ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರಿಗೆ ಶಾಲಾ ಶಿಕ್ಷಣ ಇಲಾಖೆಯು ಋತುಚಕ್ರ ರಜೆ ಸೌಲಭ್ಯವನ್ನು ಅಧಿಕೃತವಾಗಿ ಘೋಷಿಸಿದೆ. ಈ ಆದೇಶದ ಅನ್ವಯ, 18 ರಿಂದ 52 ವರ್ಷ ವಯಸ್ಸಿನ ಶಿಕ್ಷಕಿಯರು ಪ್ರತಿ ತಿಂಗಳು ಒಂದು ದಿನದ ರಜೆಯನ್ನು  ಪಡೆಯಬಹುದಾಗಿದೆ.

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರಿಗೆ ಋತುಚಕ್ರ ರಜೆ ನೀಡಲು ಶಾಲಾ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಮಹಿಳಾ ಸರ್ಕಾರಿ ನೌಕರರ ಆರೋಗ್ಯ ಹಾಗೂ ಗೌರವವನ್ನು ಗಮನದಲ್ಲಿಟ್ಟುಕೊಂಡು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ಅವರು ಈ ಸಂಬಂಧ ಅಧಿಕೃತ ಆದೇಶಕ್ಕೆ ಸಹಿ ಹಾಕಿದ್ದು, ಸರ್ಕಾರಿ ಶಾಲಾ ಶಿಕ್ಷಕಿಯರಿಗೆ ತಿಂಗಳಿಗೆ ಒಮ್ಮೆ ಋತುಚಕ್ರ ರಜೆ ಪಡೆಯುವ ಸೌಲಭ್ಯ ಒದಗಿಸಲಾಗಿದೆ.

ಋತುಚಕ್ರ ರಜೆಯನ್ನು ಸಂಬಂಧಿಸಿದ ತಿಂಗಳಲ್ಲಿಯೇ ಪಡೆಯಬೇಕು

ಆದೇಶದ ಪ್ರಮುಖ ಅಂಶಗಳ ಪ್ರಕಾರ, ಋತುಚಕ್ರ ರಜೆಯನ್ನು ಸಂಬಂಧಿಸಿದ ತಿಂಗಳಲ್ಲಿಯೇ ಪಡೆಯಬೇಕು. ಹಿಂದಿನ ತಿಂಗಳ ಋತುಚಕ್ರ ರಜೆಯನ್ನು ಮುಂದಿನ ತಿಂಗಳಿಗೆ ವರ್ಗಾಯಿಸುವುದಕ್ಕೆ ಅಥವಾ ಸಂಗ್ರಹಿಸಿ ಬಳಸಿಕೊಳ್ಳುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

18 ವರ್ಷದಿಂದ 52 ವರ್ಷ ವಯಸ್ಸಿನೊಳಗಿನ ಮಹಿಳಾ ಶಿಕ್ಷಕಿಯರಿಗೆ ಅನ್ವಯ

ಈ ಋತುಚಕ್ರ ರಜೆ ಸೌಲಭ್ಯವು 18 ವರ್ಷದಿಂದ 52 ವರ್ಷ ವಯಸ್ಸಿನೊಳಗಿನ ಮಹಿಳಾ ಶಿಕ್ಷಕಿಯರಿಗೆ ಅನ್ವಯವಾಗಲಿದೆ. ಅಲ್ಲದೆ, ಋತುಚಕ್ರ ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಹಿಳಾ ಶಿಕ್ಷಕಿಯರ ಆರೋಗ್ಯ ಸಮಸ್ಯೆಗಳನ್ನು ಮನಗಂಡು, ಕೆಲಸದ ಒತ್ತಡದಿಂದ ವಿಶ್ರಾಂತಿ ಪಡೆಯಲು ಮತ್ತು ಮಾನಸಿಕ-ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ.

ಶಾಲಾ ಶಿಕ್ಷಣ ಇಲಾಖೆಯ ಈ ನಿರ್ಧಾರವನ್ನು ಮಹಿಳಾ ಶಿಕ್ಷಕಿಯರು ಸ್ವಾಗತಿಸಿದ್ದು, ಇದು ಮಹಿಳಾ ಸ್ನೇಹಿ ಆಡಳಿತದ ಮಹತ್ವದ ಹೆಜ್ಜೆ ಎಂದು ಶ್ಲಾಘಿಸಿದ್ದಾರೆ. ರಾಜ್ಯದ ಸರ್ಕಾರಿ ಶಾಲಾ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಮಹಿಳಾ ಶಿಕ್ಷಕಿಯರಿಗೆ ಈ ಆದೇಶ ನೇರ ಪ್ರಯೋಜನ ನೀಡಲಿದೆ.