ನಮ್ಮಿಂದ ಶಂಕು, ನಮ್ಮಿಂದಲೇ ಉದ್ಘಾಟನೆ ಇದಕ್ಕೆ ಧಾರವಾಡ ಐಐಟಿಯೇ ಸಾಕ್ಷಿ: ಪ್ರಧಾನಿ ಮೋದಿ
‘ಶಂಕುಸ್ಥಾಪನೆ ನೆರವೇರಿಸಿ, ಮರೆತು ಬಿಡುವ ಕಾಲ ಹೋಯಿತು. ನಾವೇ ಶಂಕುಸ್ಥಾಪನೆ ನೆರವೇರಿಸಿ, ನಾವೇ ಲೋಕಾರ್ಪಣೆ ಮಾಡುವುದು ನಮ್ಮ ಬದ್ಧತೆ. ಇದಕ್ಕೆ ಧಾರವಾಡ ಐಐಟಿಯೇ ಸಾಕ್ಷಿಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಧಾರವಾಡ (ಮಾ.13): ‘ಶಂಕುಸ್ಥಾಪನೆ ನೆರವೇರಿಸಿ, ಮರೆತು ಬಿಡುವ ಕಾಲ ಹೋಯಿತು. ನಾವೇ ಶಂಕುಸ್ಥಾಪನೆ ನೆರವೇರಿಸಿ, ನಾವೇ ಲೋಕಾರ್ಪಣೆ ಮಾಡುವುದು ನಮ್ಮ ಬದ್ಧತೆ. ಇದಕ್ಕೆ ಧಾರವಾಡ ಐಐಟಿಯೇ ಸಾಕ್ಷಿಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಲ್ಲಿನ ಚಿಕ್ಕಮಲ್ಲಿಗವಾಡದಲ್ಲಿ ನಿರ್ಮಾಣವಾಗಿರುವ ಐಐಟಿ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಐಐಟಿ, ಬಿಜೆಪಿ ಸರ್ಕಾರದ ಸಂಕಲ್ಪದ ಸಿದ್ಧಿಯಾಗಿದೆ. ಶಂಕುಸ್ಥಾಪನೆ ನೆರವೇರಿಸಿದ ನಾಲ್ಕು ವರ್ಷಗಳಿಂದ ಡಬಲ್ ಎಂಜಿನ್ ಸರ್ಕಾರ ಅದೇ ವೇಗದಲ್ಲಿ ನಡೆದಿದೆ. ಐಐಟಿಯ ಹೊಸ ಕ್ಯಾಂಪಸ್ ಧಾರವಾಡದ ಪರಿಚಯವನ್ನು ಮತ್ತಷ್ಟು ಬಲಗೊಳಿಸಲಿದೆ. ಕರ್ನಾಟಕದ ವಿಕಾಸದಲ್ಲಿ ಐಐಟಿ ಹೊಸ ಅಧ್ಯಾಯವಾಗಲಿದೆ ಎಂದರು.
ಕರ್ನಾಟಕ ‘ಹೈಟೆಕ್ ಇಂಡಿಯಾದ ಎಂಜಿನ್’. ಡಬಲ್ ಎಂಜಿನ್ ಸರ್ಕಾರಕ್ಕೆ ಇಲ್ಲಿನ ಜನರ ಆಶೀರ್ವಾದ ಬಲ ತುಂಬಲಿದೆ. ಕರ್ನಾಟಕದ ಜನತೆಯ ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಅಭಿವೃದ್ಧಿ ಮೂಲಕ ನಿಮ್ಮ ಋುಣವನ್ನು ತೀರಿಸುತ್ತೇನೆ ಎಂದರು. ಮೊದಲು ದೇಶದಲ್ಲಿ 380 ವೈದ್ಯಕೀಯ ಕಾಲೇಜ್‌ಗಳಿದ್ದವು. 9 ವರ್ಷದಲ್ಲಿ ಬರೋಬ್ಬರಿ 250 ವೈದ್ಯಕೀಯ ಕಾಲೇಜ್‌ಗಳನ್ನು ಸ್ಥಾಪಿಸಿದ್ದೇವೆ. ಇದೇ ರೀತಿ ಐಐಟಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ನಗರಗಳು ಅಭಿವೃದ್ಧಿಯ ತುತ್ತತುದಿಗೆ ತಲುಪಲಿವೆ ಎಂದರು.
