ಕರ್ನಾಟಕ ಹೈಟೆಕ್ ಇಂಡಿಯಾದ ಎಂಜಿನ್: ಪ್ರಧಾನಿ ಮೋದಿ ಬಣ್ಣನೆ
ರಸ್ತೆ, ಸಾರಿಗೆ ಸೇರಿದಂತೆ ಮತ್ತಿತರರ ಮೂಲಸೌಕರ್ಯಗಳನ್ನು ಒದಗಿಸುವುದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತಿದೆ. ಹಳ್ಳಿ ಹಳ್ಳಿಗೆ ಅಂತರ್ಜಾಲ ಸಂಪರ್ಕ ಒದಗಿಸಿರುವುದರಿಂದ ಇಂದು ಭಾರತವೂ ಜಗತ್ತಿನ ಡಿಜಿಟಲ್ ಶಕ್ತಿಕೇಂದ್ರವಾಗಿ ಹೊರಹೊಮ್ಮಿದೆ.
ಧಾರವಾಡ (ಮಾ.13): ರಸ್ತೆ, ಸಾರಿಗೆ ಸೇರಿದಂತೆ ಮತ್ತಿತರರ ಮೂಲಸೌಕರ್ಯಗಳನ್ನು ಒದಗಿಸುವುದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತಿದೆ. ಹಳ್ಳಿ ಹಳ್ಳಿಗೆ ಅಂತರ್ಜಾಲ ಸಂಪರ್ಕ ಒದಗಿಸಿರುವುದರಿಂದ ಇಂದು ಭಾರತವೂ ಜಗತ್ತಿನ ಡಿಜಿಟಲ್ ಶಕ್ತಿಕೇಂದ್ರವಾಗಿ ಹೊರಹೊಮ್ಮಿದೆ. ಪಿಎಂ ಗತಿ ಶಕ್ತಿ ಮಾಸ್ಟರ್ ಪ್ಲ್ಯಾನ್ ಮೂಲಕ ಅಗತ್ಯ ಮೂಲಸೌಕರ್ಯ ಒದಗಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾನುವಾರ ಇಲ್ಲಿನ ಚಿಕ್ಕಮಲ್ಲಿಗವಾಡದಲ್ಲಿ ನಿರ್ಮಾಣವಾಗಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ನೂತನ ಕಟ್ಟಡ ಉದ್ಘಾಟಿಸಿ, ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ಕಿಕ್ಕಿರಿದು ತುಂಬಿದ್ದ ಜನಸ್ತೋಮವನ್ನು ಉದ್ದೇಶಿಸಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಾತನಾಡಿದ ಅವರು, ಕರ್ನಾಟಕದ ಅಭಿವೃದ್ಧಿ ಬಗ್ಗೆ ತಮ್ಮ ಕನಸುಗಳೇನು? ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಏನೆಲ್ಲ ಉಪಯೋಗವಾಗಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಅಲ್ಲದೇ, ನಿರಂತರ ಸೇವೆಯ ಮೂಲಕ ನಿಮ್ಮ ಋುಣವನ್ನು ತೀರಿಸುತ್ತೇನೆ ಎಂದು ವಾಗ್ದಾನ ಮಾಡಿದರು.
ನಮ್ಮಿಂದ ಶಂಕು, ನಮ್ಮಿಂದಲೇ ಉದ್ಘಾಟನೆ ಇದಕ್ಕೆ ಧಾರವಾಡ ಐಐಟಿಯೇ ಸಾಕ್ಷಿ: ಪ್ರಧಾನಿ ಮೋದಿ
ಹೈಟೆಕ್ ಇಂಡಿಯಾದ ಎಂಜಿನ್: ಕರ್ನಾಟಕ ಹೈಟೆಕ್ ಇಂಡಿಯಾದ ಎಂಜಿನ್ ಆಗಿದೆ ಎಂದು ಬಣ್ಣಿಸಿದ ಅವರು, ಡಬಲ್ ಎಂಜಿನ್ ಸರ್ಕಾರಕ್ಕೆ ಇಲ್ಲಿನ ಜನರ ಆಶೀರ್ವಾದ ಬಲ ತುಂಬಲಿದೆ. ಉತ್ತಮ ಶಿಕ್ಷಣವು ಪ್ರತಿಯೊಬ್ಬರಿಗೆ ದೊರಕಬೇಕಿದೆ. ಉತ್ತಮ ಶಿಕ್ಷಣ ಸಂಸ್ಥೆ ಆರಂಭಿಸಿದಷ್ಟುಉತ್ತಮ ಶಿಕ್ಷಣ ದೊರಕುವುದು ಸಾಧ್ಯವಾಗಲಿದೆ. ಆದ್ದರಿಂದ ಉತ್ತಮ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಸರ್ಕಾರ ಆದ್ಯತೆ ನೀಡಿದೆ. ದೇಶದಲ್ಲಿ ಕಳೆದ 9 ವರ್ಷಗಳಿಂದ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ. ಗ್ರಾಮೀಣ ರಸ್ತೆ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲು ಮಾರ್ಗಗಳ ವಿಸ್ತರಣೆ ಹಾಗೂ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ರಾಜ್ಯ ಹಾಗೂ ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿ 9 ವರ್ಷವಾಗಿದೆ ಎಂದು ನುಡಿದರು.
ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಮಂಡ್ಯ ಮತ್ತಿತರ ಕಡೆಗಳಲ್ಲಿ ರೋಡ್ ಶೋ ನಡೆಸಿದ್ದು ಅತ್ಯದ್ಭುತ ಅನುಭವ. ಕರ್ನಾಟಕದ ಜನತೆ ತೋರಿದ ಪ್ರೀತಿ, ವಿಶ್ವಾಸ, ಗೌರವ ಎಂದಿಗೂ ಮರೆಯಲು ಸಾಧ್ಯವಾಗಲ್ಲ. ಕರ್ನಾಟಕಕ್ಕೆ ಬಂದ ಪ್ರತಿ ಕ್ಷಣವೂ ನನಗೆ ಅದ್ಭುತ ನೆನಪು ಎಂದ ಅವರು, ಇಲ್ಲಿನ ಜನರ ಪ್ರೀತಿ ಮತ್ತು ಆಶೀರ್ವಾದವು ನನ್ನ ಮೇಲಿನ ದೊಡ್ಡ ಋುಣವಾಗಿದೆ. ನಿರಂತರ ಸೇವೆಯ ಮೂಲಕ ಕರ್ನಾಟಕ ಜನತೆಯ ಈ ಋುಣವನ್ನು ತೀರಿಸುತ್ತೇನೆ ಎಂದು ಭರವಸೆಯನ್ನು ನೀಡಿದರು.
ನಿರುದ್ಯೋಗ ನಿವಾರಣೆ ಸೇರಿದಂತೆ ಇತ್ಯಾದಿಗಳ ವಿಚಾರದಲ್ಲಿ ರಾಜ್ಯದೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದೇವೆ. ಡಬಲ್ ಎಂಜಿನ್ ಸರ್ಕಾರ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದು, ಹಳ್ಳಿ ಹಳ್ಳಿಗಳ ಸಮಗ್ರ ಪ್ರಗತಿಗೆ ಬದ್ಧವಾಗಿದೆ. ಪ್ರಗತಿಯ ಹೊಸ ಶಕೆಯು ಇಡಿ ರಾಜ್ಯದ ಪ್ರಗತಿಗೆ ಮುನ್ನುಡಿ ಬರೆಯಲಿದೆ ಎಂದರು. ಹುಬ್ಬಳ್ಳಿ-ಧಾರವಾಡದ ವಿಕಾಸ ಇಡೀ ಕರ್ನಾಟಕದ ಅಭಿವೃದ್ಧಿಯ ಭಾಗ. ಧಾರವಾಡ ಮಲೆನಾಡು, ಬಯಲುಸೀಮೆ ಎರಡೂ ಆಗಿದೆ. ಧಾರವಾಡ ಕರ್ನಾಟಕ ಹಾಗೂ ಭಾರತದ ಪ್ರತಿಬಿಂಬ ಎಂದರು.
ಲಂಡನ್ನಲ್ಲಿ ಭಾರತ ಟೀಕೆ 130 ಕೋಟಿ ಜನಕ್ಕೆ ಅವಮಾನ: ರಾಹುಲ್‌ಗೆ ಚಾಟಿ ಬೀಸಿದ ಪ್ರಧಾನಿ ಮೋದಿ
ಜಯದೇವ ಹೃದ್ರೋಗ ಆಸ್ಪತ್ರೆ ಆರಂಭದಿಂದ ಈ ಭಾಗದ ಜನರಿಗೆ ಉತ್ತಮ ಚಿಕಿತ್ಸೆ ಲಭಿಸಲಿದೆ. ಜಲಜೀವನ್ ಮಿಷನ್ ಯೋಜನೆ ಮೂಲಕ .1 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮಲಪ್ರಭಾ ನದಿಯ ನೀರನ್ನು ನಲ್ಲಿಗಳ ಮೂಲಕ ಮನೆ ಮನೆಗೆ ತಲುಪಲಿದೆ. ಯಾರೊಬ್ಬರು ಮೂಲಸೌಲಭ್ಯ ವಂಚಿತರಾಗಿ ಉಳಿಯಬಾರದು ಎಂಬುದು ನಮ್ಮ ಸಂಕಲ್ಪ ಎಂದ ಅವರು, ತುಪ್ಪರಿಹಳ್ಳದ ಯೋಜನೆ ಮೂಲಕ ಪ್ರವಾಹ ಹಾನಿ ತಪ್ಪಿಸಲಿದೆ ಎಂದರು.