ಉಪ ಚುನಾವಣೆ ಫಲಿತಾಂಶ: 11 ಗಂಟೆಗೆ ಚಿತ್ರಣ
ಯಡಿಯೂರಪ್ಪ ನೇತೃತ್ವದ ಸರಕಾರದ ಭವಿಷ್ಯ ಬರೆಯಲಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದ್ದು, ಮಧ್ಯಾಹ್ನ 12ರ ಸುಮಾರಿಗೆ ಬಹುತೇಕ ಸ್ಪಷ್ಟ ಚಿತ್ರಣ ಸಿಗಲಿದೆ. ಅನರ್ಹ ಶಾಸಕರನ್ನು ಜನರು ಹೇಗೆ ಸ್ವೀಕರಿಸುತ್ತಾರೆಂಬ ಕಾರಣಕ್ಕೆ ಈ ಚುನಾವಣೆ ಫತಿತಾಂಸ ಮಹತ್ವ ಪಡೆದುಕೊಂಡಿದೆ.
ಬೆಂಗಳೂರು (ಡಿ.9): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅಸ್ತಿತ್ವವನ್ನು ಮತ್ತು ಅನರ್ಹ ಶಾಸಕರ ಭವಿಷ್ಯವನ್ನು ನಿರ್ಧರಿಸಬಲ್ಲ ಚುನಾವಣೆ ಎಂದೇ ಕರೆಯಲ್ಪಡುವ ರಾಜ್ಯದ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಸೋಮವಾರ ಹೊರಬೀಳಲಿದೆ.
ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್.ಪೇಟೆ ಮತ್ತು ಹುಣಸೂರು ಕ್ಷೇತ್ರದಲ್ಲಿ ಕಳೆದ ಗುರುವಾರ ಮತದಾನ ನಡೆದಿದೆ. ಈ ಹದಿನೈದು ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು.
ಸೋಮವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, 11 ಗಂಟೆ ಹೊತ್ತಿಗೆ ಆಯಾ ಕ್ಷೇತ್ರಗಳಲ್ಲಿ ಯಾರು ಗೆಲ್ಲಬಲ್ಲರು ಎಂಬುದರ ಮಾಹಿತಿ ಹೊರಬೀಳಲಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಅಧಿಕೃತ ಚಿತ್ರಣ ಗೊತ್ತಾಗಲಿದೆ. ಹೀಗಾಗಿ, ಅನರ್ಹ ಶಾಸಕರಲ್ಲಿ ಆತಂಕ ಮತ್ತು ಕುತೂಹಲ ಹೆಚ್ಚಿದೆ.
ಒಟ್ಟು 165 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಈ ಪೈಕಿ 156 ಪುರುಷರು ಮತ್ತು 9 ಮಹಿಳೆಯರಿದ್ದಾರೆ. ಕಾಂಗ್ರೆಸ್ - 15, ಬಿಜೆಪಿ - 15, ಜೆಡಿಎಸ್ - 12, ಬಿಎಸ್‌ಪಿ - 2, ಎನ್‌ಸಿಪಿ - 1, ನೋಂದಾಯಿತ ಪಕ್ಷಗಳಿಂದ - 45, ಪಕ್ಷೇತರರು - 45 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಮತ ಎಣಿಕೆಯು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು, ಅದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಕೊನೆಯ ಕ್ಷಣದ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ.
ಅಥಣಿ, ಕಾಗವಾಡ ಮತ್ತು ಗೋಕಾಕ್ ಕ್ಷೇತ್ರಗಳ ಮತ ಎಣಿಕೆಯು ಬೆಳಗಾವಿಯ ಶ್ರೀವಾಸುದೇವ ಸೀತಾರಾಮ್ ಗೌರಮ್ ಭವನ, ಯಲ್ಲಾಪುರ ಕ್ಷೇತ್ರದ ಮತ ಎಣಿಕೆಯು ಶಿರಸಿಯ ಎಂಇಎಸ್ ವಾಣಿಜ್ಯ ಕಾಲೇಜು, ರಾಣೆಬೆನ್ನೂರು ಕ್ಷೇತ್ರದ ಮತ ಎಣೆಕೆಯು ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ವಿಜಯನಗರ ಕ್ಷೇತ್ರದ ಮತ ಎಣಿಕೆ ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್, ಚಿಕ್ಕಬಳ್ಳಾಪುರ ಕ್ಷೇತ್ರದ ಮತ ಎಣಿಕೆಯು ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆ.ಆರ್.ಪುರ ಕ್ಷೇತ್ರ ಮತ್ತು ಮಹಾಲಕ್ಷ್ಮೇ ಲೇಔಟ್ ಕ್ಷೇತ್ರದ ಮತ ಎಣಿಕೆಯು ವಿಠ್ಠಲಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಶಾಲೆಯಲ್ಲಿ ನಡೆಯಲಿದೆ.
ಇಲ್ಲಿದೆ ಉಪ ಚುನಾವಣೆ ಫಲಿತಾಂಶದ ಲೈವ್ ಅಪ್‌ಡೇಟ್ಸ್
ಯಶವಂತಪುರ ಕ್ಷೇತ್ರದ ಮತ ಎಣಿಕೆ ಆರ್.ವಿ.ಎಂಜಿನಿಯರಿಂಗ್ ಕಾಲೇಜು, ಶಿವಾಜಿನಗರ ಕ್ಷೇತ್ರದ ಮತ ಎಣಿಕೆ ಮೌಂಟ್ ಕಾರ್ಮೆಲ್ ಕಾಲೇಜು, ಹೊಸಕೋಟೆ ಕ್ಷೇತ್ರದ ಮತ ಎಣಿಕೆ ದೇವನಹಳ್ಳಿಯ ಆಕಾಶ್ ಅಂತಾರಾಷ್ಟ್ರೀಯ ಶಾಲೆ, ಕೆ.ಆರ್.ಪೇಟೆ ಕ್ಷೇತ್ರದ ಮತ ಎಣಿಕೆ ಮಂಡ್ಯದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮತ್ತು ಹುಣಸೂರು ಕ್ಷೇತ್ರದ ಮತ ಎಣಿಕೆ ಹುಣಸೂರಿನ ಡಿ.ದೇವರಾಜ ಅರಸು ಪದವಿ ಕಾಲೇಜಿನಲ್ಲಿ ಜರುಗಲಿದೆ.
ದೊಡ್ಡ ವಿಧಾನಸಭಾ ಕ್ಷೇತ್ರವಾದ ಯಶವಂತಪುರ ಕ್ಷೇತ್ರ ಹೊರತುಪಡಿಸಿ ಇನ್ನುಳಿದ ಎಲ್ಲ ಕ್ಷೇತ್ರಗಳ ಮತ ಎಣಿಕೆಗಾಗಿ 14 ಟೇಬಲ್‌ಗಳಲ್ಲಿ ನಡೆಯಲಿದೆ. ಯಶವಂತಪುರ ಕ್ಷೇತ್ರದ ಮತ ಎಣಿಕೆಗಾಗಿ 21 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ.
ಉಪ ಚುನಾವಣೆ ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