ಅತ್ಯಧಿಕ ಮಸೂದೆ  ಕರ್ನಾಟಕ ವಿಧಾನಸಭೆ ನಂ.1 ಸ್ಥಾನ ಪಡೆದಿದೆ.  ಕಳೆದ ವರ್ಷ ಕರ್ನಾಟಕದಲ್ಲಿ 48 ಮಸೂದೆ ಪಾಸ್‌ ಆಗಿವೆ.  2020ರಲ್ಲೂ 55 ಮಸೂದೆ ಪಾಸು ಮಾಡಿ ನಂ.1 ಆಗಿದ್ದ ರಾಜ್ಯ.  ಕೇವಲ 2 ಮಸೂದೆ ಪಾಸ್‌ ಮಾಡಿದ ದಿಲ್ಲಿಗೆ ಕೊನೆ ಸ್ಥಾನ

ನವದೆಹಲಿ (ಜು.1): ಅತಿ ಹೆಚ್ಚು ಮಸೂದೆಗಳನ್ನು ಅಂಗೀಕಾರ ಮಾಡಿದ ರಾಜ್ಯಗಳಲ್ಲಿ ಕರ್ನಾಟಕ ಸತತ 2ನೇ ಬಾರಿ ಮತ್ತೆ ದೇಶದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ ಕರ್ನಾಟಕದಲ್ಲಿ 48 ಮಸೂದೆಗಳನ್ನು ಅಂಗೀಕರಿಸಲಾಗಿದೆ. 2020ರಲ್ಲಿ ಕೂಡಾ 55 ಮಸೂದೆಗಳನ್ನು ಅಂಗೀಕರಿಸುವ ಮೂಲಕ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ‘ಪಿಆರ್‌ಎಸ್‌ ಲೆಜಿಸ್ಲೇಟಿವ್‌’ ಸಂಸ್ಥೆ ಬಿಡುಗಡೆಗೊಳಿಸಿರುವ ರಾಜ್ಯ ಕಾನೂನುಗಳ ವಾರ್ಷಿಕ ವಿಮರ್ಶೆ 2021ರ ಪ್ರಕಾರ, 2021ರಲ್ಲಿ ಎಲ್ಲ ರಾಜ್ಯಗಳ ಶಾಸನ ಸಭೆಗಳು ಒಟ್ಟಾರೆ ಸರಾಸರಿ ವಾರ್ಷಿಕ 21 ದಿನಗಳ ಕಾಲ ಕಲಾಪ ನಡೆಸಿದ್ದು, ಈ ಅವಧಿಯಲ್ಲಿ ಆನ್ಲೈನ್‌ ಗೇಮಿಂಗ್‌ ನಿರ್ಬಂಧ, ಮತಾಂತರ ಹಾಗೂ ಪಶು ರಕ್ಷಣೆ ಸೇರಿದಂತೆ 500ಕ್ಕೂ ಹೆಚ್ಚು ಮಸೂದೆಗಳನ್ನು ಅಂಗೀಕರಿಸಲಾಗಿದೆ. ಇದರಲ್ಲಿ 48 ಮಸೂದೆಗಳನ್ನು ಅಂಗೀಕರಿಸುವ ಮೂಲಕ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ. ಆದರೆ ಅತಿ ಕಡಿಮೆ ಮಸೂದೆಗಳನ್ನು ದೆಹಲಿ ಅಂಗೀಕರಿಸಿದ್ದು, ಇಡೀ ವರ್ಷದ ಅವಧಿಯಲ್ಲಿ ಕೇವಲ 2 ಮಸೂದೆಗಳು ಅಂಗೀಕಾರವಾಗಿವೆ. ಇದರೊಂದಿಗೆ ಪುದುಚೇರಿ (3), ಮಿಜೋರಂ (5) ಮಸೂದೆಯನ್ನು ಪಾಸ್‌ ಮಾಡಿದ್ದು ಕ್ರಮವಾಗಿ ಕೊನೆಯ 3 ಸ್ಥಾನದಲ್ಲಿರುವ ರಾಜ್ಯಗಳಾಗಿವೆ.

ಕಡಿಮೆ ಚರ್ಚೆಗೆ ಕಳವಳ: ಶಾಸನ ಸಭೆಗಳಲ್ಲಿ ಹಲವು ಮಸೂದೆಗಳನ್ನು ಅತಿ ಕಡಿಮೆ ಅವಧಿ ಚರ್ಚಿಸಲಾಗಿದ್ದು, ಬಹಳಷ್ಟುಮಸೂದೆಗಳು ಮಂಡನೆಯಾದ ದಿನವೇ ಅಂಗೀಕರಿಸಲ್ಪಟ್ಟಿವೆ ಎಂದು ಲೆಜಿಸ್ಲೇಟಿವ್‌ನ ಚಿಂತಕರ ಚಾವಡಿ ಕಳವಳ ವ್ಯಕ್ತಪಡಿಸಿದೆ.

2021ರಲ್ಲಿ ಶೇ. 44 ಮಸೂದೆಗಳನ್ನು ಮಂಡಿಸಿದ ದಿನವೇ ಅಂಗೀಕರಿಸಲಾಗಿದೆ. ಗುಜರಾತ್‌, ಪಶ್ಚಿಮ ಬಂಗಾಳ, ಪಂಜಾಬ್‌, ಬಿಹಾರ ಸೇರಿ 8 ರಾಜ್ಯಗಳಲ್ಲಿ ಮಸೂದೆ ಮಂಡಿಸಿದ ದಿನವೇ ಅಂಗೀಕಾರವಾಗುವ ಪ್ರಮಾಣ ಅತಿ ಹೆಚ್ಚಾಗಿದೆ. ಮಸೂದೆಯನ್ನು ಮಂಡಿಸಲಾದ 5 ದಿನಗಳಲ್ಲಿ ಶೇ.70ರಷ್ಟುಮಸೂದೆಗಳನ್ನು ಕರ್ನಾಟಕದ ಶಾಸನಸಭೆ ಆಂಗೀಕರಿಸಿದೆ. ಪಂಜಾಬ್‌ ಶಾಸನಸಭೆಯ ಕೊನೆಯ ದಿನದ ಕಲಾಪದಲ್ಲಿ 16 ಮಸೂದೆಗಳನ್ನು ಒಂದೇ ದಿನ ಅಂಗೀಕರಿಸಲಾಗಿತ್ತು ಎಂದು ಚಾವಡಿ ಹೇಳಿದೆ.

ರಾಜ್ಯ ಶಾಸಕಾಂಗಗಳು ಸಾಕಷ್ಟುಚರ್ಚೆ ನಡೆಸದೇ ಮಸೂದೆಗಳನ್ನು ಅಂಗೀಕರಿಸುತ್ತಿದ್ದು, ಇದರಿಂದ ಜಾರಿಗೆ ಬರುವ ಕಾನೂನುಗಳ ಗುಣಮಟ್ಟದ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ ಎಂದು ವರದಿಯಲ್ಲಿ ಕಳವಳ ವ್ಯಕ್ತವಾಗಿದೆ.

ಸಂಸತ್ತಿನಲ್ಲಿ ಇಂದಿನಿಂದ ಬೆಲೆ ಏರಿಕೆ ಚರ್ಚೆ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಉಭಯ ಸದನಗಳಲ್ಲಿ ಉಂಟಾಗಿದ್ದ 2 ವಾರದ ಬಿಕ್ಕಟ್ಟು ಸೋಮವಾರದಿಂದ ಶಮನಗೊಳ್ಳುವ ಸಾಧ್ಯತೆ ಇದೆ. ವಿಪಕ್ಷಗಳ ಪ್ರಮುಖ ಬೇಡಿಕೆಯಾಗಿದ್ದ ಬೆಲೆ ಏರಿಕೆಯ ಕುರಿತಾಗಿ ಸೋಮವಾರದಿಂದ ಚರ್ಚೆ ಆರಂಭವಾಗಲಿದೆ.

ಉದ್ಧವ್‌ ಠಾಕ್ರೆ ಬಣದಲ್ಲಿರುವ ಶಿವಸೇನೆಯ ಸಂಸದ ವಿನಾಯಕ್‌ ರಾವುತ್‌ ಮತ್ತು ಕಾಂಗ್ರೆಸ್‌ನ ಮನೀಶ್‌ ತಿವಾರಿ ಬೆಲೆ ಏರಿಕೆ ಚರ್ಚೆಯನ್ನು ಆರಂಭಿಸಲಿದ್ದಾರೆ. ಹಾಗಾಗಿ ಈ ವಾರದಿಂದ ಉಪಯುಕ್ತ ಚರ್ಚೆ ನಡೆಯಬಹುದು ಎಂದು ಭರವಸೆಯಿಡಲಾಗಿದೆ. ಸೋಮವಾರ ಲೋಕಸಭೆಯಲ್ಲಿ ಮತ್ತು ಮಂಗಳವಾರ ರಾಜ್ಯಸಭೆಯಲ್ಲಿ ಬೆಲೆ ಏರಿಕೆ ಕುರಿತಾದ ಚರ್ಚೆ ನಡೆಯಲಿದೆ.

Monsoon Session: ಲೋಕಸಭೆ-ರಾಜ್ಯಸಭೆಯಲ್ಲಿ ಮುಂದುವರಿದ ಹೈಡ್ರಾಮಾ, ಕಲಾಪ ಮುಂದೂಡಿಕೆ!

ಕಾಂಗ್ರೆಸ್‌ನಿಂದ ಅಗ್ನಿಪಥ ಚರ್ಚೆ ಬೇಡಿಕೆ: ಸೈನ್ಯಕ್ಕೆ ಸೇರ್ಪಡೆಯಾಗುವುದಕ್ಕಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ನೂತನ ಯೋಜನೆಯಾಗಿರುವ ಅಗ್ನಿಪಥ ಯೋಜನೆಯ ಕುರಿತಾಗಿ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್‌ ಬೇಡಿಕೆ ಇಡುವ ಸಾಧ್ಯತೆ ಇದೆ. ಈ ಯೋಜನೆ ಘೋಷಣೆಯಾದ ಬಳಿಕ ದೇಶಾದ್ಯಂತ ಹಲವು ಹಿಂಸಾಚಾರ ಘಟನೆಗಳು ನಡೆದಿದ್ದವು. ಆದರೆ ವಿಷಯ ಕೋರ್ಟಲ್ಲಿರುವ ಕಾರಣ ಸರ್ಕಾರ ಇದಕ್ಕೆ ಒಪ್ಪುವುದು ಅನುಮಾನ.

4ನೇ ದಿನವೂ ಸಂಸತ್‌ ಕಲಾಪಕ್ಕೆ ವಿಪಕ್ಷಗಳ ಅಡ್ಡಿ: ಬೆಲೆ ಏರಿಕೆ, ಜಿಎಸ್‌ಟಿ ಕುರಿತು ಪ್ರತಿಭಟನೆ

ರಾಜ್ಯಸಭೆಯ ಉತ್ಪಾದಕತೆ ಶೇ.16ಕ್ಕೆ ಕುಸಿತ: ಮುಂಗಾರು ಅಧಿವೇಶ ಆರಂಭದಿಂದಲೂ ಪ್ರತಿಭಟನೆಗೆ ಒಳಗಾಗಿರುವುದರಿಂದ 2ನೇ ವಾರದ ಅಂತ್ಯಕ್ಕೆ ರಾಜ್ಯಸಭೆಯ ಉತ್ಪಾದಕತೆ ಕೇವಲ ಶೇ.16ರಷ್ಟಿದೆ. ಅಲ್ಲದೇ ರಾಜ್ಯಸಭೆಯಲ್ಲಿ ಯಾವುದೇ ಮಸೂದೆಗಳು ಅಂಗೀಕಾರ ಪಡೆದುಕೊಂಡಿಲ್ಲ. 10 ದಿನಗಳಲ್ಲಿ ರಾಜ್ಯಸಭೆಯ ಕಲಾಪ ಕೇವಲ 11 ಗಂಟೆ 8 ನಿಮಿಷಗಳ ಕಾಲ ಮಾತ್ರ ನಡೆದಿದೆ. ಇದನ್ನು ಪ್ರಜಾಪ್ರಭುತ್ವದ ವಿನಾಶ ಎಂದು ಕರೆದಿರುವ ಸಭಾಧ್ಯಕ್ಷ ವೆಂಕಯ್ಯನಾಯ್ಡು ಬೇಸರ ವ್ಯಕ್ತಪಡಿಸಿದ್ದಾರೆ.