ನಾನು ಬಡವರ ಬದುಕು ಕಟ್ಟುತ್ತಿದ್ದರೆ ಕಾಂಗ್ರೆಸ್ ನನ್ನ ಗೋರಿ ತೋಡುತ್ತಿತ್ತು: ಪ್ರಧಾನಿ ಮೋದಿ
ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ವಿಶ್ವದ ಅತಿ ದೊಡ್ಡ ಫ್ಲಾಟ್‌ಫಾರ್ಮ್ ನಿರ್ಮಿಸಿರುವುದು ಬರೀ ದಾಖಲೆಯಲ್ಲ. ಮೂಲಸೌಕರ್ಯ ಅಭಿವೃದ್ಧಿಗೆ ನಾವು ನೀಡುವ, ನೀಡುತ್ತಿರುವ ಆದ್ಯತೆಗೆ ಉದಾಹರಣೆ. ಹೊಸಪೇಟೆ- ತಿನೈಘಾಟ್ ರೈಲು ಮಾರ್ಗದ ವಿದ್ಯುದ್ದೀಕರಣದಿಂದ ತೈಲದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಪರಿಸರ ರಕ್ಷಣೆಗೂ ಸಹಕಾರಿಯಾಗಲಿದೆ. ಜಯದೇವ ಹೃದ್ರೋಗ ಆಸ್ಪತ್ರೆ ಆರಂಭದಿಂದ ಈ ಭಾಗದ ಜನರಿಗೆ ಉತ್ತಮ ಚಿಕಿತ್ಸೆ ಲಭಿಸಲಿದೆ. ಜಲಜೀವನ್ ಮಿಷನ್ ಯೋಜನೆ ಮೂಲಕ .1 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಮಲಪ್ರಭಾ ನದಿಯ ನೀರು ನಲ್ಲಿಗಳ ಮೂಲಕ ಮನೆ, ಮನೆಗೆ ತಲುಪಲಿದೆ. ಯಾರೊಬ್ಬರು ಮೂಲಸೌಲಭ್ಯ ವಂಚಿತರಾಗಿ ಉಳಿಯಬಾರದು ಎಂಬುದು ನಮ್ಮ ಸಂಕಲ್ಪ ಎಂದರು.
ಗಮನ ಸೆಳೆದ ಕಟೌಟ್: ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರದೊಂದಿಗೆ ವಿವಿಧ ಸರ್ಕಾರದ ಯೋಜನೆಗಳ ಮಾಹಿತಿಯೊಂದಿಗೆ ಸಿದ್ಧಪಡಿಸಿದ್ದ ಸುಮಾರು ಹತ್ತು ಅಡಿ ಎತ್ತರದ ಕಟೌಟ್‌ಗಳು ಜನರ ಗಮನ ಸೆಳೆದವು. ಸಾರ್ವಜನಿಕರು ಅವುಗಳ ಜತೆಗೆ ಸೆಲ್ಫಿ, ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು. ಕೆಲವರು ಮೋದಿ ಅವರ ಭಾವಚಿತ್ರಗಳನ್ನು ತರುವ ಮೂಲಕ ಅಭಿಮಾನ ಮೆರೆದರು.
ಲಂಡನ್ನಲ್ಲಿ ಭಾರತ ಟೀಕೆ 130 ಕೋಟಿ ಜನಕ್ಕೆ ಅವಮಾನ: ರಾಹುಲ್‌ಗೆ ಚಾಟಿ ಬೀಸಿದ ಪ್ರಧಾನಿ ಮೋದಿ
ಟಿ ಶರ್ಟ್‌ಗೆ ಮುಗಿಬಿದ್ದ ಜನ: ಐಐಟಿ ಉದ್ಘಾಟನೆಯ ವೇದಿಕೆ ಹೊರ ಆವರಣದಲ್ಲಿ ಯುವ ಜನತೆಗೆ ‘ನಮ್ಮ ಸಿಎಂ ನಮ್ಮ ಹೆಮ್ಮೆ’ ಎಂದು ಬರೆದಿದ್ದ ಟಿ ಶರ್ಟ್‌ಗಳನ್ನು ನೀಡಲಾಗುತ್ತಿತ್ತು. ಶರ್ಟ್ ಪಡೆಯಲು ಯುವಕರು ನೂರಾರು ಸಂಖ್ಯೆಯಲ್ಲಿ ಮುಗಿಬಿದ್ದಿದ್ದರಿಂದ ಕೆಲ ಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಶರ್ಟ್ ಹಂಚಿಕೆ ಸ್ಥಗಿತಗೊಳಿಸಿ ಗದ್ದಲಕ್ಕೆ ತೆರೆ ಎಳೆಯಲಾಯಿತು. ಲಾರಿಯೊಂದರಲ್ಲಿ ತಂದು ಮೇಲಿನಿಂದ ಎಸೆಯಲಾಗುತ್ತಿತ್ತು. ಸಿಕ್ಕವರು ಅದನ್ನು ಎತ್ತಿಕೊಂಡು ಹೋದರು. ಕೆಲವರಿಗೆ ಎರಡ್ಮೂರು ಸಿಕ್ಕವು. ಇನ್ನು ಕೆಲವರು ಪಡೆಯಲು ಪರದಾಡಿದರು. ಕೆಲವರು ಲಾರಿ ಹತ್ತಿ ಅದನ್ನು ಪಡೆಯಲು ಯತ್ನಿಸದ್ದೂ ಉಂಟು.