ಕಂಪನಿಗಳಿಂದ 830 ಮೆ.ಟನ್‌, ಹೊರ ರಾಜ್ಯದ ಏಳು ಕಂಪನಿಗಳಿಂದ 676 ಮೆ.ಟನ್‌ ಪೂರೈಕೆಯಾಗಬೇಕು. ಆದರೆ, ಈಗಾಗಲೇ ಹಲವು ದಿನಗಳಿಂದ ಹೊರ ರಾಜ್ಯಗಳ ಏಳು ಕಂಪನಿಗಳಿಂದ ಆಕ್ಸಿಜನ್‌ ಪೂರೈಕೆ ಸ್ಥಗಿತಗೊಳಿಸಿದ್ದವು. ಈಗ ರಾಜ್ಯದ ಕಂಪನಿಗಳೂ ಉತ್ಪಾದನೆ ಕಡಿಮೆ ಮಾಡಿರುವುದರಿಂದ ಮೇ 30 ಮತ್ತು 31ರಂದು ಹಂಚಿಕೆ ಪ್ರಮಾಣದಲ್ಲಿ ಅರ್ಧಷ್ಟೂಆಕ್ಸಿಜನ್‌ ಪೂರೈಕೆಯಾಗುತ್ತಿಲ್ಲ. ಆಕ್ಸಿಜನ್‌ ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ.

ಜಪಾ​ನ್‌​ನಲ್ಲಿ 12-15 ವರ್ಷ​ದ ಮಕ್ಕ​ಳಿಗೆ ಫೈಝರ್‌ ಲಸಿಕೆ!

250 ಮೆ.ಟನ್‌ ಬಫರ್‌ ಸ್ಟಾಕ್‌:

ಸದ್ಯ ರಾಜ್ಯದಲ್ಲಿ ಸುಮಾರು 250 ಮೆ.ಟನ್‌ನಷ್ಟುಆಕ್ಸಿಜನ್‌ ಬಫರ್‌ ಸ್ಟಾಕ್‌ ಇದೆ. ಈ ಮಧ್ಯೆ, ಜೂ.1ರಂದು ಹೊರ ರಾಜ್ಯದ ಎರಡು ಕಂಪನಿಗಳು ಮಾತ್ರ ತಲಾ 120 ಮೆ.ಟನ್‌ ಆಕ್ಸಿಜನ್‌ ಸರಬರಾಜು ಮಾಡಿವೆ. ಜತೆಗೆ ಹೊರ ರಾಜ್ಯಗಳಿಂದ ರೈಲಿನಲ್ಲಿ ಬರುತ್ತಿರುವ ಆಕ್ಸಿಜನ್‌ ಬಳಸಿಕೊಂಡು ಸದ್ಯದ ಪರಿಸ್ಥಿತಿ ನಿರ್ವಹಿಸಲಾಗುತ್ತಿದೆ. ಸದ್ಯ ಉತ್ಪಾದನೆ ಕಡಿಮೆ ಮಾಡಿರುವ ರಾಜ್ಯದ ಕಂಪನಿಗಳು ಕೂಡಲೇ ಉತ್ಪಾದನೆ ಹೆಚ್ಚಿಸದಿದ್ದರೆ ಬಫರ್‌ ಸ್ಟಾಕ್‌ ಕೆಲ ದಿನಗಳಲ್ಲೇ ಖಾಲಿಯಾಗಲಿದೆ. ಇದರಿಂದ ಮತ್ತೆ ಆಕ್ಸಿಜನ್‌ ಸಮಸ್ಯೆ ಉದ್ಭವಿಸಲಿದೆ ಎಂದು ಸ್ವತಃ ಅಧಿಕಾರಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆ ಬೇಡಿಕೆ ಕಡಿಮೆಯಾಗಿಲ್ಲ:

ರಾಜ್ಯದಲ್ಲಿ ಕೋವಿಡ್‌ ಸೋಂಕು ಕಡಿಮೆಯಾದರೂ ಸಕ್ರಿಯ ಸೋಂಕಿತರಿಂದ ಐಸಿಯು ಮತ್ತು ಆಕ್ಸಿಜನ್‌ ಬೆಡ್‌ಗಳಲ್ಲಿ ಚಿಕಿತ್ಸೆ ತೆಗೆದುಕೊಳ್ಳೂವವರ ಸಂಖ್ಯೆಯಲ್ಲಿ ಅಷ್ಟೇನೂ ಕಡಿಮೆಯಾಗಿಲ್ಲ. ಜೂ.1ರ ವರದಿ ಪ್ರಕಾರ, ರಾಜ್ಯದ ಕೋವಿಡ್‌ ಆಸ್ಪತ್ರೆಗಳಿಂದ 729 ಮೆಟ್ರಿಕ್‌ ಟನ್‌ನಷ್ಟುಬೇಡಿಕೆ ಇದ್ದು ಅದನ್ನು ಬಫರ್‌ ಸ್ಟಾಕ್‌ ಮೂಲಕ ಹಂಚಿಕೆ ಮಾಡಲಾಗಿದೆ. ಒಟ್ಟು 1243 ಕೋವಿಡ್‌ ಆಸ್ಪತ್ರೆಗಳಿಂದ 94 ಸಾವಿರಕ್ಕೂ ಹೆಚ್ಚು ಹಾಸಿಗಳಿದ್ದು ಅವುಗಳಲ್ಲಿ 48 ಸಾವಿರಕ್ಕೂ ಹೆಚ್ಚು ಆಕ್ಸಿಜನ್‌ ವ್ಯವಸ್ಥೆಯ ಬೆಡ್‌ಗಳಿವೆ. ಬಹುತೇಕ ಹಾಸಿಗೆಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿ ಮೂಲಗಳು.

ಈಗೇಕೆ ಸಮಸ್ಯೆ?

- ರಾಜ್ಯದಲ್ಲಿ ಸೋಂಕು ಇಳಿದರೂ ಆಕ್ಸಿಜನ್‌ ಅವಲಂಬಿತರ ಪ್ರಮಾಣ ಇಳಿದಿಲ್ಲ

- 3 ದಿನಗಳಿಂದ ರಾಜ್ಯದಲ್ಲಿ ಆಕ್ಸಿಜನ್‌ ಉತ್ಪಾದನೆ ದಿಢೀರ್‌ ಇಳಿಕೆ

- ಹೊರ ರಾಜ್ಯದ 7 ಕಂಪನಿಗಳಿಂದ ಆಕ್ಸಿಜನ್‌ ಪೂರೈಕೆ ಸ್ಥಗಿತ

- ರಾಜ್ಯದಲ್ಲಿರುವ 250 ಟನ್‌ ಬಫರ್‌ ಸ್ಟಾಕ್‌ ಕೆಲ ದಿನಗಳಲ್ಲಿ ಮುಗಿಯುವ ಆತಂಕ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona